ADVERTISEMENT

ಶಿಡ್ಲಘಟ್ಟ | ₹225 ಕೋಟಿ ವೆಚ್ಚದಲ್ಲಿ ರೇಷ್ಮೆಗೂಡು ಮಾರುಕಟ್ಟೆ

9.38 ಎಕರೆ ಜಾಗ ಮಾರುಕಟ್ಟೆ ನಿರ್ಮಾಣಕ್ಕೆ ಮೀಸಲು

ಡಿ.ಜಿ.ಮಲ್ಲಿಕಾರ್ಜುನ
Published 14 ಜುಲೈ 2024, 7:42 IST
Last Updated 14 ಜುಲೈ 2024, 7:42 IST
ಶಿಡ್ಲಘಟ್ಟದಲ್ಲಿನ ರೇಷ್ಮೆಗೂಡು ಮಾರುಕಟ್ಟೆ
ಶಿಡ್ಲಘಟ್ಟದಲ್ಲಿನ ರೇಷ್ಮೆಗೂಡು ಮಾರುಕಟ್ಟೆ   

ಶಿಡ್ಲಘಟ್ಟ: ಶಿಡ್ಲಘಟ್ಟದ ಹೊರವಲಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೈಟೆಕ್ ರೇಷ್ಮೆಗೂಡು ನಿರ್ಮಾಣದ ವಿಸ್ತೃತ ಸಮಗ್ರ ಯೋಜನಾ ವರದಿ (ಡಿ.ಪಿ.ಆರ್) ಸಿದ್ಧಗೊಳಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸುಮಾರು 225 ಕೋಟಿ ವೆಚ್ಚದ ಮಾರುಕಟ್ಟೆ ನಿರ್ಮಾಣಕ್ಕೆ ಡಿಪಿಆರ್ ವರದಿಯನ್ನು ಅಧಿಕಾರಿಗಳು ಸಿದ್ಧಪಡಿಸಿದ್ದಾರೆ.

ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂಸಿ ಸುಧಾಕರ್ ಅವರ ಕಚೇರಿಯಲ್ಲಿ ಇತ್ತೀಚೆಗೆ ಡಾ.ಎಂ.ಸುಧಾಕರ್, ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ್, ಶಿಡ್ಲಘಟ್ಟ ಕ್ಷೇತ್ರದ ಶಾಸಕ ಬಿ.ಎನ್.ರವಿಕುಮಾರ್, ಹಿರಿಯ ಅಧಿಕಾರಿಗಳು ಸಮಗ್ರ ಯೋಜನಾ ವರದಿಯನ್ನು ಪರಿಶೀಲಿಸಿ ಅಂತಿಮಗೊಳಿಸಿ ಸಲ್ಲಿಸಲು ಒಪ್ಪಿಗೆ ಸೂಚಿಸಿದ್ದಾರೆ.

ಶಿಡ್ಲಘಟ್ಟ-ದಿಬ್ಬೂರಹಳ್ಳಿ ಮಾರ್ಗದ ಹನುಮಂತಪುರ ಗ್ರಾಮದ ಬಳಿ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣ ಮಾಡುವುದಕ್ಕಾಗಿ 9.38 ಎಕರೆಯಷ್ಟು ಜಾಗವನ್ನು ಮೀಸಲಿಟ್ಟಿದ್ದು ರೇಷ್ಮೆ ಇಲಾಖೆಗೆ ಈಗಾಗಲೇ ಜಾಗ ಹಸ್ತಾಂತರವಾಗಿದೆ. ಪಹಣಿಯೂ ಆಗಿದೆ.

ADVERTISEMENT

ಆರಂಭದಲ್ಲಿ15 ಕೋಟಿ: ದಶಕದ ಹಿಂದೆಯೆ ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣಕ್ಕೆಂದು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ₹15 ಕೋಟಿ ಘೋಷಿಸಿತ್ತಾದರೂ ಕಾರ್ಯರೂಪಕ್ಕೆ ಬಂದಿರಲಿಲ್ಲ.

