ಚಿಕ್ಕಬಳ್ಳಾಪುರ: ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಮಧುಸೂದನ ಸಾಯಿ ಆರೋಗ್ಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಇತ್ತೀಚೆಗೆ ‘ಯುವ ಹೃದಯ ಉಳಿಸಿ’ ವಿಚಾರಗೋಷ್ಠಿ ನಡೆಯಿತು.
ಯುವಜನರಲ್ಲಿ ಹೃದಯಾಘಾತದ ಸಂಭವನೀಯತೆಯನ್ನು ಮುಂಚಿತವಾಗಿ ಪತ್ತೆಹಚ್ಚಿ, ಅಪಾಯ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಲು ವಿಚಾರಗೋಷ್ಠಿ ಜರುಗಿತು.
ಹೃದ್ರೋಗ ತಜ್ಞರು, ಯುವ ಆರೋಗ್ಯ ವೃತ್ತಿಪರರು, ಶಿಕ್ಷಣ ತಜ್ಞರು, ಜೀವನಶೈಲಿ ಪರಿಣತರು, ತಂತ್ರಜ್ಞಾನ ಕ್ಷೇತ್ರದ ಕಾರ್ಯನಿರತರು, ಸಂಶೋಧಕರು, ಕಾರ್ಪೊರೇಟ್ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಮಾನವ ಸಂಪನ್ಮೂಲ ವಿಭಾಗಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಉದ್ಯೋಗಿಗಳ ಆರೋಗ್ಯ ಕಾಪಾಡಲು ಯಾವ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಬಗ್ಗೆ ಸಮಾಲೋಚಿಸಿದರು.
ಯುವಜನರಲ್ಲಿ ಹೃದಯಘಾತದ ಅಪಾಯ ತಡೆಗಟ್ಟುವುದು ಗೋಷ್ಠಿಯ ಪ್ರಮುಖ ಆಶಯವಾಗಿತ್ತು. ಹೃದಯದ ಆರೋಗ್ಯದ ಮೇಲೆ ಆಹಾರ ಪದ್ಧತಿ ಮತ್ತು ಜೀವನಶೈಲಿ ಹೇಗೆ ಪರಿಣಾಮ ಬೀರುತ್ತದೆ? ಭಾವನೆಗಳು ಮತ್ತು ಒತ್ತಡಗಳನ್ನು ನಿರ್ವಹಿಸುವುದು ಹೇಗೆ ಎನ್ನುವ ಬಗ್ಗೆಯೂ ಮಂಥನ ನಡೆಯಿತು. ತುರ್ತು ಸಂದರ್ಭಗಳಲ್ಲಿ ರೋಗಿಗಳ ಜೀವ ಉಳಿಸಲು ಮಾಡುವ ಸಿಪಿಆರ್ ಕ್ರಿಯೆಯ ತರಬೇತಿಗೆ ಒತ್ತು ನೀಡಬೇಕು. ಹೃದಯದ ಆರೋಗ್ಯ ತಪಾಸಣೆ, ಹೃದ್ರೋಗಿಗಳಿಗೆ ಉಚಿತ ಚಿಕಿತ್ಸೆ ಸಿಗುವುದರ ಮಹತ್ವದ ಬಗ್ಗೆ ಗೋಷ್ಠಿಯಲ್ಲಿ ಚರ್ಚೆ ನಡೆಯಿತು.
ಮಧುಸೂದನ್ ಸಾಯಿ ಆರೋಗ್ಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ರಕ್ತನಾಳಗಳ ಶಸ್ತ್ರಚಿಕಿತ್ಸಕ ಹಾಗೂ ‘ಯುವ ಹೃದಯಗಳನ್ನು ಉಳಿಸಿ ಪ್ರತಿಷ್ಠಾನ’ದ ಸ್ಥಾಪಕ ಡಾ ಆನಂದ್ ಅಗರ್‌ವಾಲ್ ಮಾತನಾಡಿ, ಯುವಜನರಲ್ಲಿ ಹೃದಯದ ಸಮಸ್ಯೆಗಳು ಹೆಚ್ಚಾಗುತ್ತಿದೆ. ಭಾವನಾತ್ಮಕ ಒತ್ತಡದಿಂದ ಯುವಜನರಲ್ಲಿ ರಕ್ತನಾಳಗಳ ಉರಿಯೂತ ಹೆಚ್ಚಾಗುತ್ತಿದೆ. ಇದರಿಂದ ಸುಗಮ ರಕ್ತಸಂಚಾರಕ್ಕೆ ತಡೆ ಉಂಟಾಗುತ್ತಿದೆ ಎಂದರು.
