ರೈತರು ಬೆಳೆದ ಹೊಲ ಗದ್ದೆಗೆ ಕೃಷಿ ಇಲಾಖೆ, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆಯ ವಿಜ್ಞಾನಿಗಳು ಭೇಟಿ ನೀಡಿರುವುದು
ಪಾತಪಾಳ್ಯ(ಬಾಗೇಪಲ್ಲಿ): ಹಿಂದಿನ ತಲೆಮಾರುಗಳಿಂದ ಮೂಲತಃ ಕೃಷಿಕ ಕುಟುಂಬದವರಾದ ಪಾತಪಾಳ್ಯ ಹೋಬಳಿಯ ಗುಡಿಪಲ್ಲಿ ಗ್ರಾಮದ ಎಸ್.ಎನ್.ರಾಮರೆಡ್ಡಿ ಹಾಗೂ ಅಣ್ಣತಮ್ಮಂದಿರು ತಮ್ಮ 35 ಎಕರೆ ಹೊಲ ಗದ್ದೆಯಲ್ಲಿ ವಿವಿಧ ತಳಿಯ ತರಕಾರಿ ಬೆಳೆ ಬೆಳೆದು ವಾರ್ಷಿಕ ₹35 ಲಕ್ಷದಿಂದ ₹50 ಲಕ್ಷದವರೆಗೆ ಆರ್ಥಿಕ ಲಾಭ ಗಳಿಸುತ್ತಿದ್ದಾರೆ.
ಗುಡಿಪಲ್ಲಿ ಗ್ರಾಮದ ರೈತ ಕುಟುಂಬವರಾದ ಎಸ್.ನಾರಾಯಣರೆಡ್ಡಿ ಹಾಗೂ ಸಾಕಮ್ಮ ಅವರ ಮಕ್ಕಳಾದ ಎಸ್.ಎನ್.ರಾಮರೆಡ್ಡಿ, ಎಸ್.ಲಕ್ಷ್ಮಣರೆಡ್ಡಿ, ಎಸ್.ಎನ್.ನಾಗರಾಜ, ಎಸ್.ಎನ್.ನಾರಾಯಣಸ್ವಾಮಿ, ಎಸ್.ಎನ್.ಶ್ರೀನಿವಾಸರೆಡ್ಡಿ ಕೃಷಿಕರಾಗಿದ್ದಾರೆ. ಇವರ ಜಮೀನಿನಲ್ಲಿ 6 ಕೊಳವೆಬಾವಿ ಇವೆ. 2 ಟ್ರ್ಯಾಕ್ಟರ್, 2 ಜೆಸಿಬಿಗಳು, ಒಂದು ಕೃಷಿ ಹೊಂಡ ಇದೆ. ಬೆಳೆಗಳನ್ನು ತುಂತುರು ನೀರಾವರಿ, ಹನಿ ನೀರಾವರಿಯ ಮೂಲಕ ಬೆಳೆಯುತ್ತಿದ್ದಾರೆ.
ಎರಡು ಎಕರೆಯಲ್ಲಿ ದಾಳಿಂಬೆ ಗಿಡಗಳು, ಆರು ಎಕರೆ ಮುಸಕಿನಜೋಳ, ಟೊಮೆಟೊ ನಾಲ್ಕು ಎಕರೆ, ಬೀಟ್‍ರೂಟ್ ಆರು ಎಕರೆ, ಈರುಳ್ಳಿ ಮೂರು ಎಕರೆ ಹಾಗೂ ಸೀಮೆಹುಲ್ಲು ಒಂದು ಎಕರೆ ಪ್ರದೇಶದಲ್ಲಿ ತರಕಾರಿ ಬೆಳೆ ಬೆಳೆದಿದ್ದಾರೆ. ಸೀಮೆಹಸು ಮೂರು, ನಾಟಿ ಹಸು ನಾಲ್ಕು, ಎಮ್ಮೆ ನಾಲ್ಕು, 50 ಕುರಿಗಳು, 50 ಕೋಳಿಗಳು ಇವೆ. ತೆಂಗಿನಮರ 50, ಜಂಬುನೇರಳೆಯ 10 ಮರಗಳು ಇವೆ.
