ADVERTISEMENT

ಹೋರಾಟವಿಲ್ಲದೆ ಬೇರೆ ಮಾರ್ಗವಿಲ್ಲ: ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ

‘ಜಲಾಗ್ರಹ’ ಸಮಾವೇಶದಲ್ಲಿ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 1:42 IST
Last Updated 3 ಅಕ್ಟೋಬರ್ 2025, 1:42 IST
ಗಿಡಕ್ಕೆ ನೀರು ಹಾಕುವ ಮೂಲಕ ಚಿಕ್ಕಬಳ್ಳಾಪುರದಲ್ಲಿ ಜಲಾಗ್ರಹ ಸಮಾವೇಶವನ್ನು ಗಣ್ಯರು ಉದ್ಘಾಟಿಸಿದರು
ಗಿಡಕ್ಕೆ ನೀರು ಹಾಕುವ ಮೂಲಕ ಚಿಕ್ಕಬಳ್ಳಾಪುರದಲ್ಲಿ ಜಲಾಗ್ರಹ ಸಮಾವೇಶವನ್ನು ಗಣ್ಯರು ಉದ್ಘಾಟಿಸಿದರು   

ಚಿಕ್ಕಬಳ್ಳಾಪುರ: ‘ನೀರಾವರಿ ವಿಚಾರದಲ್ಲಿ ಹೋರಾಟವಿಲ್ಲದೆ ನಮಗೆ ಬೇರೆ ಮಾರ್ಗವಿಲ್ಲ. ನಮ್ಮ ಹೋರಾಟಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಲುಪುವ ರೀತಿಯಲ್ಲಿ ಕಟ್ಟಬೇಕು’ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ತಿಳಿಸಿದರು. 

ನಗರದಲ್ಲಿ ಗುರುವಾರ ಶಾಶ್ವತ ನೀರಾವರಿ ಹೋರಾಟ ಸಮಿತಿ, ಯುವಶಕ್ತಿಯು ಹಮ್ಮಿಕೊಂಡಿದ್ದ, ‘ಜಲಾಗ್ರಹ’ ಜಂಟಿ ಕ್ರಿಯಾ ಸಮಿತಿಗೆ ಚಾಲನೆ ಸಮಾವೇಶದಲ್ಲಿ ಅವರು ಮಾತನಾಡಿದರು. 

‘ನೀರಾವರಿ ವಿಚಾರವಾಗಿ ಬಯಲು ಸೀಮೆಯ ಜಿಲ್ಲೆಗಳಲ್ಲಿ 30 ವರ್ಷಗಳಿಂದ ಹೋರಾಟ ನಡೆದಿದೆ. ಆದರೆ ಇನ್ನು ಮುಂದೆ ಮತ್ತೊಂದು ರೀತಿಯ ಬೇರೆ ಮಾರ್ಗದ ಹೋರಾಟವು ನಡೆಯಲಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಎಚ್ಚರಿಸುವೆ. ರೈತರು, ಕೃಷಿ ಕಾರ್ಮಿಕರು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲ ವರ್ಗದವರೂ ಈ ಹೋರಾಟದಲ್ಲಿ ಜೊತೆಯಾಗಬೇಕು’ ಎಂದು ಹೇಳಿದರು.   

ADVERTISEMENT

ಕೆ.ಸಿ ವ್ಯಾಲಿ ಮತ್ತು ಎಚ್‌.ಎನ್.ವ್ಯಾಲಿ ನೀರು ಮೂರು ಹಂತದಲ್ಲಿ ಶುದ್ಧೀಕರಣ ಆಗಬೇಕು. ಶುದ್ಧೀಕರಣವಾಗದ ಕಾರಣ ನಾನಾ ಸಮಸ್ಯೆಗಳು ಆವರಿಸಿವೆ ಎಂದು ಹೇಳಿದರು.

