
ಬಾಗೇಪಲ್ಲಿ ಪಟ್ಟಣದ ಶಾದಿ ಮಹಲ್ ಮುಂದೆ ಹಮ್ಮಿಕೊಂಡಿದ್ದ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ ವಸತಿ, ವಕ್ಫ್, ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ.ಜೆಢ್ ಜಮೀರ್ ಅಹಮದ್ ಖಾನ್ ಹಕ್ಕು ಪತ್ರಗಳನ್ನು ವಿತರಿಸಿದರು.
ಬಾಗೇಪಲ್ಲಿ: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದಿವಾಳಿ ಆಗಿದೆ, ಹಣಕಾಸಿನ ಪರಿಸ್ಥಿತಿ ಹದಗೆಟ್ಟಿದೆ ಎಂದು ಬಿಜೆಪಿ ಆರೋಪಿಸುತ್ತಿರುವುದು ಶುದ್ಧ ಸುಳ್ಳು. ಸರ್ಕಾರದ ಹಣಕಾಸಿನ ಸ್ಥಿತಿ ಉತ್ತಮವಾಗಿದೆ’ ಎಂದು ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್ ಮತ್ತು ವಸತಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿಯಿಂದ ಬುಧವಾರ ಹಮ್ಮಿಕೊಂಡಿದ್ದ ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.
‘2028ರಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಡಜನರಿಗೆ ಒಂದು ನಿವೇಶನ, ಮನೆ ಹಂಚಿಕೆ ಮಾಡಿಲ್ಲ. ನಾನು ವಸತಿ ಸಚಿವನಾದ ಬಳಿಕ ಮನೆಗಳಿಗೆ ಬೇಡಿಕೆ ಇತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಚರ್ಚಿಸಿ, ಬಡಜನರಿಗೆ ಮನೆ ಕಲ್ಪಿಸಿದ್ದೇನೆ’ ಎಂದರು.
‘ಬಿಜೆಪಿ ಬಡಜನರಿಗೆ ಕಲ್ಯಾಣ ಯೋಜನೆ ಮಾಡಿಲ್ಲ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದ ಮನೆ, ನಿವೇಶನ ರಹಿತರಿಗೆ ನಿವೇಶನ, ಮನೆ ಕಲ್ಪಿಸಲಾಗುವುದು. ಬೇಡಿಕೆಯಂತೆ ಹಂತ ಹಂತದಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ, ಮನೆ ನಿರ್ಮಿಸಿಕೊಡಲಾಗುವುದು. ಸರ್ಕಾರ 6ನೇ ಗ್ಯಾರಂಟಿ ಘೋಷಣೆ ಮಾಡದೇ ಇದ್ದರೂ, ಬಡಜನರ ಕಲ್ಯಾಣಕ್ಕೆ ಮನೆಗಳ ಗ್ಯಾರಂಟಿ ನೀಡಲಾಗುವುದು’ ಎಂದರು.
‘ಮನೆ ನಿರ್ಮಾಣಕ್ಕೆ ₹7 ಲಕ್ಷ ಅಗತ್ಯ ಇದೆ. ಕಾಂಗ್ರೆಸ್ ಎಲ್ಲ ಜಾತಿ, ಧರ್ಮವನ್ನು ಸಮಾನತೆಯಿಂದ ಕಾಣುತ್ತದೆ. ಅಲ್ಪಸಂಖ್ಯಾತರ ಯೋಜನೆಗಳಿಗೆ ಹೆಚ್ಚು ಅನುದಾನವನ್ನು ರಾಜ್ಯ ಸರ್ಕಾರ ಜಾರಿ ಮಾಡಿದೆ. ಜನರಿಗೆ ಕಾಂಗ್ರೆಸ್ ಮೇಲೆ ವಿಶ್ವಾಸ, ನಂಬಿಕೆ ಇದೆ. ಇದರಿಂದ ಮುಂದಿನ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಪ್ರಜಾಪ್ರಭುತ್ವದಲ್ಲಿ ಸಂವಿಧಾನವೇ ಮಹಾಗ್ರಂಥ. ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಎಲ್ಲರಿಗೂ ಹಕ್ಕುಗಳು ಸಿಗುತ್ತಿದೆ. ಕಾಂಗ್ರೆಸ್ ಸರ್ಕಾರಕ್ಕೆ ಸಂವಿಧಾನದ ಮೇಲೆ ವಿಶ್ವಾಸ ಇದೆ. ಬಿಜೆಪಿಯವರಿಗೆ ಸಂವಿಧಾನದ ಮೇಲೆ ವಿಶ್ವಾಸ ಇಲ್ಲ. ಸಂವಿಧಾನವನ್ನು ಬದಲಾಯಿಸುವ ಹೇಳಿಕೆ ನೀಡಿರುವುದು ಬಿಜೆಪಿಯ ರಾಜಕೀಯ ಬಣ್ಣ ಜಗಜ್ಜಾಹಿರು ಆಗಿದೆ’ ಎಂದು ತಿಳಿಸಿದರು.
‘ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಜನಪರ ಶಾಸಕರಾಗಿದ್ದಾರೆ. 3 ತಾಲ್ಲೂಕುಗಳ ಅಭಿವೃದ್ಧಿಗೆ ಸಚಿವರ ಬಳಿ ಕಡತ ತರುತ್ತಾರೆ. ಅನುದಾನ ಬಿಡುಗಡೆ ಮಾಡುವವರೆಗೂ ಕದಲಲ್ಲ. ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದರೆ ಸಚಿವ ಸಂಪುಟದ ಪುನರ್‍ರಚನೆಯಲ್ಲಿ ಸುಬ್ಬಾರೆಡ್ಡಿ ಸಚಿವ ಆಗುತ್ತಾರೆ ಎಂಬ ವಿಶ್ವಾಸ ನನಗೆ ಇದೆ’ ಎಂದು ಸಚಿವ ಜಮೀರ್ ಹೇಳಿಕೆಗೆ ಅಭಿಮಾನಿಗಳು ಸಿಳ್ಳೆ ಹೊಡೆದರು.
ಸಿ.ಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್ ಮಾತನಾಡಿ, ಸರ್ವಜನಾಂಗದ ಶಾಂತಿಯ ತೋಟದಲ್ಲಿ ನಾವೆಲ್ಲರೂ ಸಮಾನರು. ಸಹಬಾಳ್ವೆಯಿಂದ, ಸಹೋದರತೆಯಿಂದ ಇರಬೇಕು. ಕಾಂಗ್ರೆಸ್ ಸರ್ಕಾರ ಬಡಜನರ ಕಲ್ಯಾಣ ಕಾರ್ಯಕ್ರಮ ಜಾರಿ ಮಾಡಿದೆ. ