ಚೇಳೂರು: ಪಟ್ಟಣದಲ್ಲಿ ಗುರುವಾರ ಧಾರಾಕಾರ ಮಳೆಯಾಗಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಎರಡು ಗಂಟೆ ಮಳೆ ಸುರಿಯಿತು. ಕಂದುಕೂರು ರಸ್ತೆಯ ತುಂಬೆಲ್ಲ ನೀರು ನಿಂತಿದೆ. ಇನ್ನೂ ಕೆಲವು ಬಡಾವಣೆಯ ನೂರಾರು ಮನೆಗಳಿಗೆ ಒಳ ಚರಂಡಿ ನೀರು ನುಗ್ಗಿದೆ.
ಚೇಳೂರು ತಾಲ್ಲೂಕು ಕೇಂದ್ರ ಎನಿಸಿದರೂ ಸೂಕ್ತ ಸೌಲಭ್ಯಗಳು ಇಲ್ಲ. ಕೆಲವು ಬೀದಿಗಳಿಗೆ ಇನ್ನೂ ಮೂಲ ಸೌಲಭ್ಯಗಳು ಕಲ್ಪಿಸಿಲ್ಲ. ಚರಂಡಿಗಳೂ ಇಲ್ಲ. ಸ್ವಲ್ಪ ಮಳೆ ಬಂದರೆ ಸಾಕು ಕೆಲವು ಕಡೆ ಚರಂಡಿ ನೀರು ಮನೆಯೊಳಗೆ ನುಗ್ಗುತ್ತದೆ.
ಕಂದುಕೂರು ರಸ್ತೆ ಬದಿಯ ನಿವಾಸಿಗಳು ಮೂಲ ಸೌಲಭ್ಯ ಕಲ್ಪಿಸಿ ಎಂದು ಅಧಿಕಾರಿಗಳಿಗೆ ಮನವಿ ಮಾಡುತ್ತಲೇ ಇದ್ದಾರೆ. ಗಾಣಿಗರ ಬೀದಿ, ಮುಸ್ಲಿಂ ಬಜಾರ್, ಮತ್ತಿತರ ಬಡವಾಣೆಗಳಲ್ಲಿ ಸ್ವಲ್ಪ ಮಳೆ ಬಂದರೆ ಪರಿಸ್ಥಿತಿ ಅಧ್ವಾನ ಆಗುತ್ತದೆ.
ಕಟ್ಟಿಕೊಡಿರುವ ಕೇವಲ ತಾಲ್ಲೂಕು ಎಂಬ ಹೆಸರಿಗೆ ಮಾತ್ರ ಸೀಮಿತವಾಗಿ ಇಲ್ಲಿ ಮೂಲ ಸೌಲಭ್ಯಗಳನ್ನು ಸಹ ಒದಗಿಸದೇ ಇರುವ ದೌರ್ಬಲ್ಯ ಎದ್ದು ಕಾಣುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ರಸ್ತೆಯಲ್ಲಿಯೇ ಚರಂಡಿ ನೀರು ಹರಿಯುವುದರಿಂದ ಸೊಳ್ಳೆಗಳು ಹೆಚ್ಚಿವೆ ಎನ್ನುತ್ತಾರೆ ಗ್ರಾಮಸ್ಥರಾದ ಸ್ನೇಹಾ.
ಬಡಾವಣೆಯಲ್ಲಿ ರಸ್ತೆ, ಒಳಚರಂಡಿ ಸಂಪೂರ್ಣ ಹಾಳಾಗಿವೆ. ಅವುಗಳ ಪುನರ್ ನಿರ್ಮಾಣ ಅಗತ್ಯವಾಗಿದೆ. ಹಲವು ವರ್ಷಗಳಿಂದ ಒಳಚರಂಡಿಯನ್ನು ಸ್ವಚ್ಛಗೊಳಿಸಿಲ್ಲ. ಹೀಗಾಗಿ ಸರಾಗವಾಗಿ ನೀರು ಹೋಗಲು ಜಾಗವಿಲ್ಲ. ಏಕಾಏಕಿ ದೊಡ್ಡ ಪ್ರಮಾಣದಲ್ಲಿ ಮಳೆ ಬಿದ್ದ ಪರಿಣಾಮ ನೀರು ಚರಂಡಿಯಲ್ಲಿ ಹೋಗದೆ ರಸ್ತೆಯಲ್ಲಿ ಹರಿಯಿತು. ಗಲೀಜು ಸಹ ಅದರ ಜೊತೆ ಸೇರಿತು. ಮಲ, ಮೂತ್ರದ ಗಲಿಜಿನೊಂದಿಗೆ ಮನೆಗಳಿಗೆ ಮಳೆ ನೀರು ನುಗ್ಗಿದೆ. ಸುಮಾರು ಮೂರು ನಾಲ್ಕು ಅಡಿಗಳಷ್ಟು ನೀರು ನಿಂತಿದೆ.
ಒಳಚರಂಡಿ ವ್ಯವಸ್ಥೆ ಸರಿಪಡಿಸಲು ಗ್ರಾಮ ಪಂಚಾಯತಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮತ್ತೆ ಮಳೆಯಾದರೆ ಇಲ್ಲಿನ ನಿವಾಸಿಗಳ ಸ್ಥಿತಿ ಚಿಂತಾಜನಕವಾಗಲಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಒಳಚರಂಡಿ ಸರಿಪಡಿಸಬೇಕು ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.