ದೇವನಹಳ್ಳಿ ಸುತ್ತ ರಾಜಕಾರಣಿಗಳ ಎಷ್ಟು ಎಕರೆ ಜಮೀನು ಇದೆ ಎನ್ನುವ ಮಾಹಿತಿ ಇದೆ. ಪಿಡಿಒಗಳು, ತಹಶೀಲ್ದಾರರು, ಉಪನೋಂದಣಾಧಿಕಾರಿಗಳು ರೈತರನ್ನು ಶೋಷಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಕೈಗಾರಿಕೆಗಳು ರೈತರಿಗೆ ಅನ್ನ, ಶಿಕ್ಷಣ ಕೊಡುತ್ತದೆಯೇ? ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೈಗಾರಿಕೆಗೆ ಭೂಮಿ ಸ್ವಾಧೀನ ವಿರೋಧಿಸಿ ರೈತರು ಮೂರು ವರ್ಷ ಹೋರಾಟ ನಡೆಸಿದರು. ರೈತ ನಾಯಕರ ಸಮಕ್ಷಮದಲ್ಲಿಯೇ ಈ ಅಧಿಸೂಚನೆ ವಾಪಸ್ ಪಡೆಯುತ್ತೇವೆ ಎಂದು ಹೇಳಿ ಸರ್ಕಾರ ಎರಡು ತಿಂಗಳಾಯಿತು. ಆದರೂ ಅಧಿಸೂಚನೆ ವಾಪಸ್ ಪಡೆದಿಲ್ಲ. ನಾಚಿಕೆ ಆಗಬೇಕು ಈ ಸರ್ಕಾರಕ್ಕೆ. ಬಂಡವಾಳಶಾಹಿಗಳಿಗೆ, ರಿಯಲ್ ಎಸ್ಟೇಟ್‌ನವರಿಗೆ ಗುಲಾಮಗಿರಿ ಮಾಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ಚೀನಾದಲ್ಲಿ ಒಬ್ಬ ಭ್ರಷ್ಟ ಕೃಷಿ ಸಚಿವನಿಗೆ ಸಂಬಂಧಿಸಿದ ಪ್ರಕರಣದಲ್ಲಿ ಆರೇ ತಿಂಗಳಲ್ಲಿ ವಿಚಾರಣೆ ನಡೆದು ಜೀವಾವಧಿ ಶಿಕ್ಷೆ ವಿಧಿಸುವರು. ಆದರೆ ನಮ್ಮಲ್ಲಿ ಮಾಜಿ ಮುಖ್ಯಮಂತ್ರಿ ವಿಚಾರಣೆಗಾಗಿ ವರ್ಷಗಳೇ ಕಳೆದರೂ ನ್ಯಾಯಾಲಯಕ್ಕೆ ಹೋಗದ ಪರಿಸ್ಥಿತಿ ಇದೆ. ಸಚಿವರು, ತಹಶೀಲ್ದಾರರು, ನೋಂದಣಾಧಿಕಾರಿ, ಉಪವಿಭಾಗಾಧಿಕಾರಿ ಸೇರಿದಂತೆ ನೌಕರಶಾಹಿಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ’ ಎಂದರು.  

ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ‘ನೀರಿನ ರಕ್ಷಣೆ, ಬಳಕೆಯ ಬಗ್ಗೆ ಪ್ರಜ್ಞೆ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ನಾವು ಹೋರಾಟದ ಅಂಶಗಳನ್ನು ಕಳೆದುಕೊಳ್ಳುತ್ತೇವೆ. ಈ ಸಭೆಯು ಒಂದು ಸಂಗಮ. ಹೋರಾಟಕ್ಕೆ ಅಗತ್ಯವಾದ ಯುವಶಕ್ತಿಯನ್ನು ಎಲ್ಲರೂ ಸಂಘಟಿಸಬೇಕು’ ಎಂದರು. 

‘ನಮ್ಮ ಕೆರೆ, ನದಿಗಳು ಬತ್ತಿರಬಹುದು. ಆದರೆ ಹೋರಾಟದ ಪ್ರಜ್ಞೆ ಬತ್ತಿಲ್ಲ. ಅದನ್ನು ಮತ್ತೆ ಪುನಶ್ಚೇತನಗೊಳಿಸಬೇಕು. ಕಳೆದ 50 ವರ್ಷಗಳ ಹೋರಾಟದಲ್ಲಿ ಸಾಕಷ್ಟು ಅನುಭವ ಪಡೆದವರು ಇಲ್ಲಿ ಇದ್ದೀರಿ. ಎಲ್ಲರೂ ಸೇರಿ ಈ ಜಿಲ್ಲೆಗಳ ನೀರಾವರಿ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯೋಣ’ ಎಂದು ಆಶಿಸಿದರು.

ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ, ‘ಬಿಡಿ ಬಿಡಿ ಹೋರಾಟ ಮಾಡಿದರೆ ಖಂಡಿತ ನಾವು ನೀರಿನ ಹಕ್ಕುಗಳನ್ನು ಪಡೆಯಲು ಸಾಧ್ಯವಿಲ್ಲ. ಮೂರು ಜಿಲ್ಲೆಗಳ ಜನರು ಪೆನ್ನಾರು ನದಿಕೊಳ್ಳದ ವ್ಯಾಪ್ತಿಗೆ ಒಳಪಡುತ್ತೇವೆ. ಇಲ್ಲಿಂದ ನಮಗೆ ನೀರು ಕೊಡಬೇಕು ಎನ್ನುವ ಆಲೋಚನೆಯನ್ನು ಯಾವುದೇ ಸರ್ಕಾರಗಳು ಮಾಡಿಲ್ಲ’ ಎಂದು ಕಿಡಿಕಾರಿದರು.

‘ಬಯಲು ಸೀಮೆಯ ಈ ಜಿಲ್ಲೆಗಳ ಕುಡಿಯುವ ನೀರಿನಲ್ಲಿ ಯುರೇನಿಯಂ ಇದೆ ಎಂದು ವೈಜ್ಞಾನಿಕ ಸಂಸ್ಥೆಗಳು ತಿಳಿಸುತ್ತಿವೆ. ಆದರೆ ಸರ್ಕಾರಗಳು ಎತ್ತನಹೊಳೆ ಎನ್ನುವ ಬಿಳಿಯಾನೆ ಸಾಕುತ್ತಿವೆ. ಎತ್ತಿನಹೊಳೆಯಿಂದ ಹನಿ ನೀರೂ ಸಹ ನಮ್ಮ ಜಿಲ್ಲೆಗಳಿಗೆ ಬರುವುದಿಲ್ಲ’ ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರ ಎಚ್‌.ವಿ.ವಾಸು, ಸಿಪಿಎಂನ ಅನಿಲ್ ಕುಮಾರ್ ಆವುಲಪ್ಪ, ಲಕ್ಷ್ಮಯ್ಯ, ಹೋರಾಟಗಾರರಾದ ಸುಲೋಚನಾ, ಕೃಷಿ ವಿಜ್ಞಾನಿ ವೆಂಕಟರೆಡ್ಡಿ, ಎಂ.ಆರ್.ಲಕ್ಷ್ಮಿನಾರಾಯಣ್, ಹೊಳಲಿ ಪ್ರಕಾಶ್, ಅಬ್ಬಣಿ ಶಿವಪ್ಪ, ಸುಷ್ಮಾ ಶ್ರೀನಿವಾಸ್, ಮಳ್ಳೂರು ಹರೀಶ್ ಮತ್ತಿತರರು ಪಾಲ್ಗೊಂಡಿದ್ದರು. 

ಜಲಾಗ್ರಹ ಸಮಾವೇಶದಲ್ಲಿ ಭಾಗಿಯಾದವರು

‘ಎರಡನೇ ಅವಧಿ; ಜಂಬ ಕೊಚ್ಚಿಕೊಳ್ಳುವ ಸಿ.ಎಂ’‌

‘ನಾನು ಎರಡನೇ ಅವಧಿಗೆ ಮುಖ್ಯಮಂತ್ರಿ ಆಗಿದ್ದೇನೆ ಎಂದು ಮುಖ್ಯಮಂತ್ರಿ ಜಂಬ ಕೊಚ್ಚಿಕೊಳ್ಳುವರು. ಆದರೆ ಈ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ನೀಡಲು ಸಾಧ್ಯವಾಗಿಲ್ಲ’ ಎಂದು ಗೋಪಾಲಗೌಡ ಅವರು ಕಿಡಿಕಾರಿದರು. ರಾಜ್ಯಪಾಲರು ಕೇಂದ್ರ ಸರ್ಕಾರದ ಏಜೆಂಟರಾಗಿದ್ದಾರೆ. ರಾಜ್ಯಪಾಲರ ಕಚೇರಿಗಳು ರಾಜಕೀಯ ಕೇಂದ್ರಗಳಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಸಮಿತಿಗೆ ಗೋಪಾಲಗೌಡರ ಅಧ್ಯಕ್ಷತೆ

