ADVERTISEMENT

ಬೆಳೆಯ ಗುಡಿಸಿತು ಮಳೆ: ಕಿತ್ತು ಹೋದವು ರಸ್ತೆ

ಮುಳುಗಿದ ಕೊತ್ತನೂರಿನಲ್ಲಿ ಇಂದಿಗೂ ಮಳೆಯ ಭಯ

ಡಿ.ಎಂ.ಕುರ್ಕೆ ಪ್ರಶಾಂತ
Published 17 ಸೆಪ್ಟೆಂಬರ್ 2022, 5:05 IST
Last Updated 17 ಸೆಪ್ಟೆಂಬರ್ 2022, 5:05 IST
ಚಿಕ್ಕಬಳ್ಳಾಪುರ ತಾಲ್ಲೂಕಿನ ನಾಯಕನಹಳ್ಳಿಯಲ್ಲಿ ಅಂಜುಳಮ್ಮ ಅವರ ಗುಲಾಬಿ ತೋಟ ಜಲಾವೃತವಾಗಿರುವುದು
ಚಿಕ್ಕಬಳ್ಳಾಪುರ ತಾಲ್ಲೂಕಿನ ನಾಯಕನಹಳ್ಳಿಯಲ್ಲಿ ಅಂಜುಳಮ್ಮ ಅವರ ಗುಲಾಬಿ ತೋಟ ಜಲಾವೃತವಾಗಿರುವುದು   

ಚಿಕ್ಕಬಳ್ಳಾಪುರ: ‘ಒಂದು ಎಕರೆ ಕೊತ್ತುಂಬರಿ ಬಿತ್ತನೆ ಮಾಡಿದ್ದೆ. ಈ ಬಾರಿ ಒಳ್ಳೆಯ ಬೆಳೆಯ ನಿರೀಕ್ಷೆ ಇತ್ತು. ಆದರೆ ನೋಡಿ ಈಗ ಪರಿಸ್ಥಿತಿ’–ಕೈ ತೋರಿದರು ಚಿಕ್ಕಬಳ್ಳಾಪುರ ತಾಲ್ಲೂಕಿನ ನುಗುತಹಳ್ಳಿಯ ಮುನಿಯಪ್ಪ.

ಇಲ್ಲಿ ಕೊತ್ತುಂಬರಿ ಬಿತ್ತನೆ ಮಾಡಿದ್ದರೆ ಎನ್ನುವುದಕ್ಕೆ ಯಾವುದೇ ‍ಪುರಾವೆ ಇಲ್ಲದಂತೆ ಮಳೆಯ ಅಬ್ಬರಕ್ಕೆ ಕೊಚ್ಚಿ ಹೋಗಿತ್ತು ಬೆಳೆ. ಬೆಳೆ ಅಷ್ಟೇ ಅಲ್ಲ ಮಣ್ಣೂ ಸಹ ಕೊಚ್ಚಿದೆ. ಇಂತಹ ಹಲವು ದೃಶ್ಯಗಳು ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ
ಕಾಣುತ್ತವೆ.

ಕಳೆದ ಎರಡು ವರ್ಷಗಳಿಂದ ಮುಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ ವ್ಯಾಪಕ ಮಳೆ ಆಗುತ್ತಿದೆ. ಪ್ರಸಕ್ತ ಮುಂಗಾರಿನಲ್ಲಿಯೂ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ವ್ಯಾಪಕ ಮಳೆ ಆಗಿದೆ. ಈ ಮಳೆಯಿಂದ ತಾಲ್ಲೂಕಿನ ಬಹುತೇಕ ಕೆರೆ, ಕಟ್ಟೆಗಳು ಕೋಡಿ ಹರಿದಿವೆ.

ADVERTISEMENT

ಶ್ರೀನಿವಾಸಸಾಗರ, ಜಕ್ಕಲಮಡುಗು ಜಲಾಶಯಗಳೇ ಮೈದುಂಬಿವೆ. ಹೀಗೆ ಕೆರೆ, ಕಟ್ಟೆ ತುಂಬಿ
ಅಂತರ್ಜಲ ಸಮೃದ್ಧವಾಗಿದೆ ಎನ್ನುವ ಸಂತೋಷ ಒಂದೆಡೆಯಾದರೆ ಮತ್ತೊಂದು ಕಡೆ ಮಳೆ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯನ್ನು ಮಾಡಿದೆ. ಬೆಳೆ ಅಷ್ಟೇ ಅಲ್ಲ ಸೇತುವೆ, ರಸ್ತೆಗಳಿಗೂ ಹಾನಿಯಾಗಿದೆ. ಮನೆಗಳು ಕುಸಿದು ಬಿದ್ದಿವೆ.

ಮಳೆ ನಿಂತು ಹೋದ ಮೇಲೆ ಅನಾಹುತದ ಚಿತ್ರಣ ಎದ್ದು ಕಾಣುತ್ತಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಹೊಲ, ತೋಟಗಳನ್ನು ತುಂಬಿರುವ ಮಳೆ ನೀರು ಇಂದಿಗೂ ಕಡಿಮೆ ಆಗಿಲ್ಲ. ಟೊಮೆಟೊ, ಹೂ, ತರಕಾರಿಗಳ ಬೆಳೆಗಳು,
ತೋಟಗಾರಿಕಾ ಬೆಳೆಗಳು ಕೊಳೆಯುತ್ತಿವೆ. ಬೆಳೆ ರಕ್ಷಣೆಯೇ ಸವಾಲಾಗಿದೆ.

ಮಳೆಯು ಆಡಳಿತಶಾಹಿಗಳಿಗೆ ಮತ್ತು ಅಧಿಕಾರಿಗಳಿಗೆ ಒಂದಿಷ್ಟು ಪಾಠವನ್ನೂ ಹೇಳಿದೆ. ಕೆರೆ, ಕಾಲುವೆಗಳ ಒತ್ತುವರಿ ತೆರವುಗೊಳಿಸದಿದ್ದರೆ ಮತ್ತೂ ಇಂತಹದ್ದೇ ಅವಘಡಗಳು ಸಾಮಾನ್ಯ ಎನ್ನುವುದನ್ನು ಸಾರಿದೆ. ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಮಳೆಯಿಂದ ರಸ್ತೆಗಳು ಕಿತ್ತು ಬಂದಿವೆ. ಕೆಲವು ಕಡೆಗಳಲ್ಲಿ ಮಳೆ ನಿಂತರೂ ಆ ರಸ್ತೆಗಳಲ್ಲಿ ಮಳೆ ಮೂಡಿಸಿದ ಅಧ್ವಾನಗಳು ಎದ್ದು ಕಾಣುತ್ತಿವೆ.

ನಂದಿ ಗ್ರಾಮದಿಂದ ಸುಲ್ತಾನ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರಕ್ಕೆ ಸಾಗುವ ಕಣಿವೆ ಬಳಿ ಸಂಭವಿಸಿದ ಭೂ ಕುಸಿತದಿಂದ ಇಂದಿಗೂ ಈ ಮಾರ್ಗದಲ್ಲಿ ಸಂಚಾರ ಬಂದ್ ಆಗಿದೆ.

ಮಳೆಯಿಂದ ತಾಲ್ಲೂಕಿನ ಕೊತ್ತನೂರು ಗ್ರಾಮವು ಅರ್ಧ ಮುಳುಗಿತ್ತು. ಈಗ ಗ್ರಾಮದಲ್ಲಿ ನೀರು ಇಳಿದಿದೆ. ಆದರೆ ಮಳೆ ಎಂದರೆ ಈಗಲೂ ಗ್ರಾಮಸ್ಥರು ಬೆಚ್ಚುವರು. ತೀವ್ರ ಮಳೆಯಾದರೆ ಮನೆಗಳಿಗೆ ನೀರು ನುಗ್ಗುತ್ತದೆ. ಕಸವೆಲ್ಲ ಮನೆ ಬಾಗಿಲಿಗೆ ಬರುತ್ತದೆ ಎನ್ನುವ ಆತಂಕ ಗ್ರಾಮಸ್ಥರದ್ದು.

ಹೀಗೆ ಮಳೆಯ ಕಾರಣದಿಂದ ರೈತರ ಹಾಗೂ ನಾಗರಿಕರ ಬದುಕು ಮೂರಾಬಟ್ಟೆಯಾಗಿದೆ. ಹಾನಿಯಾಗಿರುವ ರಸ್ತೆ, ಸೇತುವೆಗಳನ್ನು ದುರಸ್ತಿಗೊಳಿಸುವ ಜತೆಗೆ ರಾಜಕಾಲುವೆಗಳ ಒತ್ತುವರಿ ಸಹ ತೆರವುಗೊಳಿಸಬೇಕು ಎನ್ನುವುದು ನಾಗರಿಕರ ಆಗ್ರಹ.

ದ್ರಾಕ್ಷಿ ತೋಟಕ್ಕೆ ಹಾನಿ:
ಹೊಸದಾಗಿ ದ್ರಾಕ್ಷಿ ತೋಟ ಮಾಡಿದ್ದೆವು. ಆದರೆ ಮಳೆ ತೋಟವನ್ನು ಹಾಳು ಮಾಡಿದೆ. ಮಳೆಯಿಂದ ಇಂದಿಗೂ ದ್ರಾಕ್ಷಿ ತೋಟದಲ್ಲಿ ನೀರು ತುಂಬಿ ತುಳುಕಿದೆ. ದ್ರಾಕ್ಷಿ ಬಳ್ಳಿಯನ್ನು ಮತ್ತೆ ಕಟಾವು ಮಾಡಿ ಹೊಸದಾಗಿ ಬೆಳೆಯಲು ಬಿಡಬೇಕು. ನಷ್ಟ ಹೆಚ್ಚಿದೆ.

-ವಿಶ್ವನಾಥ್,ಅಗಲಗುರ್ಕಿ ಗ್ರಾಮ, ಚಿಕ್ಕಬಳ್ಳಾಪುರ

****

ನೀರಿನಲ್ಲಿ ಹೂ ಬಿಡಿಸಬೇಕು:
ಒಂದು ಎಕರೆಯಲ್ಲಿ ಗುಲಾಬಿ ಬೆಳೆದಿದ್ದೆವು. ಆದರೆ ಈಗ ಇಡೀ ತೋಟವನ್ನು ನೀರು ಆವರಿಸಿದೆ. ಆ ನೀರಿನಲ್ಲಿಯೇ ಹೂ ಬಿಡಿಸಬೇಕು. ಗಿಡಗಳು ಕೊಳೆಯುವ ಸ್ಥಿತಿಯಲ್ಲಿವೆ. ನೀರಿನಲ್ಲಿ ನಿಂತು ಹೂ ಬಿಡಿಸಬೇಕಾದ ಕಾರಣ ನಮ್ಮ ಕಾಲುಗಳ ಆರೋಗ್ಯದಲ್ಲಿಯೂ ವ್ಯತ್ಯಾಸವಾಗುತ್ತಿದೆ.

-ಅಂಜುಳಮ್ಮ, ನಾಯನಹಳ್ಳಿ, ಚಿಕ್ಕಬಳ್ಳಾಪುರ

****

ಕೊಳೆಯುತ್ತಿವೆ ಸೊಪ್ಪುಗಳು:
ಮಳೆಯಿಂದ ಕೊತ್ತುಂಬರಿ ಬೆಳೆಯೇ ಇಲ್ಲ. ಇರುವ ಅಲ್ಪಸ್ವಲ್ಪ ಬೆಳೆಯೂ ಕೊಳೆಯುತ್ತಿದೆ. ಮಳೆ ಮುಂದುವರಿದರೆ ಒಂದು ಕೆ.ಜಿ ಕೊತ್ತುಂಬರಿ ಬೆಲೆ ₹ 300 ದಾಟಬಹುದು. ಮುಂಚೆ ನಾವು ಸಗಟು ವ್ಯಾಪಾರಿಗಳು ಇಲ್ಲವೆ ರೈತರಿಂದ ಕೊತ್ತುಂಬರಿ ಖರೀದಿದರೆ ಹಣವನ್ನು ತಡವಾಗಿ ಕೊಡುತ್ತಿದ್ದೆವು. ಆದರೆ ಈಗ ಅವರಿಗೆ ಹಣ ಕೊಟ್ಟ ನಂತರವೇ ಸೊಪ್ಪು ಕೊಡುವುದು.

-ಶಿವಮೂರ್ತಿ, ಸೊಪ್ಪಿನ ವ್ಯಾಪಾರಿ, ಚಿಕ್ಕಬಳ್ಳಾಪುರ

****

ಕೊತ್ತಂಬರಿ ಕೆ.ಜಿ ₹ 250: ಮಳೆಯ ಕಾರಣದಿಂದ ಕೊತ್ತುಂಬರಿ ಹಾಗೂ ವಿವಿಧ ಸೊಪ್ಪಿನ ಬೆಲೆಗಳು ಗಣನೀಯವಾಗಿ ಹೆಚ್ಚಿದೆ. ಒಂದು ಕೆ.ಜಿ.ಕೊತ್ತುಂಬರಿ ಬೆಲೆ ಈಗ ₹ 250 ಇದೆ. ಮೆಂತ್ಯೆ ಸೊಪ್ಪು ಒಂದು ಕಟ್ಟಿನ ಬೆಲೆ ₹ 40 ಇದೆ. ಹೀಗೆ ಸೊಪ್ಪಿನ ಬೆಲೆಗಳು ಗಣನೀಯವಾಗಿ ಹೆಚ್ಚಿದೆ. ತರಕಾರಿ ಬೆಲೆಗಳು ಸಹ ದುಪ್ಪಟ್ಟಾಗಿವೆ. ₹ 10ಕ್ಕೆ ಕೊತ್ತುಂಬರಿ ಸೊಪ್ಪನ್ನು ವ್ಯಾಪಾರಿಗಳು ಮಾರಾಟ ಮಾಡುತ್ತಿಲ್ಲ.

ಮಳೆ ನೀರಿನಲ್ಲಿರುವ ಸೊಪ್ಪುಗಳನ್ನೇ ರೈತರು ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇದರಲ್ಲಿ ಬಹಳಷ್ಟು ಸೊಪ್ಪು ಸತ್ತು ಹೋಗಿರುತ್ತದೆ. ಹೆಚ್ಚು ನೀರು ಕುಡಿದ ಕಾರಣ ಸೊಪ್ಪುಗಳು ಕೊಳೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.