ನಿದ್ರೆಯ ಕೊರತೆ, ಅನಿಯಮಿತ ಆಹಾರ ಪದ್ಧತಿ ಮತ್ತು ಸೂರ್ಯನ ಬೆಳಕಿಗೆ ಮೈ ಒಡ್ಡದಿರುವುದು ಯುವಜನರ ಹೃದಯದ ಮೇಲೆ ದುಷ್ಪರಿಣಾಮ ಉಂಟುಮಾಡುತ್ತಿವೆ ಎಂದರು.
ಐಎಪಿಎಸ್‌ಎಂ ಕರ್ನಾಟಕ ಘಟಕದ ಅಧ್ಯಕ್ಷ ಡಾ. ಅಣ್ಣಾರಾವ್ ಕುಲಕರ್ಣಿ ಮಾತನಾಡಿ, ‘ಈ ಸಮ್ಮೇಳನಗಳು ಕೇವಲ ಪ್ರಸ್ತುತವಷ್ಟೇ ಅಲ್ಲ, ಅತ್ಯಗತ್ಯ. ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಯೋಗವು ಈ ದಿಸೆಯಲ್ಲಿ ಪ್ರಮುಖವಾಗುತ್ತದೆ ಎಂದರು.
ಸಾನ್ನಿಧ್ಯವಹಿಸಿದ್ದ ಸದ್ಗುರು ಮಧುಸೂದನ ಸಾಯಿ ಅವರು ಮಾತನಾಡಿ, ಹೃದಯದ ಕಾಯಿಲೆಗಳಿಂದ ಜನರ ಆರ್ಥಿಕ ಹೊರೆ ಹೆಚ್ಚುತ್ತದೆ. ಜನರ ಕೈಗೆಟುಕುವ ದರದಲ್ಲಿ ರೋಗ ತಡೆಗಟ್ಟಲು ನೆರವಾಗುವ ಆರೋಗ್ಯ ವ್ಯವಸ್ಥೆ ಅತ್ಯಗತ್ಯ ಎಂದು ಪ್ರತಿಪಾದಿಸಿದರು.
ತಂತ್ರಜ್ಞಾನ ಮತ್ತು ಸಮುದಾಯ ಆಧರಿತ ಕ್ಲಿನಿಕ್‌ಗಳು ತುರ್ತಾಗಿ ಆರಂಭವಾಗಬೇಕಿವೆ. ಇಂಥ ಕ್ಲಿನಿಕ್‌ಗಳಲ್ಲಿ ರೋಗಪತ್ತೆ ಮತ್ತು ಔಷಧಿಗಳು ಉಚಿತವಾಗಿ ದೊರೆಯಬೇಕು ಎಂದು ಆಶಿಸಿದರು.
ಹೃದ್ರೋಗ ಮತ್ತು ಕಸಿ ಶಸ್ತ್ರಚಿಕಿತ್ಸಕ ಡಾ.ಬಾಲಕೃಷ್ಣನ್, ಸತ್ಯಸಾಯಿ ಲೋಕ ಸೇವಾ ಗುರುಕುಲ ಸಮೂಹ ಸಂಸ್ಥೆಗಳ ಮುಖ್ಯ ಮಾರ್ಗದರ್ಶಕ ಬಿ.ಎನ್.ನರಸಿಂಹಮೂರ್ತಿ, ಮಧುಸೂದನ್ ಸಾಯಿ ಆರೋಗ್ಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ರಘುಪತಿ ಎ.ಆರ್ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.