ADVERTISEMENT

ಪಡಿತರ ನೀಡುವ ವಿಚಾರದಲ್ಲಿ ಪರಿಶಿಷ್ಟ ಸಮುದಾಯದ ಮಹಿಳೆ ಮೇಲೆ ದೌರ್ಜನ್ಯ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 12:50 IST
Last Updated 17 ಅಕ್ಟೋಬರ್ 2021, 12:50 IST
ಗುಡಿಬಂಡೆ ತಾಲ್ಲೂಕಿನ ಕಾಟೇನಹಳ್ಳಿಗೆ ಸಚಿವ ಡಾ.ಕೆ.ಸುಧಾಕರ್ ಭೇಟಿ ನೀಡಿದ್ದರು
ಗುಡಿಬಂಡೆ ತಾಲ್ಲೂಕಿನ ಕಾಟೇನಹಳ್ಳಿಗೆ ಸಚಿವ ಡಾ.ಕೆ.ಸುಧಾಕರ್ ಭೇಟಿ ನೀಡಿದ್ದರು   

ಗುಡಿಬಂಡೆ:ಪಡಿತರ ನೀಡುವ ವಿಚಾರದಲ್ಲಿ ಪರಿಶಿಷ್ಟ ಸಮುದಾಯದ ಮಹಿಳೆ ಮೇಲೆ ದೌರ್ಜನ್ಯ ನಡೆಸಿದ ಆರೋಪದ ಮೇಲೆ ತಾಲ್ಲೂಕಿನ ಕಾಟೇನಹಳ್ಳಿಯಲ್ಲಿ ಪದ್ಮಾವತಮ್ಮ ಎಂಬುವವರು ನಡೆಸುತ್ತಿದ್ದ ಪಡಿತರ ವಿತರಣೆ ಅಂಗಡಿಯ ಪರವಾನಗಿಯನ್ನು ಭಾನುವಾರ ರದ್ದುಗೊಳಿಸಲಾಗಿದೆ.

ಪರಿಶಿಷ್ಟ ಸಮುದಾಯದ ನಾರಾಯಣಮ್ಮ ಅವರು ಪಡಿತರವನ್ನು ಪಡೆಯಲು ಹೋಗಿದ್ದರು. ಈ ವೇಳೆ ಪದ್ಮಾವತಮ್ಮ, ನಾರಾಯಣಮ್ಮ ಅವರನ್ನು ಜಾತಿನಿಂದನೆ ಮಾಡಿ, ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ನಾರಾಯಣಮ್ಮ ಅವರ ಪುತ್ರ ಆಕ್ರೋಶ ವ್ಯಕ್ತಪಡಿಸಿ ವಿಡಿಯೊ ಸಹ ಮಾಡಿದ್ದರು. ಆ ವಿಡಿಯೊ ವೈರಲ್ ಆಗಿತ್ತು. ಈ ವಿಚಾರ ಜಿಲ್ಲಾಡಳಿತದ ಗಮನಕ್ಕೆ ಬಂದಿತ್ತು.

ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ಜಿಲ್ಲಾಧಿಕಾರಿ ಆರ್.ಲತಾ ಹಾಗೂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದರು. ಸಚಿವರು ನಾರಾಯಣಮ್ಮ ಅವರಿಂದ ಮಾಹಿತಿ ಪಡೆದರು.

ADVERTISEMENT

ನಂತರ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ‘ಹಲ್ಲೆ ನಡೆಸಿದ ಪದ್ಮಾವತಮ್ಮನ ಮೇಲೆ ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆಕೆ ತಲೆಮರೆಸಿಕೊಂಡಿದ್ದಾರೆ. ಪದ್ಮಾವತಮ್ಮ ತಾಯಿ ನಾಗರತ್ನಮ್ಮ ಅವರ ಹೆಸರಿನಲ್ಲಿ ಪಡಿತರ ವಿತರಣೆಯ ಅಂಗಡಿ ಇದ್ದು ಆ ಪರವಾನಗಿಯನ್ನು ರದ್ದುಗೊಳಿಸಲಾಗಿದೆ’ ಎಂದು ಹೇಳಿದರು.

ಇಂತಹ ಘಟನೆಗಳು ಮರುಕಳಿಸದಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ₹ 50 ಸಾವಿರ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.