ಸಮಗ್ರ ಹಾಗೂ ಮಿಶ್ರ ಬೇಸಾಯವನ್ನು ಇವರು ಅಳವಡಿಸಿಕೊಂಡಿದ್ದಾರೆ. ಸಾವಯುವ ಗೊಬ್ಬರವನ್ನು ಕೃಷಿ ಹಾಗೂ ತರಕಾರಿ ಬೆಳೆಗಳಿಗೆ ಸಿಂಪಡಿಸುತ್ತಾರೆ. ಸ್ಥಳೀಯ ಕೃಷಿ ಇಲಾಖೆ, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆಯ ವಿಜ್ಞಾನಿಗಳು ಮತ್ತು ಕೃಷಿ ವಿಸ್ತರಣಾ ಅಧಿಕಾರಿಗಳ ಜಂಟಿ ಭೇಟಿ ನೀಡುತ್ತಾರೆ. ಕೃಷಿ ಅಭಿವೃದ್ಧಿಯಿಂದ ಲಾಭ ಗಳಿಕೆಯ ಬಗ್ಗೆ ಪರಸ್ಪರ ವಿಚಾರ ವಿನಿಮಯ ಮಾಡಲಾಗುತ್ತದೆ.
ಕೃಷಿಯಲ್ಲಿಯೇ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ರೈತ ಕುಟುಂಬದವರು, ಬೆಲೆಗಳಲ್ಲಿ ಏರುಪೇರು ಕಂಡರೂ, ಹವಾಮಾನ ತೊಂದರೆ ಇದ್ದರೂ,
ಒಂದಲ್ಲಾ ಒಂದು ಬೆಳೆಗಳು ಬೆಳೆದು ಗಮನ ಸೆಳೆದಿದ್ದಾರೆ. ಋತುಮಾನದ ತಕ್ಕಂತೆ ತರಕಾರಿ, ಕೃಷಿ ಬೆಳೆಗಳು ಹಾಗೂ ನೇರಳೆ, ಪರಂಗಿ, ಮಾವಿನಹಣ್ಣು ಸೇರಿದಂತೆ ವಿವಿಧ ತಳಿಯ ಹಣ್ಣುಗಳನ್ನು ಬೆಳೆದು ಮಾರಾಟ ಮಾಡಿ ಆರ್ಥಿಕ ಲಾಭ ಗಳಿಸಿದ್ದಾರೆ.
ಕಷ್ಟ ಪಟ್ಟು ಬೆಳೆಗಳನ್ನು ಬೆಳೆಯುತ್ತೇವೆ. ಇದರಿಂದ ವಾರ್ಷಿಕವಾಗಿ ತರಕಾರಿ, ಕೃಷಿ, ಹಣ್ಣುಗಳ ಮಾರಾಟದಿಂದ ₹35 ಲಕ್ಷದಿಂದ ₹50 ಲಕ್ಷ ಆರ್ಥಿಕ ಲಾಭ ಪಡೆದಿದ್ದೇವೆ. ರೈತರು ಕಷ್ಟಪಟ್ಟು ಬೆಳೆಗಳು ಬೆಳೆದರೆ, ಉತ್ತಮ ಆರ್ಥಿಕ ಲಾಭ ಪಡೆಯಬಹುದು. ರಾಸಾಯನಿಕ ನಾಶಕಗಳನ್ನು ಬೆಳೆಗಳಿಗೆ ಹಾಕದೇ, ಪ್ರಾಣಿ, ಪಕ್ಷಿಗಳ ಗೊಬ್ಬರ ಬಳಕೆ ಮಾಡಿದರೆ ಹೆಚ್ಚು ಇಳುವರಿ ಬರುತ್ತದೆ ಎಂದು ಗುಡಿಪಲ್ಲಿ ಗ್ರಾಮದ ರೈತ ಎಸ್.ಎನ್.ರಾಮರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.