ಚಿಕ್ಕಬಳ್ಳಾಪುರ: ಬಡವರು, ಮಧ್ಯಮವರ್ಗದ ಜನರಿಗೆ ಅನುಕೂಲ ಆಗಲಿ ಎನ್ನುವ ಉದ್ದೇಶದಿಂದ ನಿತ್ಯ ಬಳಕೆಯ ಕೆಲವು ವಸ್ತುಗಳ ಮೇಲೆ ಶೇ 28ರಷ್ಟಿದ್ದ ಜಿಎಸ್‌ಟಿಯನ್ನು ಶೇ 5ಕ್ಕೆ ಇಳಿಸಿದ್ದೇವೆ. ಇದನ್ನು ಸ್ವಾಗತಿಸುವುದನ್ನು ಬಿಟ್ಟು ರಾಜ್ಯ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಸಂಸದ ಡಾ.ಕೆ.ಸುಧಾಕರ್ ಟೀಕಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಜನಸಾಮಾನ್ಯರು, ಬಡವರ ಬಗ್ಗೆ ಕಳಕಳಿ ಇಲ್ಲ. ಜಿಎಸ್‌ಟಿ ಕಡಿತ ಮಾಡಿದಾಗ ಸ್ವಾಗತ ಮಾಡಬೇಕು. ಇದರ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದರೆ ಅವರು ಬಡವರ ವಿರೋಧಿಗಳು ಎಂದರು.
ಜಿಎಸ್‌ಟಿ ಕಡಿತದಿಂದ ರಾಜ್ಯ ಸರ್ಕಾರಕ್ಕೆ ಆದಾಯ ಕಡಿಮೆ ಆಗುತ್ತದೆ ಎನ್ನುತ್ತಾರೆ. ಕಡಿತದಿಂದ ವಹಿವಾಟು ಹೆಚ್ಚುತ್ತದೆ. ಸಚಿವ ಕೃಷ್ಣ ಬೈರೇಗೌಡ ಅರ್ಥಶಾಸ್ತ್ರದ ಸಾಮಾನ್ಯ ಜ್ಞಾನವಿಲ್ಲದ ರೀತಿಯಲ್ಲಿ ಮಾತನಾಡುತ್ತಾರೆ. ಒಂದು ಕಾರಿನ ಬೆಲೆ ₹ 10 ಲಕ್ಷವಿದ್ದು ₹ 1 ಲಕ್ಷ ಕಡಿಮೆ ಆದರೆ ಗ್ರಾಹಕರು ಮುಂದಿನ ವರ್ಷದವರೆಗೂ ಕಾಯದೇ ಈಗಲೇ ಖರೀದಿಸುತ್ತಾರೆ. ವಹಿವಾಟು ಹೆಚ್ಚಿದರೆ ಆದಾಯ ಬರುತ್ತದೆ ಎಂದು ಹೇಳಿದರು.
14, 15ನೇ ಸ್ಥಾನದಲ್ಲಿದ್ದ ದೇಶದ ಆರ್ಥಿಕ ಸ್ಥಾನವನ್ನು ನರೇಂದ್ರ ಮೋದಿ ಅವರ ಆಡಳಿತವು ನಾಲ್ಕನೇ ಸ್ಥಾನಕ್ಕೆ ತಂದಿದೆ. ಕಾಂಗ್ರೆಸ್‌ನವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಾರೆ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.