ADVERTISEMENT

ಹೊಸೂರು ಶಾಲೆ; ಮಾದರಿಯಾಗಿಸಲು ಪಣ

ಹಿರಿಯ ವಿದ್ಯಾರ್ಥಿಗಳ ಸಂಘ ಮತ್ತು ಎಸ್‌ಡಿಎಂಸಿಯಿಂದ ಯೋಜನೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 7:37 IST
Last Updated 28 ಜುಲೈ 2025, 7:37 IST
ಗೌರಿಬಿದನೂರು ತಾಲ್ಲೂಕಿನ ಹೊಸೂರು ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ
ಗೌರಿಬಿದನೂರು ತಾಲ್ಲೂಕಿನ ಹೊಸೂರು ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ   

ಗೌರಿಬಿದನೂರು: ಗಾಂಧಿವಾದಿ, ಶಿಕ್ಷಣ ತಜ್ಞ ಎಚ್‌.ನರಸಿಂಹಯ್ಯ ಅವರು ಓದಿದ ತಾಲ್ಲೂಕಿನ ಹೊಸೂರು ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯು ಫೆಬ್ರುವರಿಯಲ್ಲಿ ಶತಮಾನೋತ್ಸವ ಆಚರಿಸಿದೆ.

ಈಗ ಈ ಶಾಲೆಯನ್ನು ಮಾದರಿಯಾಗಿ ಅಭಿವೃದ್ಧಿಗೊಳಿಸಲು ಹಿರಿಯ ವಿದ್ಯಾರ್ಥಿಗಳ ಸಂಘ ಮತ್ತು ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ  ಯೋಜನೆ ರೂಪಿಸಿದೆ. 

ಶಾಲೆಯ ಶತಮಾನೋತ್ಸವ ಮತ್ತು ಪದ್ಮಭೂಷಣ ಎಚ್. ನರಸಿಂಹಯ್ಯ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಒಂದೇ ವೇದಿಕೆಯಲ್ಲಿ ನಡೆದಿದ್ದು ಜಿಲ್ಲೆಯ ಗಮನ ಸೆಳೆದಿತ್ತು.

ADVERTISEMENT

ಶಾಲೆ ಅಭಿವೃದ್ಧಿಗೆ ಹಣ ನೀಡಬೇಕು ಎಂದು ಹಳೆ ವಿದ್ಯಾರ್ಥಿಗಳು ಮುಖ್ಯಮಂತ್ರಿ ಅವರನ್ನು ಕೋರಿದ್ದರು. ಹೊಸೂರು ಸರ್ಕಾರಿ ಶಾಲೆ ಉನ್ನತೀಕರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ್ದರು. ಆ ಪ್ರಕಾರ ₹ 3 ಕೋಟಿ ಅನುದಾನ ಸಹ ನೀಡಿದ್ದರು.

ಈಗ ಶಾಲೆಯನ್ನು ಮಾದರಿಯಾಗಿ ಅಭಿವೃದ್ಧಿಗೊಳಿಸಲು ಯೋಜನೆಗಳು ಸಿದ್ಧವಾಗಿವೆ. ಒಂದು ವರ್ಷದ ಮತ್ತು ಮೂರು ವರ್ಷದ ಯೋಜನೆಗಳು ಎನ್ನುವ ಕಾಲಮಿತಿಯನ್ನೂ ಅಳವಡಿಸಿಕೊಳ್ಳಲಾಗಿದೆ.  

ಮೊದಲ ಹೆಜ್ಜೆಗಳು: ₹ 3 ಕೋಟಿ ಮಂಜೂರಾಗಿದ್ದು ಶಾಲೆಯ ಮೂಲಸೌಕರ್ಯ ಆಧುನೀಕರಿಸಲು ನೆರವಾಗಿದೆ. ಅಲ್ಲದೆ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ವರ್ಷ ದಾಖಲಾತಿಯೂ ಹೆಚ್ಚಿದೆ.

