ADVERTISEMENT

ಬಿಜೆಪಿ ಜನರಿಗೆ ಟೊಳ್ಳು ಭರವಸೆ ನೀಡಿಲ್ಲ

ಆರೋಗ್ಯ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 5:52 IST
Last Updated 28 ಮಾರ್ಚ್ 2023, 5:52 IST

ಚಿಕ್ಕಬಳ್ಳಾಪುರ: ಬಿಜೆಪಿಯು ಜನರಿಗೆ ಯಾವುದೇ ಟೊಳ್ಳು ಭರವಸೆಗಳನ್ನು ನೀಡಿಲ್ಲ. ಬಿಜೆಪಿಯ ಡಬಲ್‌ ಎಂಜಿನ್‌ ಸರ್ಕಾರದಿಂದ ನಂದಿ ಮೆಡಿಕಲ್‌ ಕಾಲೇಜು ಸೇರಿದಂತೆ ಅನೇಕ ಅಭಿವೃದ್ಧಿಗಳು ನಡೆಯುತ್ತಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ನಗರದ ಹೊರವಲಯದ ಸೂಲಾಲಪ್ಪದಿನ್ನೆಯಲ್ಲಿ ನಡೆದ ವಿವಿಧ ಆರೋಗ್ಯ ಯೋಜನೆಗಳಿಗೆ ಚಾಲನೆ ಹಾಗೂ ನಂದಿ ವೈದ್ಯಕೀಯ ಶಿಕ್ಷಣ ಕಾಲೇಜು ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇರುವುದರಿಂದ ಹೆಚ್ಚು ಅನುದಾನ ಬರುತ್ತಿದೆ. ಇದರಿಂದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಿದೆ. ಡಬಲ್‌ ಎಂಜಿನ್‌ ಸರ್ಕಾರದಿಂದ ರಾಜ್ಯಕ್ಕೆ ದೊಡ್ಡ ಅಭಿವೃದ್ಧಿಯ ಸ್ಪರ್ಶ ದೊರೆತಿದೆ. ರೈತರ ಮಕ್ಕಳು ಸೇರಿದಂತೆ 11 ಲಕ್ಷ ಮಕ್ಕಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿದ್ಯಾನಿಧಿ ನೀಡಿದ್ದಾರೆ ಎಂದು ಹೇಳಿದರು.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಶೌಚಾಲಯದ ಬಗ್ಗೆ ಮಾತನಾಡಿದಾಗ ‘ಏನು ಮಹಾ’ ಎಂದು ಹಲವರು ಟೀಕಿಸಿದ್ದರು. ಆದರೆ 11 ಕೋಟಿ ಶೌಚಾಲಯಗಳನ್ನು ನಿರ್ಮಿಸಿ ಮಹಿಳೆಯರ ಘನತೆ ಎತ್ತಿ ಹಿಡಿಯಲಾಗಿದೆ. ಮಹಿಳೆಯರಿಗೆ ಉಚಿತ ಗ್ಯಾಸ್‌ ಸಂಪರ್ಕ ನೀಡಿ ಅವರ ಕಷ್ಟ ತಪ್ಪಿಸಲಾಗಿದೆ ಎಂದರು.

ಪ್ರತಿ ಕನ್ನಡಿಗರ ದೃಷ್ಟಿ ಸಮಸ್ಯೆ ಬಗೆಹರಿಸಲು ಉಚಿತ ಶಸ್ತ್ರಚಿಕಿತ್ಸೆ ಹಾಗೂ ಕನ್ನಡಕ ವಿತರಣೆ ಮಾಡಲು ₹ 360 ಕೋಟಿ ಮೊತ್ತದ ‘ದೃಷ್ಟಿ ಯೋಜನೆ’ ಜಾರಿಗೊಳಿಸಲಾಗಿದೆ. ಈ ಸರ್ಕಾರ ಪ್ರಜೆಗಳ ಸರ್ಕಾರ. ಯಾವುದೇ ಟೊಳ್ಳು ಭರವಸೆಗಳನ್ನು ಬಿಜೆಪಿ ನೀಡಿಲ್ಲ. ಭರವಸೆಯಲ್ಲಿ ಇಲ್ಲದ ಹೊಸ ಯೋಜನೆಗಳನ್ನು ಕೂಡ ನೀಡಲಾಗಿದೆ. ಹಿಂದೆ ನೀರಾವರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು ಎತ್ತಿನಹೊಳೆ ಯೋಜನೆ ರೂಪಿಸಿದ್ದು ಅನೇಕರಿಗೆ ಗೊತ್ತೇ ಇಲ್ಲ. ಈ ಭಾಗದ ಜನರಿಗೆ ಕುಡಿಯುವ ನೀರು ನೀಡಲು ಇಂತಹ ಮಹತ್ವದ ಯೋಜನೆ ನೀಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.