ಹೋಳಿಗೆ ತಯಾರಿಸುತ್ತಿರುವ ಆದರ್ಶ್
ಗೌರಿಬಿದನೂರು: ನಗರದ ನ್ಯಾಷನಲ್ ಕಾಲೇಜು ಪಕ್ಕದಲ್ಲಿರುವ ಹೋಳಿಗೆ ಮನೆ, ನಗರದ ಆಹಾರ ಪ್ರಿಯರ ನೆಚ್ಚಿನ ತಾಣವಾಗಿದೆ. ಆದರ್ಶ್ ಅವರು ಈ ಹೋಳಿಗೆ ಮನೆಯನ್ನು ನಡೆಸುತ್ತಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾದ ಈ ಅಂಗಡಿ ಇರುವುದು ಸಣ್ಣ ಕೊಠಡಿಯಲ್ಲಿ. ಇಲ್ಲಿ ಮಾರಾಟ ಮಾತ್ರ ಮಾಡಲಾಗುತ್ತದೆ. ಕೂತು ತಿನ್ನಲು ಸ್ಥಳವಿಲ್ಲ. ಆದರೆ ಇಲ್ಲಿನ ಹೋಳಿಗೆ ಸೇರಿದಂತೆ ತಿನಿಸುಗಳನ್ನು ಮನೆಗಳಿಗೆ ತೆಗೆದುಕೊಂಡು ಹೋಗಲು ಪ್ರತಿನಿತ್ಯ ನೂರಾರು ಗ್ರಾಹಕರು ಭೇಟಿ ನೀಡುತ್ತಾರೆ.
ಇದಕ್ಕೆ ಕಾರಣ ರುಚಿ ಮತ್ತು ತಾಜಾತನ. ಅಲ್ಲಿಯೇ ತಾಜಾ ಹೋಳಿಗೆಗಳನ್ನು ಮಾಡಿ, ಮಾರಾಟ ಮಾಡುವುದರ ಜೊತೆಗೆ ಅತ್ಯುತ್ತಮ ಗುಣಮಟ್ಟದ ರುಚಿ ಮತ್ತು ಶುಚಿಗೆ ಆದ್ಯತೆ ನೀಡುತ್ತಿದ್ದಾರೆ.
ಇಲ್ಲಿಗೆ ಗ್ರಾಹಕರು ಹೆಚ್ಚಾಗಿ ಬರುತ್ತಾರೆ ಜೊತೆಗೆ ಹಲವು ಹೋಟೆಲ್‌ನವರು ಪ್ರತಿನಿತ್ಯ ಪಾರ್ಸೆಲ್ ತೆಗೆದುಕೊಂಡು ಹೋಗುತ್ತಾರೆ. ತಾಲ್ಲೂಕಿನಲ್ಲಿರುವ ಏಕ ಮಾತ್ರ ಹೋಳಿಗೆ ಅಂಗಡಿ ಇದಾಗಿದೆ.
ಇಲ್ಲಿ ಬಗೆ ಬಗೆಯ ಹೋಳಿಗೆಗಳನ್ನು ಮಾಡಿ ಆಹಾರ ಪ್ರಿಯರಿಗೆ ನೀಡುತ್ತಾರೆ. ಕಾಯಿ ಹೋಳಿಗೆ, ಬೇಳೆ ಹೋಳಿಗೆ, ಕೋವಾ ಹೋಳಿಗೆ, ಪೈನಾಪಲ್ ಹೋಳಿಗೆ, ಕ್ಯಾರೆಟ್ ಹೋಳಿಗೆ ಇಲ್ಲಿ ಪ್ರಸಿದ್ಧಿ. ಪ್ರತಿದಿನ 150 ರಿಂದ 200 ಹೋಳಿಗೆಗಳು ಮಾರಾಟವಾಗುತ್ತವೆ. ಇನ್ನು ಕೆಲವು ಸಂದರ್ಭಗಳಲ್ಲಿ 1,000ದಿಂದ 1,200 ಹೋಳಿಗೆಗಳು ಪಾರ್ಸೆಲ್ ಹೋಗುತ್ತವೆ ಎನ್ನುತ್ತಾರೆ ಮಾಲೀಕ ಆದರ್ಶ್.
ಇದರ ಜೊತೆಯಲ್ಲಿ ಅಕ್ಕಿ ಹಪ್ಪಳ, ರಾಗಿ ಹಪ್ಪಳ, ಹುರುಳಿಕಾಳು ಹಪ್ಪಳ, ಉದ್ದಿನ ಹಪ್ಪಳ ಹೀಗೆ ಹಲವು ಬಗೆಯ ಹಪ್ಪಳಗಳನ್ನು ಮನೆಯಲ್ಲಿ ತಯಾರಿಸಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ.
ಆಂಧ್ರ ಸ್ಪೆಷಲ್ ಪಪ್ಪು, ಪೂತ ರೇಕುಲು ಸಹ ಇಲ್ಲಿನ ವಿಶೇಷತೆಗಳಲ್ಲಿ ಒಂದು. ಇವರು ಆದ್ಯತೆ ಮೇರೆಗೆ ಪುಳಿಯೋಗರೆ ಗೊಜ್ಜು, ಬಿಸಿಬೇಳೆ ಬಾತ್ ಪೌಡರ್, ವಾಂಗಿಬಾತ್ ಪೌಡರ್, ಚಟ್ನಿ ಪುಡಿ, ಸಾಂಬಾರ್ ಪುಡಿ, ದನಿಯ ಪುಡಿಯನ್ನು ತಯಾರಿಸಿಕೊಡುತ್ತಾರೆ. ಅಂಗಡಿ ಹೋಟೆಲ್‌ಗಳಿಗೆ ತರಹೇವಾರಿ ಅಡುಗೆಗಳನ್ನು ತಯಾರಿಸಿಕೊಡುತ್ತಾರೆ. ಇದರ ಜೊತೆಯಲ್ಲಿ, ಬಗ್ಗೆ ಬಗೆಯ ಕುರುಕಲು ತಿಂಡಿಗಳನ್ನು ಮಾರಾಟ ಮಾಡುತ್ತಾರೆ.
ಇಷ್ಟೆಲ್ಲಕ್ಕೂ ಆದರ್ಶ್ ಅವರ ಕುಟುಂಬ ಸದಸ್ಯರು ಸಾಥ್ ನೀಡಿದ್ದಾರೆ. ಗೌರಿಬಿದನೂರಿನಲ್ಲಿ ಹೋಳಿಗೆಯ ಬಗ್ಗೆ ಮಾತುಗಳು ಬಂದಾಗ ಎಲ್ಲರೂ ಬೆರಳು ತೋರುವುದು ಈ ಹೋಳಿಗೆ ಮನೆಯ ಕಡೆಗೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.