ADVERTISEMENT

ಚಿಕ್ಕಬಳ್ಳಾಪುರ: ಎಚ್‌.ಎನ್ ಜನ್ಮ ಶತಮಾನೋತ್ಸವ ಮರೆತ ಜಿಲ್ಲಾಡಳಿತ

ನಾಡು ಕಂಡ ಶ್ರೇಷ್ಠ ಶಿಕ್ಷಣ ತಜ್ಞ ಎಚ್‌.ನರಸಿಂಹಯ್ಯ ನೂರನೇ ಜನ್ಮದಿನ ಆಚರಿಸದೆ ಅಪಮಾನ – ಆರೋಪ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 15:24 IST
Last Updated 6 ಜೂನ್ 2020, 15:24 IST
ಚಿಕ್ಕಬಳ್ಳಾಪುರದಲ್ಲಿ ಚಿಂತಕ ಪ್ರೊ.ಕೋಡಿರಂಗಪ್ಪ ಅವರ ನಿವಾಸದಲ್ಲಿ ಎಚ್‌.ಎನ್‌ ಅವರ ಅನುಯಾಯಿಗಳು ಅವರ ಜನ್ಮ ದಿನಾಚರಣೆ ಆಚರಿಸಿದರು.
ಚಿಕ್ಕಬಳ್ಳಾಪುರದಲ್ಲಿ ಚಿಂತಕ ಪ್ರೊ.ಕೋಡಿರಂಗಪ್ಪ ಅವರ ನಿವಾಸದಲ್ಲಿ ಎಚ್‌.ಎನ್‌ ಅವರ ಅನುಯಾಯಿಗಳು ಅವರ ಜನ್ಮ ದಿನಾಚರಣೆ ಆಚರಿಸಿದರು.   

ಚಿಕ್ಕಬಳ್ಳಾಪುರ: ಜಿಲ್ಲೆಯವರೇ ಆದ ನಾಡು ಕಂಡ ಶ್ರೇಷ್ಠ ಶಿಕ್ಷಣ ತಜ್ಞ, ವಿಚಾರವಾದಿ, ಮಾನವತಾದಿ ಡಾ.ಎಚ್.ನರಸಿಂಹಯ್ಯ ಅವರಂತಹ ಮೇರು ಪುರುಷನ ಜನ್ಮ ಶತಮಾನೋತ್ಸವವನ್ನೇ ಜಿಲ್ಲಾಡಳಿತ ಮರೆತು, ಜಾಣ ಕುರುಡು ಪ್ರದರ್ಶಿಸುವ ಮೂಲಕ ಅವರ ತ್ಯಾಗಕ್ಕೆ ಅಪಚಾರ ಎಸಗಿದೆ ಎಂಬ ಟೀಕೆಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ.

ಅವಿಭಜಿತ ಕೋಲಾರ ಜಿಲ್ಲೆಯ (ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆ) ಗೌರಿಬಿದನೂರು ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ 1920 ಜೂನ್ 6 ರಂದು ಬಡ ಕುಟುಂಬದಲ್ಲಿ ಹುಟ್ಟಿದ ನರಸಿಂಹಯ್ಯನವರು ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ನಿಸ್ವಾರ್ಥ ಸೇವೆ ಮತ್ತು ಪ್ರಖರ ವೈಚಾರಿಕತೆಯ ಮೂಲಕ ಮೇರು ಶಿಖರವಾಗಿ ಜನಮಾನಸದಲ್ಲಿ ನೆಲೆಸಿದವರು.

ಜಿಲ್ಲೆಯ ಕೀರ್ತಿಯನ್ನು ಎಲ್ಲೆಡೆ ಪಸರಿಸಿದ ಪ್ರತಿಭಾ ಸಂಪನ್ನ ಎಚ್‌.ಎನ್ ಅವರ 100ನೇ ಜನ್ಮದಿನಾಚರಣೆ ಜಿಲ್ಲೆಯಲ್ಲಿ ಶನಿವಾರ (ಜೂನ್ 6) ಅದ್ದೂರಿಯಾಗಿ ನಡೆಯಬೇಕಿತ್ತು ಎನ್ನುವುದು ಅವರ ಅನುಯಾಯಿಗಳ ಕನಸಾಗಿತ್ತು. ಆದರೆ, ಜಿಲ್ಲಾಡಳಿತ ದಿವ್ಯ ನಿರ್ಲಕ್ಷ್ಯದಿಂದಾಗಿ ನರಸಿಂಹಯ್ಯ ಅವರ ಜನ್ಮ ಶತಮಾನೋತ್ಸವ ಸದ್ದಿಲ್ಲದೆ ಸರಿದು ಹೋಯಿತು.

