ADVERTISEMENT

ಅಕ್ರಮ ಆರೋಪ, ಉನ್ನತಮಟ್ಟದ ತನಿಖೆಗೆ ಆಗ್ರಹ

ಎರಡನೇ ದಿನ ಪೂರೈಸಿ ಮೂರನೇ ದಿನಕ್ಕೆ ಕಾಲಿಟ್ಟ ಡಿಎಸ್‌ಎಸ್‌ ಪದಾಧಿಕಾರಿಗಳ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 14:32 IST
Last Updated 23 ಸೆಪ್ಟೆಂಬರ್ 2020, 14:32 IST
ಡಿಎಸ್‌ಎಸ್‌ ಪದಾಧಿಕಾರಿಗಳು ತಾಲ್ಲೂಕು ಪಂಚಾಯಿತಿ ಎದುರು ಧರಣಿ ನಡೆಸಿದರು.
ಡಿಎಸ್‌ಎಸ್‌ ಪದಾಧಿಕಾರಿಗಳು ತಾಲ್ಲೂಕು ಪಂಚಾಯಿತಿ ಎದುರು ಧರಣಿ ನಡೆಸಿದರು.   

ಚಿಕ್ಕಬಳ್ಳಾಪುರ: ಎಸ್‌ಸಿಪಿ, ಟಿಎಸ್‌ಪಿ ಯೋಜನೆಗಳಲ್ಲಿ ಕೋಟ್ಯಂತರ ರೂಪಾಯಿ ದುರುಪಯೋಗ ನಡೆದಿದ್ದು, ಈ ಬಗ್ಗೆ ರಾಜ್ಯಮಟ್ಟದ ಉನ್ನತ ಅಧಿಕಾರಿಗಳಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಡಿಎಸ್‌ಎಸ್‌ ಪದಾಧಿಕಾರಿಗಳು ತಾಲ್ಲೂಕು ಪಂಚಾಯಿತಿ ಎದುರು ನಡೆಸಿದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಬುಧವಾರ ಮೂರನೇ ದಿನಕ್ಕೆ ಕಾಲಿಟ್ಟಿತು.

ಧರಣಿಯಲ್ಲಿ ಮಾತನಾಡಿದ ಡಿಎಸ್‌ಎಸ್‌ ಜಿಲ್ಲಾ ಘಟಕದ ಸಂಚಾಲಕ ಬಿ.ವಿ.ಆನಂದ್, ‘ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದ ತಳ ಸಮುದಾಯಗಳ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ವರ್ಷ ಸಮಾಜ ಕಲ್ಯಾಣ ಇಲಾಖೆ ಮೂಲಕ ಕೋಟಿಗಟ್ಟಲೇ ಅನುದಾನ ಮಂಜೂರು ಮಾಡುತ್ತಿವೆ. ರಾಜಕಾರಣಿಗಳ ದ್ವಿಮುಖ ನೀತಿಯಿಂದಾಗಿ ದಲಿತರ ಅಭಿವೃದ್ಧಿ ಮರೀಚಿಕೆಯಾಗಿ ಉಳಿದಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿ, ಪಂಗಡಗಳು ಮತ್ತು ಇತರೆ ದುರ್ಬಲ ಸಮುದಾಯಗಳು ಆರ್ಥಿಕ, ಸಾಮಾಜಿಕವಾಗಿ ತುಂಬಾ ಹಿಂದುಳಿವೆ. ತಳ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸರ್ಕಾರಗಳ ಅನೇಕ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿವೆ. ಆದರೆ ಅವು ಮಧ್ಯವರ್ತಿಗಳ ಪಾಲಾಗಿ, ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ’ ಎಂದು ತಿಳಿಸಿದರು.

ADVERTISEMENT

‘ಎಸ್‌ಸಿಪಿ, ಟಿಎಸ್‌ಪಿ ಯೋಜನೆಗಳ ಅಡಿ ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ, ಲೋಕೋಪಯೋಗಿ, ಪಂಚಾಯತ್‌ ರಾಜ್‌ ಇಲಾಖೆ ಮತ್ತು ನಿರ್ಮಿತಿ ಕೇಂದ್ರ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ, ಕೆಆರ್‌ಐಡಿಎಲ್‌ಗೆ ದಲಿತರ ಅಭಿವೃದ್ಧಿಗೆ ಸಾಕಷ್ಟು ಹಣ ಬಿಡುಗಡೆಯಾಗುತ್ತಿದೆ. ಆದರೆ ಆ ಹಣ ಪರಿಶಿಷ್ಟ ಕಲ್ಯಾಣಕ್ಕೆ ಸದ್ಭಳಕೆಯಾಗದೆ ಅಧಿಕಾರಿಗಳು, ರಾಜಕಾರಣಿಗಳ ಜೇಬು ಸೇರುತ್ತಿದೆ’ ಎಂದು ಆರೋಪಿಸಿದರು.