2023ರಲ್ಲಿ ಆಗಿನ ಮುಖ್ಯಮಂತ್ರಿ ಬೊಮ್ಮಾಯಿ ಅವರು ಯೋಜನೆಯ ವೆಚ್ಚವನ್ನು ₹75 ಕೋಟಿಗೆ ವೆಚ್ಚ ಹೆಚ್ಚಿಸಿ ಬಜೆಟ್‌ನಲ್ಲಿ ಘೋಷಿಸಿದ್ದರು. ನಂತರ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಟೆಕ್ ಮಾರುಕಟ್ಟೆಗಾಗಿ ಬಜೆಟ್‌ನಲ್ಲಿ ₹75 ಕೋಟಿ ಮೀಸಲಿಟ್ಟಿದ್ದರು.

9.38 ಎಕರೆ ಜಾಗ ಮೀಸಲು: ಕ್ಷೇತ್ರದ ಶಾಸಕ ಬಿ.ಎನ್.ರವಿಕುಮಾರ್ ಅವರು ಹೆಚ್ಚು ಆಸಕ್ತಿವಹಿಸಿ ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಡಿಸಿ ಪಿ.ಎನ್.ರವೀಂದ್ರ ಅವರ ಮೇಲೆ ಒತ್ತಡಹಾಕಿ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣಕ್ಕೆ ಬೇಕಾದ ಜಾಗವನ್ನು ಇಲಾಖೆಗೆ ಹಸ್ತಾಂತರಿಸುವಲ್ಲಿ ಯಶಸ್ವಿಯಾದರು.

ಇದೀಗ ಅಧಿಕಾರಿಗಳು ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆಯ ನಿರ್ಮಾಣಕ್ಕೆ ಎರಡು ಹಂತದಲ್ಲಿ ಕಾಮಗಾರಿ ನಡೆಸುವ ಸಮಗ್ರ ಯೋಜನಾ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿರುವರು. ಸರ್ಕಾರದಿಂದ ಅನುಮತಿ ಸಿಗುತ್ತಿದ್ದಂತೆ ಟೆಂಡರ್ ಕರೆದು ನಂತರ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ಕಾಮಗಾರಿ ಶುರುವಾಗಲಿದೆ.

ಮಾರಾಟಕ್ಕೆ ಆವಕವಾಗುವ ರೇಷ್ಮೆಗೂಡನ್ನು ಬಿಡ್ ಮಾಡುವ ಬೃಹತ್ ಗೋದಾಮು, ಮಾರುಕಟ್ಟೆ ಅಧಿಕಾರಿಗಳ ಕಚೇರಿ, ವಸತಿ ಗೃಹ, ರೈತರ ವಿಶ್ರಾಂತಿ ಮತ್ತು ರಾತ್ರಿವೇಳೆ ತಂಗಲು ರೈತರಿಗೆ ವಸತಿಗೃಹ, ವಾಹನ ಪಾರ್ಕಿಂಗ್, ಕುಡಿಯುವ ನೀರು, ಶೌಚಾಲಯದಂತಹ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ.

ಮಹಿಳಾ ರೈತರು ಮತ್ತು ಮಹಿಳಾ ರೀಲರುಗಳಿಗೂ ಪ್ರತ್ಯೇಕ ವಸತಿ ಗೃಹ, ವಿಶ್ರಾಂತಿ ಗೃಹ, ಮಕ್ಕಳು ಆಟ ಆಡಿಕೊಳ್ಳಲು ಆಟದ ಮೈದಾನ, ರೈತರು, ರೀಲರುಗಳ ಸಭೆ ನಡೆಸುವ ಸಭಾಂಗಣ, ರೇಷ್ಮೆಗೂಡಿನ ಗುಣಮಟ್ಟ ನಿರ್ಧರಿಸುವ ಕಕೂನ್ ಕ್ವಾಲಿಟಿ ಟೆಸ್ಟಿಂಗ್ ಸೆಂಟರ್ ಇನ್ನಿತರೆ ಸವಲತ್ತುಗಳನ್ನು ಮಾರುಕಟ್ಟೆಯಲ್ಲಿ ಕಲ್ಪಿಸಲಾಗುತ್ತದೆ.

