ಚಿಕ್ಕಬಳ್ಳಾಪುರ: ಬಾಗೇಪಲ್ಲಿಯ ಜೀವನಾಡಿ ಚಿತ್ರಾವತಿ ಜಲಾಶಯಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಹೆಸರು ಇಡಬಾರದು. ಮಾಜಿ ಶಾಸಕ ಜಿ.ವಿ ಶ್ರೀರಾಮರೆಡ್ಡಿ ಅವರ ಹೆಸರು ಇಡಬೇಕು ಎಂದು ಆಗ್ರಹಿಸಿ ಚಿತ್ರಾವತಿ ಹೋರಾಟ ಸಮಿತಿಯು ಬಾಗೇಪಲ್ಲಿಯಿಂದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದವರೆಗೆ ಸೋಮವಾರ ಬೈಕ್ ರ‍್ಯಾಲಿ ನಡೆಸಿತು.
ಚಿತ್ರಾವತಿ ಹೋರಾಟ ಸಮಿತಿ, ಸಿಪಿಎಂ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.
ಎಸ್.ಎಂ.ಕೃಷ್ಣ ಹೆಸರು ಇಡುವುದಾಗಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಘೋಷಿಸಿದ್ದಾರೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಉಸ್ತುವಾರಿ ಸಚಿವರು ತಿಳಿಸಿದ್ದಾರೆ. ಎಸ್.ಎನ್.ಸುಬ್ಬಾರೆಡ್ಡಿ ಇದನ್ನು ಸಮರ್ಥಿಸಿದ್ದಾರೆ. ಚಿತ್ರಾವತಿ ಜಲಾಶಯಕ್ಕೆ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಅವರ ಹೆಸರನ್ನೇ ಇಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಹೋರಾಟ ಮಾಡಿರುವವರ ಹೆಸರು ಬಿಟ್ಟು ಎಸ್.ಎಂ.ಕೃಷ್ಣ ಹೆಸರು ಇಡಲು ಹೊರಟ್ಟಿದ್ದಾರೆ. ಜಲಾಶಯಕ್ಕೆ, ಬಾಗೇಪಲ್ಲಿ ಜನರಿಗೆ ಎಸ್.ಎಂ.ಕೃಷ್ಣ ಕೊಡುಗೆ ಶೂನ್ಯ. ಬಾಗೇಪಲ್ಲಿ ಜನರ ಭಾವನಾತ್ಮಕ ಸಂಬಂಧ ಎಸ್.ಎಂ.ಕೃಷ್ಣ ಅವರ ಜೊತೆ ಇಲ್ಲ. ಹೀಗಿದ್ದರೂ ಸಚಿವರು ಮತ್ತು ಶಾಸಕರು ರಾಜಕೀಯ ಮಾಡುತ್ತಿದ್ದಾರೆ. ಈ ನಿಲುವು ಕೈ ಬಿಡಬೇಕು ಎಂದು ಆಗ್ರಹಿಸಿದರು.
ಚಿತ್ರಾವತಿ ಎಂಬ ಹೆಸರೇ ಬಾಗೇಪಲ್ಲಿ ಹಾಗೂ ಗುಡಿಬಂಡೆ ತಾಲ್ಲೂಕು ಜನರ ಭಾವನಾತ್ಮಕ ಬೆಸುಗೆ. ಜನರ ಹೋರಾಟದಿಂದ ಜಲಾಶಯ ನಿರ್ಮಾಣವಾಗಿದೆ. ಜಲಾಶಯ ಯಾವುದೇ ಸರ್ಕಾರದ ಕೊಡುಗೆಯಲ್ಲ. ಜಿ.ವಿ.ಶ್ರೀ.ರಾಮರೆಡ್ಡಿ ನೇತೃತ್ವದಲ್ಲಿ ನಡೆದ ಹೋರಾಟದಿಂದ ಜಲಾಶಯ ನಿರ್ಮಾಣವಾಗಿದೆ ಎಂದರು.
ಸಿಪಿಎಂ ರಾಜ್ಯ ಸಮಿತಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ, ಕೃಷಿಕೂಲಿಕಾರರ ಸಂಘದ ಲಕ್ಷ್ಮಿನಾರಾಯಣರೆಡ್ಡಿ, ಡಾ.ಅನಿಲ್‌ಕುಮಾರ್, ಬಿ.ಎನ್.ಮುನಿಕೃಷ್ಣಪ್ಪ, ಚನ್ನರಾಯಪ್ಪ, ರಮಣ, ಶಿವಪ್ಪ, ಬೈರಾರೆಡ್ಡಿ, ದೇವರಾಜ್, ಕೃಷ್ಣಪ್ಪ, ರಾಜಪ್ಪ, ನಾಗರಾಜ್, ರಘುರಾಮರೆಡ್ಡಿ, ಮುನಿಯಪ್ಪ, ಈಶ್ವರರೆಡ್ಡಿ, ರಮಾಮಣಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.