‘ಅನೇಕ ಇಲಾಖೆಗಳಲ್ಲಿ ಇವತ್ತು ದಲಿತರ ಹೆಸರಿನಲ್ಲಿ ದಲಿತೇತರರು ಹಗಲು ದರೋಡೆ ನಡೆಸುತ್ತಿದ್ದಾರೆ. ದಲಿತರ ಅಭಿವೃದ್ಧಿಗೆ ಶ್ರಮಿಸಬೇಕಾದ ಸಮಾಜ ಕಲ್ಯಾಣ ಇಲಾಖೆ ಜವಾಬ್ದಾರಿ ಮರೆತು ಜಾಣ ಕುರುಡು ಪ್ರದರ್ಶಿಸುತ್ತಿದೆ. ಆಳುವ ಸರ್ಕಾರಗಳೆಲ್ಲ ಈ ವಿಚಾರದಲ್ಲಿ ಮೌನ ವಹಿಸುವುದು ಖಂಡನೀಯ’ ಎಂದು ಹೇಳಿದರು.

ಡಿಎಸ್‌ಎಸ್‌ ತಾಲ್ಲೂಕು ಘಟಕದ ಸಂಚಾಲಕ ಎ.ಕೃಷ್ಣಪ್ಪ ಮಾತನಾಡಿ, ‘ಎಸ್‌ಸಿಪಿ, ಟಿಎಸ್‌ಪಿ ಯೋಜನೆಗಳಲ್ಲಿ ಅಕ್ರಮ ನಡೆಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಕೃಷಿಹೊಂಡಗಳ ಹೆಸರಿನಲ್ಲಿ ನಡೆದ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿ ಪರಿಶಿಷ್ಟ ವರ್ಗದವರ ಅಭಿವೃದ್ಧಿಗೆ ಬರುವ ಹಣವನ್ನು ಪ್ರತ್ಯೇಕ ಬ್ಯಾಂಕ್‌ ಖಾತೆಯಲ್ಲಿಟ್ಟು ನಿರ್ವಹಿಸಬೇಕು. ಅಂಬೇಡ್ಕರ್, ಜಗಜೀವನ್ ರಾಮ್, ವಾಲ್ಮಿಕ ಭವನಗಳನ್ನು ಒಂದೇ ವಿನ್ಯಾಸದಲ್ಲಿ ನಿರ್ಮಿಸಬೇಕು’ ಎಂದು ತಿಳಿಸಿದರು.

‘ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಪ್ರತಿ ಮೂರು ತಿಂಗಳಿಗೊಮ್ಮೆ ದಲಿತ ಮುಖಂಡರ ವಿಶೇಷ ಸಭೆ ಕರೆದು, ಎಸ್‌ಸಿಪಿ, ಟಿಎಸ್‌ಪಿ ಯೋಜನೆಗಳ ಬಗ್ಗೆ ಚರ್ಚಿಸಿ ಪರಿಶೀಲನೆ ನಡೆಸಬೇಕು. ಕಲಿತ ಕಾಲೋನಿಗಳಲ್ಲಿ ಕಾಂಕ್ರಿಟ್‌ ರಸ್ತೆ, ಚರಂಡಿಗಳನ್ನು ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.

ಡಿಎಸ್‌ಎಸ್‌ ತಾಲ್ಲೂಕು ಘಟಕದ ಸಂಘಟನಾ ಸಂಚಾಲಕ ಅಂದಾರ್ಲಹಳ್ಳಿ ವೆಂಕಟೇಶ್‌, ಖಜಾಂಚಿ ತ್ಯಾಗರಾಜ್, ಪದಾಧಿಕಾರಿಗಳಾದ ಅಂದಾರ್ಲಹಳ್ಳಿ ಚಿನ್ನಪ್ಪ, ಸಿ.ವಿ.ವೆಂಕಟೇಶ್‌, ಕಣಿತಹಳ್ಳಿ ಮುನಿಯಪ್ಪ, ಕರಗಪ್ಪ, ಬಾಲಪ್ಪ, ಲಕ್ಷ್ಮಯ್ಯ, ಗಂಗಾಧರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.