ದೊಡ್ಡ ಮಾರುಕಟ್ಟೆ: ದೇಶದಲ್ಲಿಯೆ ಅತಿ ಹೆಚ್ಚು ರೇಷ್ಮೆಗೂಡು ವಹಿವಾಟು ನಡೆಯುವ ಶಿಡ್ಲಘಟ್ಟದಲ್ಲಿ ಹೈಟೆಕ್ ಮಾದರಿಯ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣ ಆಗಬೇಕೆಂಬುದು ಇಲ್ಲಿನ ರೈತರು, ರೀಲರುಗಳ ದಶಕಗಳ ಕನಸು ನನಸಾಗುವುದಕ್ಕೆ ಸಮಯ ಕೂಡಿ ಬಂದಂತಿದೆ.

ರಾಜ್ಯದ ಮೂಲೆ ಮೂಲೆಗಳಿಂದಲ್ಲದೆ ನೆರೆಯ ಆಂಧ್ರ, ಮಹಾರಾಷ್ಟ್ರದ ಗಡಿಭಾಗದಿಂದಲೂ ಶಿಡ್ಲಘಟ್ಟದ ರೇಷ್ಮೆಗೂಡು ಮಾರುಕಟ್ಟೆಗೆ ಮಾರಾಟಕ್ಕೆಂದು ರೇಷ್ಮೆಗೂಡು ಆವಕವಾಗಲಿದ್ದು ದಿನವೂ ಟನ್‌ಗಟ್ಟಲೆ ರೇಷ್ಮೆಗೂಡು ವಹಿವಾಟು ನಡೆದು ಕೋಟ್ಯಂತರ ರೂ ವಹಿವಾಟು ನಡೆಯುವ ದೇಶದ ಅತಿ ದೊಡ್ಡ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ ಇದಾಗಿದೆ.

 ಬಿ.ಎನ್.ರವಿಕುಮಾರ್

ಅನುಮೋದನೆ ಸಿಕ್ಕ ನಂತರ ಮುಂದಿನ ಚಟುವಟಿಕೆ ಶಿಡ್ಲಘಟ್ಟ ಹೊರವಲಯದ ಹನುಮಂತಪುರ ಬಳಿ ಈಗಾಗಲೆ 9.38 ಎಕರೆಯಷ್ಟು ಜಾಗವನ್ನು ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣಕ್ಕೆಂದು ಮೀಸಲಿಟ್ಟಿದ್ದು ರೇಷ್ಮೆ ಇಲಾಖೆಗೆ ಹಸ್ತಾಂತರಿಸಿದ್ದು ಪಹಣಿಯೂ ಆಗಿದೆ. ಇದೀಗ ₹225 ಕೋಟಿ ವೆಚ್ಚದ ಮಾರುಕಟ್ಟೆ ನಿರ್ಮಾಣಕ್ಕೆ ಡಿಪಿಆರ್‌ ಅನ್ನು ಇಲಾಖೆಯ ಅಧಿಕಾರಿಗಳ ತಜ್ಞರ ತಂಡ ಸಿದ್ಧಗೊಳಿಸಿದ್ದಾರೆ. ರೇಷ್ಮೆ ಸಚಿವ ಕೆ.ವೆಂಕಟೇಶ್ ಸಮ್ಮುಖದಲ್ಲಿ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಡಿಪಿಆರ್‌ನ್ನು ಪರಿಶೀಲಿಸಿದ್ದು ಅಂತಿಮಗೊಂಡು ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಅನುಮೋದನೆ ಸಿಕ್ಕ ನಂತರ ಮುಂದಿನ ಚಟುವಟಿಕೆ ಆರಂಭಿಸಲಾಗುವುದು. ಬಿ.ಎನ್.ರವಿಕುಮಾರ್ ಶಾಸಕ ಶಿಡ್ಲಘಟ್ಟ ಕ್ಷೇತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.