ADVERTISEMENT

ಬಾಗೇಪಲ್ಲಿ ಪುರಸಭೆ: ಗುಲ್ನಾಜ್ ಅಧ್ಯಕ್ಷೆ, ಶ್ರೀನಿವಾಸ್ ಉಪಾಧ್ಯಕ್ಷ

ಬಾಗೇಪಲ್ಲಿ ಪುರಸಭೆಗೆ ಅವಿರೋಧ ಆಯ್ಕೆ; ಕಾಂಗ್ರೆಸ್‌ ಬಹುಮತಕ್ಕೇ ಮನ್ನಣೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 16:37 IST
Last Updated 6 ನವೆಂಬರ್ 2020, 16:37 IST
ಬಾಗೇಪಲ್ಲಿ ಪುರಸಭೆ ಅಧ್ಯಕ್ಷರಾಗಿ ಗುಲ್ನಾಜ್ ಬೇಗಂ, ಉಪಾಧ್ಯಕ್ಷರಾಗಿ ಎ.ಶ್ರೀನಿವಾಸ್ ಅವರನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಭಿನಂದಿಸಿದರು
ಬಾಗೇಪಲ್ಲಿ ಪುರಸಭೆ ಅಧ್ಯಕ್ಷರಾಗಿ ಗುಲ್ನಾಜ್ ಬೇಗಂ, ಉಪಾಧ್ಯಕ್ಷರಾಗಿ ಎ.ಶ್ರೀನಿವಾಸ್ ಅವರನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಭಿನಂದಿಸಿದರು   

ಬಾಗೇಪಲ್ಲಿ: ಪುರಸಭಾ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಪುರಸಭೆ ಅಧ್ಯಕ್ಷೆಯಾಗಿ ಕಾಂಗ್ರೆಸ್ ಗುಲ್ನಾಜ್ ಬೇಗಂ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ಎ.ಶ್ರೀನಿವಾಸ್ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ನಾಗರಾಜು ಘೋಷಿಸಿದರು.

ಪುರಸಭಾ ಅಧ್ಯಕ್ಷ ಸ್ಥಾನ ಬಿಸಿಎಂ ಎ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. 23 ಸದಸ್ಯರ ಪೈಕಿ ಕಾಂಗ್ರೆಸ್-13, ಜೆಡಿಎಸ್-1, ಸಿಪಿಎಂ-2 ಹಾಗೂ ಪಕ್ಷೇತರರು-7 ಮಂದಿ ಇದ್ದಾರೆ. ಇದರಲ್ಲಿ 13 ಸದಸ್ಯರ ಬಲವಿರುವ ಕಾಂಗ್ರೆಸ್ ಪುರಸಭಾ ಅಧಿಕಾರದ ಚುಕ್ಕಾಣಿ ಹಿಡಿಯಿತು.

ಪುರಸಭಾ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ 14ನೇ ವಾರ್ಡ್‌ನ ಗುಲ್ನಾಜ್ ಬೇಗಂ, ಉಪಾಧ್ಯಕ್ಷ ಸ್ಥಾನಕ್ಕೆ ಎ.ಶ್ರೀನಿವಾಸ್ ನಾಮಪತ್ರಗಳನ್ನು ಸಲ್ಲಿಸಿದರು. ಶುಕ್ರವಾರ ಮಧ್ಯಾಹ್ನ 12 ಗಂಟೆವರೆಗೂ ಅನ್ಯ ಪಕ್ಷ ಹಾಗೂ ಪಕ್ಷೇತರರು ನಾಮಪತ್ರವನ್ನು ಸಲ್ಲಿಸಲಿಲ್ಲ. ಇದರಿಂದ ಪುರಸಭಾ ಅಧ್ಯಕ್ಷೆ ಗುಲ್ನಾಜ್ ಬೇಗಂ, ಉಪಾಧ್ಯಕ್ಷರಾಗಿ ಎ.ಶ್ರೀನಿವಾಸ್ ರವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ನಾಗರಾಜು ಘೋಷಿಸಿದರು. ಸಹಾಯಕ ಚುನಾವಣಾಧಿಕಾರಿಯಾಗಿ ಪಂಕಜಾರೆಡ್ಡಿ ಕಾರ್ಯನಿರ್ವಹಿಸಿದರು.

