ಗೌರಿಬಿದನೂರು: ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕಲ್ಲೂಡಿ ಕೆರೆಗೆ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಅಧಿಕಾರಿಗಳೊಂದಿಗೆ ಬುಧವಾರ ಭೇಟಿ ನೀಡಿ, ಕೆರೆಯ ಸಮಗ್ರ ಅಭಿವೃದ್ಧಿ ಸಂಬಂಧ ಚರ್ಚಿಸಿದರು.
ಬಳಿಕ ಮಾತನಾಡಿದ ಅವರು, ನಗರ ವ್ಯಾಪ್ತಿಯಲ್ಲಿರುವ 75 ಹೆಕ್ಟೇರ್ ವಿಸ್ತೀರ್ಣದ ಕಲ್ಲೂಡಿ ಕೆರೆ 5.5ಕಿ.ಮೀ ಸುತ್ತಳತೆ ಹೊಂದಿದೆ. 55 ಎಂಸಿಎಫ್‌ಟಿ ನೀರು ಶೇಖರಣಾ ಸಾಮರ್ಥ್ಯ ಹೊಂದಿದೆ. ಕೆರೆ ಅಭಿವೃದ್ಧಿಗೆ ಸರ್ಕಾರದಿಂದ ಈಗಾಗಲೇ ₹3 ಕೋಟಿ ಅನುದಾನ ಬಂದಿದೆ. ಈ ಅನುದಾನದಲ್ಲಿ ಕೆರೆ ದುರಸ್ತಿ ಜೊತೆಗೆ ನಗರವಾಸಿಗಳು ವಾಯು ವ್ಯವಹಾರ ನಡೆಸಲು ಅನುಕೂಲವಾಗುವಂತೆ ಸುತ್ತಲೂ ವಾಕಿಂಗ್ ಟ್ರ್ಯಾಕ್, ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಕ್ರಿಯಾಯೋಜನೆ ಸಿದ್ಧಪಡಿಸಿ ಸಲ್ಲಿಸುವಂತೆ ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಎಂ.ವಿ.ಶ್ರೀನಿವಾಸ್‌ಗೆ ಸೂಚಿಸಿದರು.
ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ, ಕಲ್ಲೂಡಿ ಕೆರೆ ಅಭಿವೃದ್ಧಿಯಿಂದ ಸುತ್ತಮುತ್ತಲಿನ ನಾಲ್ಕು ವಾರ್ಡ್‌ನ ಜನರು ಬೆಳಗ್ಗೆ ಸಂಜೆ ವಾಯುವಿಹಾರ ನಡೆಸಲು, ಉತ್ತಮ ಪರಿಸರ ದೊರೆಯಲಿದೆ ಎಂದರು.
ಎಂಜಿನಿಯರ್ ಎಂ.ವಿ.ಶ್ರೀನಿವಾಸ್, ನಗರ ಪ್ರದೇಶಕ್ಕೆ ಹೊಂದಿಕೊಂಡಿರುವ ಕಲ್ಲೂಡಿ ಕೆರೆಯನ್ನು ಶಾಸಕರ ಸೂಚನೆಯಂತೆ ಸಮಗ್ರ ಅಭಿವೃದ್ಧಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಕಾರ್ಯರೂಪಕ್ಕೆ ತರಲಾಗುವುದು ಎಂದರು.
ನಗರಸಭ ಉಪಾಧ್ಯಕ್ಷ ಫರೀದ್, ನಗರಸಭೆ ಸದಸ್ಯರಾದ ಖಲೀಂಉಲ್ಲಾ, ಶ್ರೀಕಾಂತ್, ನಗರಸಭೆ ಅಭಿಯಂತರೆ ಧಾನಿಯಾ ಫೈರೋಜ್, ಇನ್ನಿತರ ನಗರದ ಪ್ರಮುಖರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.