ADVERTISEMENT

ಗುಡಿಬಂಡೆ: ಜೋರಾದ ಚಿಮುಲ್ ಚುನಾವಣಾ ಕಾವು

ಚಿಮುಲ್; ಕಾಂಗ್ರೆಸ್, ಎನ್‌ಡಿಎ ಅಭ್ಯರ್ಥಿ ನಡುವೆ ಸೆಣಸಾಟ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 6:26 IST
Last Updated 28 ಜನವರಿ 2026, 6:26 IST
<div class="paragraphs"><p>ಚುನಾವಣೆ(ಸಾಂದರ್ಭಿಕ ಚಿತ್ರ)</p></div>

ಚುನಾವಣೆ(ಸಾಂದರ್ಭಿಕ ಚಿತ್ರ)

   

ಗುಡಿಬಂಡೆ:ಈ ಹಿಂದೆ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಕೋಚಿಮುಲ್) ಅಸ್ತಿತ್ವಲ್ಲಿದ್ದಾಗ ಗುಡಿಬಂಡೆ ತಾಲ್ಲೂಕಿಗೆ ಒಂದು ನಿರ್ದೇಶಕ ಸ್ಥಾನ ಮಿಸಲಿಡಲಾಗಿತ್ತು. ಆದರೆ ಕೋಚಿಮುಲ್‌ನಿಂದ ಚಿಮುಲ್ ಬೇರ್ಪಟ್ಟ ನಂತರ ಕ್ಷೇತ್ರ ಮರು ವಿಂಗಡಣೆ ಆಗಿದೆ.

ಗುಡಿಬಂಡೆ ತಾಲ್ಲೂಕಿಗೆ ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ, ಎಸ್.ದೇವಗಾನಹಳ್ಳಿ, ದಿಬ್ಬೂರಹಳ್ಳಿ ಪಂಚಾಯಿತಿ ವ್ಯಾಪ್ತಿಯ 20 ಸಂಘಗಳು ಒಳಪಟ್ಟಿವೆ. ಗುಡಿಬಂಡೆ ತಾಲ್ಲೂಕಿನ 51 ಮತದಾರರ ಜೊತೆ ಶಿಡ್ಲಘಟ್ಟ ತಾಲ್ಲೂಕಿನ 20 ಮತದಾರರನ್ನು ಸೇರಿಸಿ ಕ್ಷೇತ್ರ ರೂಪಿಸಲಾಗಿದೆ. ಇದರಿಂದಾಗಿ ಪ್ರಸ್ತುತ ಗುಡಿಬಂಡೆ ಕ್ಷೇತ್ರದಲ್ಲಿ 71 ಮತದಾರರು ಇದ್ದಾರೆ.

ADVERTISEMENT

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮತ್ತು ಬಿಜೆಪಿ, ಜೆಡಿಎಸ್ ಮೈತ್ರಿಕೂಟದ ಬೆಂಬಲಿತ ಅಭ್ಯರ್ಥಿ ನಡುವೆ ಚಿಮುಲ್ ಕಣವಿದೆ. ಈ ಇಬ್ಬರು ಅಭ್ಯರ್ಥಿಗಳ ನಡುವೆ ಘಮ್ಮತ್ತಿನಿಂದ ಸ್ಪರ್ಧೆ ನಡೆದಿದೆ. 

ಈ ಹಿಂದೆ ನಡೆದ ಕೋಚಿಮುಲ್ ನಿರ್ದೇಶಕ ಚುನಾವಣೆಯಲ್ಲಿ ಆದಿನಾರಾಯಣರೆಡ್ಡಿ ಮತ್ತು ಬೈರಾರೆಡ್ಡಿ ಸ್ಪರ್ದಿಸಿದ್ದರು. ಆದಿನಾರಾಯಣರೆಡ್ಡಿ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಆದಿನಾರಾಯಣರೆಡ್ಡಿ ಆಗ‌ ಸಿಪಿಎಂನಲ್ಲಿದ್ದರು. ಬದಲಾದ ಸನ್ನಿವೇಶದಲ್ಲಿ ಅವರು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಅವರೇ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದು, ಮತ್ತೊಮ್ಮೆ ಗೆಲುವಿನ ಉತ್ಸಾಹದಲ್ಲಿ ಇದ್ದಾರೆ.

ಕಳೆದ ಚುನಾವಣೆಯಲ್ಲಿ ಆದಿನಾರಾಯಣರೆಡ್ಡಿ ವಿರುದ್ಧ ಸೋಲು ಅನುಭವಿಸಿದ್ದ ಬೈರಾರೆಡ್ಡಿ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದಾರೆ. ಈ ಹಿಂದಿನ ಸೋಲಿನ ಸೇಡು ತೀರಿಸಿಕೊಳ್ಳಲು ಹುರುಪಿನಿಂದ ಚುನಾವಣಾ ಪ್ರಚಾರ ನಡೆಸಿದ್ದಾರೆ.