ADVERTISEMENT

3ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯ ಎ.ನರಸಿಂಹಮೂರ್ತಿ ಗೈರಾಗಿದ್ದರು. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಕಾಂಗ್ರೆಸ್‌ನ 12 ಮಂದಿ ಸೇರಿದಂತೆ ಪಕ್ಷೇತರರಾದ ಗಡ್ಡಂರಮೇಶ್, ಮಧುಸೂದನರೆಡ್ಡಿ, ನಿಸಾರ್, ನೂರುಲ್ಲಾ, ರೇಷ್ಮಾಬಾನು ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಬೆಂಬಲಿಸಿದರು. ಸಿಪಿಎಂನ ವನೀತಾದೇವಿ, ಸರೋಜಮ್ಮ, ಪಕ್ಷೇತರರಾದ ಸುಶೀಲಾ, ಜೆಡಿಎಸ್ ಸದಸ್ಯೆ ಸುಜಾತನಾಯ್ಡು ಹಾಜರಿರಲ್ಲ. ಸಂಸದ ಬಿ.ಎನ್.ಬಚ್ಚೇಗೌಡ ಬಂದಿರಲಿಲ್ಲ.

ಸಿಪಿಎಂನ ಸದಸ್ಯೆ ವನೀತಾದೇವಿ ಅಧ್ಯಕ್ಷ ಸ್ಥಾನಕ್ಕೆ ಖಚಿತವಾಗಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಕೊನೆಗಳಿಗೆಯಲ್ಲಿ ಬದಲಾದ ರಾಜಕೀಯ ಹೈಡ್ರಾಮದಿಂದ ಚುನಾವಣೆಗೇ ಅವರು ಗೈರಾಗಿದ್ದರು.

‘ಕಾಂಗ್ರೆಸ್‌ ಬಹುಮತ ಇರುವುದರಿಂದ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿದಿದೆ. 23 ಮಂದಿ ಚುನಾಯಿತ ಸದಸ್ಯರು ಸಹ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡಬೇಕು. ಮುಖ್ಯವಾಗಿ ಪಟ್ಟಣದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಮೂಲ ಸೌಲಭ್ಯಗಳನ್ನು ಕಲ್ಪಿಸಲು ತಮ್ಮ ಸಹಕಾರ ಎಂದಿಗೂ ಇರುತ್ತದೆ’ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

‘ಮೊದಲ ಬಾರಿಗೆ ಸದಸ್ಯರಾಗಿ ಆಯ್ಕೆಯಾದ ನಂತರದಲ್ಲಿಯೇ ನನಗೆ ಅಧ್ಯಕ್ಷ ಸ್ಥಾನವನ್ನು ಕಲ್ಪಿಸಿರುವ ಕೆಪಿಸಿಸಿಗೂ, ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಮುಖಂಡರಿಗೂ, ಸದಸ್ಯರಿಗೂ ಆಭಾರಿಯಾಗಿದ್ದೇನೆ. ಪಟ್ಟಣದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿಯಾಗಿದೆ. ಸದಸ್ಯರ, ಅಧಿಕಾರಿಗಳ ಜೊತೆಗೂಡಿ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸುತ್ತೇನೆ’ ಎಂದು ನೂತನ ಪುರಸಭೆ ಅಧ್ಯಕ್ಷೆ ಗುಲ್ನಾಜ್ ಬೇಗಂ ತಿಳಿಸಿದರು.

ಇತಿಹಾಸ ಸೃಷ್ಟಿ: ಪಟ್ಟಣ ಪಂಚಾಯಿತಿಯಾಗಿ ನಂತರ ಇದೀಗ ಪುರಸಭೆಯಾಗಿದೆ. ಪಟ್ಟಣ ಪಂಚಾಯಿತಿ, ಪುರಸಭೆಯ 30 ವರ್ಷಗಳ ಕಾಲದ ಇತಿಹಾಸದಲ್ಲಿಯೇ ಮೊದಲ ಬಾರಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದೆ. ಪ್ರತಿ ಬಾರಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.