
ಗುಡಿಬಂಡೆ: ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಪೌರ ಕಾರ್ಮಿಕರು ಸುರಕ್ಷತಾ ಕವಚಗಳನ್ನು ಧರಿಸದೆ ಚರಂಡಿಗಳನ್ನು ಸ್ವಚ್ಛ ಮಾಡುತ್ತಿದ್ದಾರೆ. ಪೌರ ಕಾರ್ಮಿಕರಿಗೆ ಪಟ್ಟಣ ಪಂಚಾಯಿತಿ ಸುರಕ್ಷತಾ ಕವಚಗಳನ್ನು ಒದಗಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಅನೇಕ ವಿವಿಧ ವಾರ್ಡ್‌ಗಳಲ್ಲಿ ಚರಂಡಿ ಸೇರಿ ಇನ್ನಿತರ ಸ್ಥಳಗಳನ್ನು ಶುಚಿಯಾಗಿಡುವ ಪೌರಕಾರ್ಮಿಕರ ಕೈ ಮತ್ತು ಕಾಲುಗಳಿಗೆ ಧರಿಸಲು ಸುರಕ್ಷತಾ ಕವಚಗಳನ್ನು ವಿತರಿಸಿಲ್ಲ. ಹೀಗಾಗಿ, ಪೌರಕಾರ್ಮಿಕರು ಬರಿಗೈಯಲ್ಲೇ ಚರಂಡಿಗಳನ್ನು ಶುಚಿ ಮಾಡುತ್ತಿದ್ದಾರೆ.
‘ಚರಂಡಿ ಮತ್ತು ಬೀದಿಗಳನ್ನು ಸ್ವಚ್ಛ ಮಾಡಲು ಸುರಕ್ಷತಾ ಸಲಕರಣೆಗಳನ್ನು ನೀಡಿ ಎಂದು ಅಧಿಕಾರಿಗಳ ಬಳಿ ಕೇಳಿದ್ದೇವೆ. ಆದರೆ, ಅಧಿಕಾರಿಗಳು ಸರಿಯಾದ ಸಮಯಕ್ಕೆ ಸುರಕ್ಷತಾ ಕವಚಗಳನ್ನು ನೀಡದೆ ಸತಾಯಿಸುತ್ತಿದ್ದಾರೆ. ಈ ಬಗ್ಗೆ ನಾವು ಧ್ವನಿಯೆತ್ತಿದ್ದರು ತೊಂದರೆ ಕೊಡುತ್ತಾರೆ’ ಎಂದು ಕೆಲವು ಪೌರಕಾರ್ಮಿಕರು ದೂರಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಚಿಕ್ಕಬಳ್ಳಾಪುರ ಜಿಲ್ಲಾ ಯೋಜನಾ ನಿರ್ದೇಶಕ ಮಂಜುನಾಥ್, ‘ಪೌರ ಕಾರ್ಮಿಕರು ಸ್ವಚ್ಛತೆ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಸುರಕ್ಷತಾ ಸಲಕರಣೆಗಳನ್ನು ಬಳಸಬೇಕು. ಸುರಕ್ಷತಾ ಸಲಕರಣೆ ಇಲ್ಲದೆ ಕಾರ್ಮಿಕರನ್ನು ಸ್ವಚ್ಛತಾ ಕಾಮಗಾರಿಯಲ್ಲಿ ತೊಡಗಿಸುವುದು ಅಪರಾಧ. ಈ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.