ಹಿರಿಯ ವಿದ್ಯಾರ್ಥಿಗಳ ಸಂಘದಿಂದ ನಾಲ್ಕು ಹೊಸ ಶಿಕ್ಷಕರನ್ನು ನೇಮಿಸಲಾಗಿದೆ. ಪೋಷಕರಿಗೆ ಶಿಕ್ಷಣದ ಮಹತ್ವದ ಕುರಿತು ಜಾಗೃತಿ ಮೂಡಿಸಲು ಶಿಬಿರ ನಡೆಸಲಾಗಿದೆ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಯಿಂದ ಪೋಷಕರು ಮತ್ತು ಶಿಕ್ಷಕರ ಸಭೆ ಪ್ರತಿ ತಿಂಗಳು ನಡೆಯುತ್ತಿದೆ. ಹೀಗೆ ಶತಮಾನೋತ್ಸವ ಆಚರಣೆಯ ನಂತರ ಶಾಲೆಯಲ್ಲಿ ನಡೆದ ಗುಣಾತ್ಮಕ ಬದಲಾವಣೆಗಳು ಇವು. ಈ ಕಾರ್ಯಕ್ಕೆ ಸಿಕ್ಕ ಬೆಂಬಲದಿಂದ ಎಸ್‌ಡಿಎಂಸಿ ಮತ್ತು ಹಿರಿಯ ವಿದ್ಯಾರ್ಥಿಗಳ ಉತ್ಸಾಹ ಹೆಚ್ಚಿದೆ.

ಮುಂದಿನ ಯೋಜನೆಗಳು: ಶಾಲಾ ಆವರಣದಲ್ಲಿ ಭದ್ರತೆ ಮತ್ತು ಶಿಸ್ತಿಗೆ ಸಿಬ್ಬಂದಿ  ನೇಮಕ. ಕಂಪ್ಯೂಟರ್ ಲ್ಯಾಬ್ ಮತ್ತು ಸ್ಮಾರ್ಟ್ ಕ್ಲಾಸ್‌ಗಳ ಸ್ಥಾಪನೆ. ಸ್ಪೋಕನ್ ಇಂಗ್ಲಿಷ್ ತರಗತಿ ಆರಂಭ. ಎಚ್.ಎನ್. ಸ್ಮರಣಾರ್ಥ ಈ ವರ್ಷದ ಮಕ್ಕಳ ದಿನಾಚರಣೆ ವೇಳೆ ವಿಜ್ಞಾನ ವಿಷಯಗಳ ಚರ್ಚಾ ಸ್ಪರ್ಧೆ ಆಯೋಜಿಸಲು ನಿರ್ಧರಿಸಲಾಗಿದೆ. 

ಒಂದು ವರ್ಷದ ಯೋಜನೆ: ಮುಂದಿನ ಒಂದು ವರ್ಷದಲ್ಲಿ ಶಾಲೆಯಲ್ಲಿ ಮೇಲಿನ ಎಲ್ಲವನ್ನೂ ಜಾರಿಗೊಳಿಸುವುದರೊಂದಿಗೆ, ಮಕ್ಕಳ ಕಲಿಕಾಗುಣಮಟ್ಟ ಎತ್ತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

ಮೂರು ವರ್ಷಗಳ ಯೋಜನೆ: ಮುಂದಿನ ಮೂರು ವರ್ಷಗಳಲ್ಲಿ ಶಾಲೆಗೆ ಹೊಸ ಕಟ್ಟಡ, ಅಡುಗೆ ಮನೆ, ಊಟದ ಮನೆ, ಭಾಷಾ ಕಲಿಕೆಗೆ ಲ್ಯಾಬ್‌, ವಿಜ್ಞಾನ ಪ್ರಯೋಗಾಲಯ, ಅತ್ಯಾಧುನಿಕ ಗ್ರಂಥಾಲಯ, ಇಂಗ್ಲಿಷ್‌ ಜೊತೆಗೆ ಕೃತಕ ಬುದ್ಧಿಮತ್ತೆ ಬಗ್ಗೆ ಕಲಿಕೆ ಮತ್ತು ಗಣಿತದ ಲ್ಯಾಬ್‌ ರೂಪಿಸಲು ಯೋಜಿಸಲಾಗಿದೆ. 

