ADVERTISEMENT

ಪ್ರಾಮಾಣಿಕ ಕಲಿಕೆ ಯಾರನ್ನೂ ಕೈಬಿಡುವುದಿಲ್ಲ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಅಭಿಮತ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 14:11 IST
Last Updated 19 ಅಕ್ಟೋಬರ್ 2020, 14:11 IST
ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಆರ್.ಲತಾ, ಎಸ್ಪಿ ಜಿ.ಕೆ.ಮಿಥುನ್‌ ಕುಮಾರ್
ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಆರ್.ಲತಾ, ಎಸ್ಪಿ ಜಿ.ಕೆ.ಮಿಥುನ್‌ ಕುಮಾರ್   

ಚಿಕ್ಕಬಳ್ಳಾಪುರ: ‘ವಿದ್ಯಾರ್ಥಿ ಜೀವನದಲ್ಲಿ ಪ್ರಾಮಾಣಿಕವಾಗಿ ಓದುವ ಅಭ್ಯಾಸ ನಡೆಸುವವರು ಮುಂದೊಂದು ದಿನ ತಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆದೇ ಪಡೆಯುತ್ತಾರೆ’ ಎಂದು ಜಿಲ್ಲಾಧಿಕಾರಿ ಆರ್. ಲತಾ ತಿಳಿಸಿದರು.

ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರ ಗೇಟ್ ಬಳಿಯ ಬಿಜಿಎಸ್ ಶಾಲೆ ಮತ್ತು ಪಿಯುಸಿ ಕಾಲೇಜ್ ಆವರಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲ್ಲೂಕು ಆಡಳಿತ ಹಾಗೂ ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ 2019-20 ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಜಿಲ್ಲೆಯು ರಾಜ್ಯದ ಗಮನ ಸೆಳೆಯುವಂತೆ ಮಾಡಿರುವುದರಲ್ಲಿ ಜಿಲ್ಲಾಡಳಿತದ ಪಾತ್ರಕ್ಕಿಂತ ವಿದ್ಯಾರ್ಥಿ ಹಾಗೂ ಶಿಕ್ಷಕ ವೃಂದದ ಪಾತ್ರ ಹೆಚ್ಚಿದೆ. ಇದು ಹೆಮ್ಮೆಯ ಸಂಗತಿ. ಇದರಿಂದ ನಮ್ಮೆಲ್ಲರ ಜವಾಬ್ದಾರಿಯೂ ಹೆಚ್ಚಾಗಿದೆ’ ಎಂದು ಹೇಳಿದರು.

ADVERTISEMENT

‘ಜಗತ್ತಿನಲ್ಲಿ ನಮ್ಮನ್ನು ನಾವು ಉನ್ನತ ಸ್ಥಾನದಲ್ಲಿರುವಂತೆ ಮಾಡುವ ಶಕ್ತಿ ಶಿಕ್ಷಣಕ್ಕಿದೆ. ಈ ಶಕ್ತಿಯನ್ನು ನಮ್ಮದಾಗಿ ಮಾಡಿಕೊಳ್ಳಬೇಕಾದರೆ ಮೊದಲು ಆಸಕ್ತಿಯಿಂದ ಓದಬೇಕು. ಓದಿದ್ದನ್ನು ಕಾಲ ಕಾಲಕ್ಕೆ ಮನನ ಮಾಡಿಕೊಂಡು ಪರೀಕ್ಷೆಯ ಸಮಯದಲ್ಲಿ ಗುರುಗಳ ಮಾರ್ಗದರ್ಶನದಂತೆ ಓದನ್ನು ಮುಂದುವರೆಸಿದ್ದೇ ಆದರೆ ಅತ್ಯುನ್ನತ ಸ್ಥಾನವನ್ನು ಗಳಿಸಲು ಕಷ್ಟವಾಗುವುದಿಲ್ಲ’ ಎಂದರು.