ADVERTISEMENT

ನರಸಿಂಹಯ್ಯ ಅವರೇ ಸ್ಥಾಪಿಸಿದ ಗೌರಿಬಿದನೂರು ಮತ್ತು ಬಾಗೇಪಲ್ಲಿಯ ನ್ಯಾಷನಲ್ ಕಾಲೇಜುಗಳು ಮತ್ತು ಅವರ ಹುಟ್ಟೂರು ಹೊಸೂರಿನ ಪ್ರೌಢಶಾಲೆ ಸೇರಿದಂತೆ ವಿವಿಧೆಡೆ ಎಚ್‌.ಎನ್ ಅವರ ಶಿಷ್ಯರು, ಅನುಯಾಯಿಗಳು ಅಲ್ಲಲ್ಲಿ ಪುಟ್ಟ ಕಾರ್ಯಕ್ರಮಗಳ ಮೂಲಕ ಅವರನ್ನು ಸ್ಮರಿಸುವ ಕೆಲಸ ಮಾಡಿದ್ಧಾರೆ.

ಆದರೆ, ಜಿಲ್ಲಾಡಳಿತ ಮಾತ್ರ ಎಚ್‌.ನರಸಿಂಹಯ್ಯ ಅವರ ಜನ್ಮ ಶತಮಾನೋತ್ಸವದ ವಿಚಾರದಲ್ಲಿ ಈವರೆಗೆ ಚಕಾರ ಎತ್ತಲಿಲ್ಲ. ಪೂರ್ವಭಾವಿ ಒಂದೇ ಒಂದು ಸಭೆ ನಡೆಸಿ ತನ್ನ ನಿರ್ಧಾರವನ್ನೂ ತಿಳಿಸುವ ಕನಿಷ್ಠ ಸೌಜನ್ಯವನ್ನೂ ತೋರಲಿಲ್ಲ ಎಂಬ ಬೇಸರ ಪ್ರಜ್ಞಾವಂತರಲ್ಲಿ ಮನೆ ಮಾಡಿದೆ.

‘ಜಿಲ್ಲಾಡಳಿತಕ್ಕೆ ಎಚ್‌.ನರಸಿಂಹಯ್ಯ ಎನ್ನುವವರು ಒಬ್ಬರು ಇದ್ದರು ಎನ್ನುವುದು ಗೊತ್ತಿದೆಯಾ ಎನ್ನುವ ಅನುಮಾನವಿದೆ. ಏಕೆಂದರೆ, ಜೂನ್ 6 ರಂದು ಎಚ್‌.ಎನ್ ಅವರ ಜನ್ಮ ಶಮಾನೋತ್ಸವ ಇರುವುದು ಅಧಿಕಾರಿಗಳಿಗೆ ಗೊತ್ತಿರಬೇಕಿತ್ತು. ಜನ್ಮದಿನ ಆಚರಣೆ ಆಚರಿಸದಿರುವುದು ನಮ್ಮ ದೌರ್ಭಾಗ್ಯ’ ಎಂದು ಹಿರಿಯ ಹೋರಾಟಗಾರ ಜಿ.ವಿ.ಶ್ರೀರಾಮರೆಡ್ಡಿ ತಿಳಿಸಿದರು.

‘ನರಸಿಂಹಯ್ಯ ಅವರ ಮೇರು ವ್ಯಕ್ತಿತ್ವ, ಮೇಧಾವಿತನ, ಸರಳತೆ, ತ್ಯಾಗ, ಹೋರಾಟ, ಸಾಮಾಜಿಕ ಬದ್ಧತೆ ಬಗ್ಗೆ ಈಗಿರುವ ಸರ್ಕಾರಕ್ಕೆ ಕಾಳಜಿ ಇಲ್ಲ. ಎಚ್‌.ಎನ್ ಅವರು ಈ ದೇಶದ ಆಸ್ತಿ. ರಾಜ್ಯ ಸರ್ಕಾರ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ರೂಪಿಸಬೇಕಿತ್ತು. ಜತೆಗೆ, ಜಿಲ್ಲಾಡಳಿತಕ್ಕೂ ಸೂಚನೆ ಕೊಡಬೇಕಿತ್ತು. ನರಸಿಂಹಯ್ಯ ಅವರನ್ನು ಮರೆತಿರುವುದು ರಾಜ್ಯ ಮತ್ತು ಜಿಲ್ಲೆಯ ದುರಂತ’ ಎಂದು ಬೇಸರ ವ್ಯಕ್ತಪಡಿಸಿದರು.