‘ಜಲಾಗ್ರಹ’ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷರಾಗಿ ನ್ಯಾಯಮೂರ್ತಿ ವಿ.ಗೋಪಾಲಗೌಡ ನೇಮಕವಾದರು. ಮುಂದಿನ ದಿನಗಳಲ್ಲಿ ಸಮಿತಿಯ ಪದಾಧಿಕಾರಿಗಳ ನೇಮಕ ಹೋರಾಟದ ರೂಪುರೇಷೆಗಳು ಸಿದ್ಧಗೊಳ್ಳಲಿವೆ.

ಪೆನ್ನಾರ್ ಕನ್ನಡಿಗರ ಒಗ್ಗಟ್ಟಿಗೆ ಕರೆ

ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ಮಾತನಾಡಿ ಕೋಲಾರ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೆನ್ನಾರ್ ನದಿ ಕೊಳ್ಳ ವ್ಯಾಪ್ತಿಯ ಜನರು ಒಗ್ಗಟ್ಟಾಗಬೇಕು. ಪೆನ್ನಾರ್ ಕನ್ನಡಿಗರು ಒಗ್ಗೂಡದಿದ್ದರೆ ನೀರಿನ ವಿಚಾರವಾಗಿ ಈ ಜಿಲ್ಲೆಗಳಿಗೆ ಅನ್ಯಾಯವಾಗಲಿದೆ ಎಂದು ಹೇಳಿದರು.  ಪೆನ್ನಾರ್ ನದಿಕೊಳ್ಳದ ಈ ಜಿಲ್ಲೆಗಳ ನಾವು ಇಲ್ಲಿಯವರೆಗೂ ಈ ನದಿಯಿಂದ ಒಂದು ಟಿಎಂಸಿ ಅಡಿ ನೀರು ಸಹ ಪಡೆಯಲು ಸಾಧ್ಯವಾಗಿಲ್ಲ.   ಕೃಷ್ಣಾ ನದಿ ನೀರಿಗಾಗಿ ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಈಗ ಯಾರೂ ಹೋರಾಟ ಮಾಡದೆಯೇ ಕೃಷ್ಣಾ ಕಾವೇರಿ ಮತ್ತು ಪೆನ್ನಾರ್ ಜೋಡಿಸುವ ಕೆಲಸ ಆಗುತ್ತಿದೆ. ಮತ್ತೆ ನಾವು ಸುಮ್ಮನೆ ಇದ್ದರೆ ಈ ನೀರನ್ನು ಉತ್ತರ ಕರ್ನಾಟಕದವರು ತೆಗೆದುಕೊಂಡು ಹೋಗುವರು ಎಂದು ಹೇಳಿದರು. ಕೆ.ಸಿ. ವ್ಯಾಲಿ ಮತ್ತು ಎಚ್‌.ಎನ್.ವ್ಯಾಲಿಯ ಎರಡು ಹಂತದಲ್ಲಿ ಶುದ್ಧೀಕರಿಸಿ ಈ ಜಿಲ್ಲೆಗಳಿಗೆ ಹರಿಸುತ್ತಿರುವ ನೀರು ದೊಡ್ಡ ಅಪಾಯ ತರಲಿವೆ ಎಂದರು.

ಮೂರು ಜಿಲ್ಲೆಯ ಹೋರಾಟಗಾರರು ಭಾಗಿ

ಸಮಾವೇಶದಲ್ಲಿ ಬೆಂಗಳೂರು ಗ್ರಾಮಾಂತರ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತ ಸಂಘ ಶಾಶ್ವತ ನೀರಾವರಿ ಹೋರಾಟ ಸಮಿತಿ ಯುವಶಕ್ತಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡು ಕಾರ್ಯಕರ್ತರು ಪಾಲ್ಗೊಂಡಿದ್ದರು. ವಿವಿಧ ರಾಜಕೀಯ ಪಕ್ಷಗಳ ನಾಯಕರೂ ಸಹ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.