‘ಓದಿನ ಸಂಧರ್ಭದಲ್ಲಿ ಬರುವ ಆಸೆ ಆಕಾಂಕ್ಷೆಗಳನ್ನು ಬದಿಗೆ ಸರಿಸಿ ಗುರಿಯತ್ತ ಮುನ್ನುಗ್ಗಬೇಕು. ಆಗ ಮಾತ್ರ ಜಗತ್ತು ನಮ್ಮತ್ತ ನೋಡುವಂತೆ ಆಗುತ್ತದೆ. ಇಲ್ಲದೇ ಹೋದರೆ ಕ್ಷಣಿಕವಾದ ಸುಖ ಮತ್ತು ಆಸೆಗಳು ನಮ್ಮನ್ನು ತಲೆ ಎತ್ತದಂತೆ ಮಾಡುವ ಶಕ್ತಿಯನ್ನು ಪಡೆಯುತ್ತವೆ’ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಮಾತನಾಡಿ, ‘ಒಬ್ಬ ವ್ಯಕ್ತಿಯ ಜೀವನದ ಏಳು ಬೀಳುಗಳಿಗೆ ಮೂಲಾಧಾರವೇ ಪ್ರೌಢಶಾಲಾ ಶಿಕ್ಷಣವಾಗಿದೆ. ಇಲ್ಲಿ ಯಾರು ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿವಾರಿಸಿಕೊಂಡು ಯಶಸ್ವಿಯಾಗಿ ಮುನ್ನುಗ್ಗುತ್ತಾರೋ ಅವರ ಭವಿಷ್ಯ ಉಜ್ವಲವಾಗಿರುತ್ತದೆ’ ಎಂದು ತಿಳಿಸಿದರು.

‘ಪೋಷಕರು ಮಕ್ಕಳನ್ನು ಉತ್ತಮವಾದ ಶಾಲಾ ಕಾಲೇಜುಗಳಿಗೆ ಸೇರಿಸಿದರೆ ತಮ್ಮ ಜವಾಬ್ದಾರಿ ಕಳೆಯಿತು ಎನ್ನುವ ಮನೋಭಾವ ಸಲ್ಲದು. ಮಕ್ಕಳ ಚಲನವಲನಗಳ ಮೇಲೆ ನಿಗಾ ಇರಿಸಿದಾಗ ಮಾತ್ರವೇ ಅವರ ಭವಿಷ್ಯ ಹಸನಾಗಲು ಸಾಧ್ಯ. ಇಲ್ಲದಿದ್ದರೆ ಮಕ್ಕಳು ದುಷ್ಟಕೂಟಗಳ ಜತೆ ಸೇರಿ ದುರಭ್ಯಾಸಗಳತ್ತ ಆಕರ್ಷಿತರಾಗುವ ಸಾಧ್ಯತೆ ಹೆಚ್ಚಿರುತ್ತದೆ’ ಎಂದರು.

‘ಸಮಾಜದಲ್ಲಿ ನಾವು ಗೌರವಯುತವಾದ ಬದುಕನ್ನು ಬಾಳಬೇಕಾದರೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಉತ್ತಮವಾದ ಅಂಕಗಳನ್ನು ಗಳಿಸುವುದಷ್ಟೇ ಜೀವನದ ಧ್ಯೇಯವಾಗಿಸಿಕೊಳ್ಳದೆ ಕುವೆಂಪು ಹೇಳಿದಂತೆ ಮೊದಲು ಮಾನವರಾಗುವತ್ತ ಸಾಗಬೇಕಿದೆ’ ಎಂದು ಹೇಳಿದರು.

ಅತ್ಯುತ್ತಮ ಶ್ರೇಣಿಯಲ್ಲಿ ಅಂಕಗಳಿಸಿದ ಮೂರು ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಲ್ಯಾಪ್‌ಟ್ಯಾಪ್ ವಿತರಣೆ ಮಾಡಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್, ಬಿಜಿಎಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಪ್ರೊ. ಕೆ.ಮಹದೇವಯ್ಯ, ಶಿಕ್ಷಣ ಸಂಯೋಜಕ ಭಾಸ್ಕರ ಗೌಡ, ತಹಶೀಲ್ದಾರ್ ಅರುಂಧತಿ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ದೇವರಾಜ್, ಶಿಕ್ಷಕ ವೆಂಕಟರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.