‘ಇವತ್ತಿನ ಸ್ವಾರ್ಥ, ಅಪ್ರಮಾಣಿಕತೆ, ಅಧಿಕಾರ ಲಾಲಸೆ ಇರುವ ಸಮಾಜದ ನಡುವೆ ಎಚ್‌.ಎನ್ ಅವರಂತಹವರು ಬದುಕಿದ್ದರು ಎನ್ನುವುದೇ ದೊಡ್ಡ ವಿಸ್ಮಯ. ಖೇದಕರ ಸಂಗತಿ ಎಂದರೆ ಜಿಲ್ಲಾಡಳಿತ ಎಚ್‌.ನರಸಿಂಹಯ್ಯ ಅವರ ಜನ್ಮ ಶತಮಾನೋತ್ಸವಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಇದೆ’ ಎಂದು ಚಿಂತಕ ಪ್ರೊ.ಬಿ.ಗಂಗಾಧರಮೂರ್ತಿ ತಿಳಿಸಿದರು.

‘ಎಚ್‌.ಎನ್ ಅವರ ಯಾವುದೇ ವಿಚಾರಗಳಿಗೆ ಬೆಲೆ ಕೊಡುವಂತಹ ಸರ್ಕಾರವಾಗಲಿ, ಶಾಸಕರಾಗಲಿ, ಜಿಲ್ಲಾಡಳಿತವೂ ಇಲ್ಲ. ಸಮಾಜವನ್ನು ಕಟ್ಟುವುದಕ್ಕೆ, ಬದಲಾವಣೆ ಮಾಡಲು ಯಾರು ನಿಷ್ಠಾವಂತರಾಗಿ ಕೆಲಸ ಮಾಡಿದರೋ ಅವರನ್ನು ಮರೆಯುವುದೇ ಒಂದು ಮೌಲ್ಯವಾಗಿರುವುದು ದುರಂತ’ ಎಂದು ವಿಷಾದಿಸಿದರು.

‘ತಮ್ಮ ಬದುಕಿನ ಬಹುಪಾಲು ಜೀವನ ವಿದ್ಯಾರ್ಥಿನಿಲಯಗಳಲ್ಲೇ ಸವೆಸಿದ ಎಚ್‌.ಎನ್ ಅವರು ಸಮಾಜದಿಂದ ಪಡೆದ ಎಲ್ಲವನ್ನೂ ಸಮಾಜಕ್ಕೆ ಮರಳಿಸಿದ ನಿಸ್ವಾರ್ಥ ಜೀವಿ. ಅಂತಹ ಮಹಾನ್ ಸಾಧಕನಿಗೆ ಸರ್ಕಾರ, ಜಿಲ್ಲಾಡಳಿತ ಮಾಡಿದ ದೊಡ್ಡ ಅಪಚಾರವಿದು’ ಎಂದು ಹಿರಿಯ ಸಾಹಿತಿ ಕಲ್ವಮಂಜಲಿ ಗೋಪಾಲಗೌಡ ಬೇಸರ ವ್ಯಕ್ತಪಡಿಸಿದರು.

‘ನರಸಿಂಹಯ್ಯ ಅವರ ಹುಟ್ಟೂರು ಹೊಸೂರಿನಲ್ಲಿರುವ ಅವರ ಮನೆ ಶಿಥಿಲಾವಸ್ಥೆಯಿಂದ ಕುಸಿದು ಬೀಳುವ ಹಂತ ತಲುಪಿದರೂ ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ, ಕೊನೆಗೆ ಜನಪ್ರತಿನಿಧಿಗಳೂ ಅದರ ಬಗ್ಗೆ ಕಾಳಜಿ ಮಾಡದಿರುವುದು ಜಡ್ಡುಗಟ್ಟಿದ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.