ADVERTISEMENT

ಭಗತ್‌ಸಿಂಗ್‌ ಆದರ್ಶಗಳು ಅನುಕರಣೀಯ

ಬಿಜೆಪಿ ಯುವ ಮೋರ್ಚಾ ಮತ್ತು ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಗತ್‌ಸಿಂಗ್‌ ಅವರ 112 ಜನ್ಮ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2019, 10:00 IST
Last Updated 28 ಸೆಪ್ಟೆಂಬರ್ 2019, 10:00 IST
ಕಾರ್ಯಕ್ರಮದಲ್ಲಿ ಭಗತ್‌ಸಿಂಗ್‌ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಭಗತ್‌ಸಿಂಗ್‌ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.   

ಚಿಕ್ಕಬಳ್ಳಾಪುರ: ‘ಬಾಲ್ಯದಿಂದಲೇ ದೇಶಪ್ರೇಮ ಮೈಗೂಡಿಸಿಕೊಂಡು ಸ್ವಾತಂತ್ರ್ಯ ಸಂಗ್ರಾಮಕ್ಕೆ ಚಿಕ್ಕ ವಯಸ್ಸಿನಲ್ಲಿ ತಮ್ಮನ್ನು ಅರ್ಪಿಸಿಕೊಂಡು ಪ್ರಾಣತೆತ್ತ ಮಹಾನ್‌ ಹೋರಾಟಗಾರ ಭಗತ್‌ಸಿಂಗ್‌ ಅವರು ಒಬ್ಬ ವ್ಯಕ್ತಿಯಾಗಿರದೆ ಒಂದು ಶಕ್ತಿಯಾಗಿದ್ದರು’ ಎಂದು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಲಕ್ಷ್ಮಿನಾರಾಯಣ ಗುಪ್ತಾ ಹೇಳಿದರು.

ನಗರದಲ್ಲಿ ಶನಿವಾರ ಬಿಜೆಪಿ ಯುವ ಮೋರ್ಚಾ ಮತ್ತು ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಭಗತ್‌ಸಿಂಗ್‌ ಅವರ 112 ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂದಿನ ಯುವಜನತೆಗೆ ತಮ್ಮ ತಂದೆ, ತಾಯಿ ಹೆಸರು ಹೊರತುಪಡಿಸಿ ಅಜ್ಜಿ, ತಾತ, ಮುತ್ತಾತರ ಹೆಸರು ಕೇಳಿದರೆ ಗೊತ್ತಿರುವುದಿಲ್ಲ. ಆದರೆ ಶೌರ್ಯ ಮತ್ತು ತ್ಯಾಗದ ಕಾರಣದಿಂದಾಗಿ ಭಗತ್ ಸಿಂಗ್ ಅವರ ಹೆಸರು ಇಂದಿಗೂ ಲಕ್ಷಾಂತರ ಯುವಜನರ ಮನದಲ್ಲಿ ನೆಲೆಸಿದೆ’ ಎಂದು ತಿಳಿಸಿದರು.

ADVERTISEMENT

ಬಿಜೆಪಿ ಹಿಂದುಳಿದ ವರ್ಗದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನರಸಪ್ಪ ಮಾತನಾಡಿ, ‘ಜಲಿಯನ್ ವಾಲಾಬಾಗ್ ಹತ್ಯಾಕಾಂಡದಿಂದ ಪ್ರೇರೇಪಿತರಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಜೀವನವನ್ನು ದೇಶಕ್ಕೆ ಅರ್ಪಿಸಿದ ಭಗತ್ ಸಿಂಗ್ ಅವರನ್ನು 1931ರ ಮಾರ್ಚ್ 23 ರಂದು ನೇಣಿಗೇರಿಸಲಾಯಿತು. ಅವರ ಆದರ್ಶಗಳನ್ನು ಇಂದಿನ ಯುವ ಜನತೆ ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕಿದೆ’ ಎಂದರು.

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಬಿ ಕಿರಣ್, ನಗರ ಘಟಕದ ಅಧ್ಯಕ್ಷ ಮಧುಚಂದ್ರ, ಮುಖಂಡರಾದ ದೇವರಾಜ್, ಅನಿಲ್, ನವೀನ್, ಮಲ್ಲಿಕಾ ಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.