ಶಿಡ್ಲಘಟ್ಟ ತಾಲ್ಲೂಕಿನ ಡಿಲಿಗೇಟ್‌ಗಳ ಮತಗಳನ್ನು ಪಡೆಯಲು ಅಭ್ಯರ್ಥಿಗಳು ಕಸರತ್ತು ಮಾಡುತ್ತಿದ್ದಾರೆ. ಶಿಡ್ಲಘಟ್ಟ ಶಾಸಕ ಬಿ.ಎನ್. ರವಿಕುಮಾರ್ ಅವರೊಟ್ಟಿಗೆ ಬೈರಾರೆಡ್ಡಿ ನಾಮಪತ್ರ ಸಲ್ಲಿಸಿದ್ದಾರೆ. ಆದಿನಾರಾಯಣರೆಡ್ಡಿ, ಬಾಗೇಪಲ್ಲಿ ಶಾಸಕ ಎಸ್.ಎನ್ ಸುಬಾರೆಡ್ಡಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಸಭೆ ನಡೆಸುತ್ತಿದ್ದಾರೆ. ಶಾಸಕ ಎಸ್.ಎನ್ ಸುಬಾರೆಡ್ಡಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.

ಸಂಸದ ಡಾ.ಕೆ.ಸುಧಾಕರ್ ಗೆ ಪ್ರತಿಷ್ಠೆ: ಸಂಸದ ಡಾ.ಕೆ.ಸುಧಾಕರ್ ಬೈರಾರೆಡ್ಡಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವಲ್ಲಿ ಪ್ರಮುಖ ತೀರ್ಮಾನ ಕೈಗೊಂಡಿದ್ದರು. ಅವರನ್ನು ಗೆಲ್ಲಿಸಬೇಕು ಎನ್ನುವ ಛಲದಲ್ಲಿ ಅಡಿ ಇಟ್ಟಿದ್ದಾರೆ. ಈಗಾಗಲೇ ಪೆರೇಸಂದ್ರದಲ್ಲಿ ಸಭೆಯನ್ನೂ ನಡೆಸಿದ್ದಾರೆ.

ಹೀಗೆ ಗುಡಿಬಂಡೆ ಕ್ಷೇತ್ರದಲ್ಲಿ ಚಿಮುಲ್ ಚುನಾವಣೆಯ ಕಾವು ಹೆಚ್ಚಿದೆ. ಡೆಲಿಗೇಟ್‌ಗಳಿಗೆ ಉಡುಗೊರೆಗಳನ್ನು ನೀಡಿ ಸೆಳೆಯುವ ಕೆಲಸವೂ ಆಗುತ್ತಿದೆ ಎನ್ನುವ
ಮಾತುಗಳಿವೆ. 

ಬೈರಾರೆಡ್ಡಿ

ಆದಿನಾರಾಯಣರೆಡ್ಡಿ

ಅಭಿವೃದ್ಧಿ ಮಾಡಿದ್ದೇನೆ

ನಿರ್ದೇಶನಾಗಿ ಆಯ್ಕೆಯಾಗಿದ್ದ ವೇಳೆ ಅನೇಕ ಡೇರಿಗಳನ್ನು ಅಭಿವೃದ್ಧಿ ಮಾಡಿದ್ದೇನೆ. ಹೊಸ ಡೇರಿಗಳನ್ನು ಮಾಡಿಸಿದ್ದೇನೆ. ರೈತರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ತಲುಪಿಸಿದ್ದೇನೆ. ಡೇರಿಗಳಿಗೆ ಕಟ್ಟಡಗಳನ್ನು ಕಟ್ಟಿಸಿಕೊಟ್ಟಿದೇನೆ. ಶಿಬಿರ ಕಚೇರಿಗೆ ನಾಲ್ಕು ಸ್ವಂತ ಕಟ್ಟಡ ಕಟ್ಟಿಸಿದ್ದೇನೆ. ಮತ್ತಷ್ಟು ಅಭಿವೃದ್ಧಿ ಮಾಡುವುದೇ ನನ್ನ ಕನಸು.

–ಆದಿನಾರಾಯಣರೆಡ್ಡಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ

ಸಂಸದರ ಬೆಂಬಲವಿದೆ

ತಾಲ್ಲೂಕು ಪಂಚಾಯಿತಿಯ ಮೂಲಕ ರಾಜಕೀಯ ಆರಂಭಿಸಿದ್ದೇನೆ. ಕಳೆದ ಬಾರಿ ಕೋಚಿಮುಲ್ ನಿರ್ದೇಶಕನಾಗಬೇಕಿತ್ತು. ಕೆಲವೇ ಮತಗಳಿಂದ ಸೋತಿದ್ದೆ. ಆದರೆ ಈ ಬಾರಿ ಎನ್.ಡಿ.ಎ ಅಭ್ಯರ್ಥಿಯಾಗಿ ಕಣದಲ್ಲಿದ್ದೇನೆ. ಸಂಸದ ಡಾ.ಕೆ. ಸುಧಾಕರ್ ಅವರ ಆಶೀರ್ವಾದ ಇದೆ. ಜೊತೆಗೆ ಕ್ಷೇತ್ರದ ಮತದಾರರು ಮತ ನೀಡುವ ಮುಖಾಂತರ ಜಯಶೀಲರನ್ನಾಗಿ ಮಾಡುತ್ತಾರೆ ಎನ್ನುವ ವಿಶ್ವಾಸ ಇದೆ.

–ಬೈರಾರೆಡ್ಡಿ, ಮೈತ್ರಿಕೂಟ ಬೆಂಬಲಿತ ಅಭ್ಯರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.