ರಾಜ್ಯದ ಅತ್ಯುತ್ತಮ ಗ್ರಾಮೀಣ ಶಾಲೆಗಳಲ್ಲಿ ಹೊಸೂರು ಶಾಲೆಯೂ ಒಂದು  ಎನ್ನುವ ಮಟ್ಟಿಗೆ ರೂಪಿಸಲು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ.  ಹೀಗೆ ಶತಮಾನದ ಶಾಲೆಯನ್ನು ಮಾದರಿಯಾಗಿ ಅಭಿವೃದ್ಧಿಗೊಳಿಸಲು ಯೋಜನೆಗಳು ಸಿದ್ಧವಾಗಿವೆ.

104 ವರ್ಷದ ಶಾಲೆ

ಹೊಸೂರು ಶಾಲೆ 1920ರಲ್ಲಿ ಸ್ಥಾಪನೆಯಾಗಿದೆ. 105 ವರ್ಷ ಪೂರೈಸಿದೆ. ಸ್ವಾತಂತ್ರಪೂರ್ವದಲ್ಲಿ ಹೊಸೂರು ಹೋಬಳಿಯಲ್ಲಿ ಇದಿದ್ದು ಇದು ಒಂದೇ ಶಾಲೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲೂ ಹೆಸರುಗಳಿಸಿದ ಗಣ್ಯರು ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ.  ಪದ್ಮಭೂಷಣ ಎಚ್. ನರಸಿಂಹಯ್ಯ ಅವರು ಇಲ್ಲಿ ವ್ಯಾಸಂಗ ಮಾಡಿದ್ದಾರೆ. ಈ ಶಾಲೆ ಆರಂಭವಾದ ವರ್ಷದಲ್ಲಿಯೇ ನರಸಿಂಹಯ್ಯ ಅವರು ಜನಿಸಿದ್ದಾರೆ. 

ಹಳೆ ವಿದ್ಯಾರ್ಥಿಗಳಿಗೆ ಪತ್ರ ಶಾಲೆ

ಅಭಿವೃದ್ಧಿಗೆ ನೆರವಾಗುವಂತೆ ಹಿರಿಯ ವಿದ್ಯಾರ್ಥಿಗಳ ಸಂಘವು ಹಳೆ ವಿದ್ಯಾರ್ಥಿಗಳಿಗೆ ಪತ್ರದ ಮೂಲಕ ಮನವಿ ಸಹ ಮಾಡಿದೆ. ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಹೊಸ ಚೈತನ್ಯ ತಂದಿದೆ.  ಶಾಲೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ನಿಮ್ಮ ಆರ್ಥಿಕ ಸಹಕಾರ ಬಹಳ ಮುಖ್ಯ. ಈ ಪತ್ರದ ಜೊತೆಗೆ ಒಂದು ಪಟ್ಟಿ ಲಗತ್ತಿಸಲಾಗಿದೆ.

ಆ ಪಟ್ಟಿಯಲ್ಲಿರುವ ಅಗತ್ಯ ವಸ್ತುಗಳಿಗೆ ನೀವು ಯಾವ ರೀತಿಯ ನೆರವು ಒದಗಿಸಬಹುದು ಎಂಬುದನ್ನು ಯೋಚಿಸಿ. ಒಂದು ವಾರದ ಒಳಗೆ ನಮಗೆ ತಿಳಿಸಬೇಕಾಗಿ ವಿನಂತಿ. ಆ.15ರೊಳಗೆ ಇವೆಲ್ಲವೂ ಶಾಲೆಯಲ್ಲಿ ಜೋಡಿಸಬೇಕು ಎಂದು ಆಲೋಚಿಸಿದ್ದೇವೆ ಎಂದು ಪತ್ರದಲ್ಲಿ ಹಳೆ ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.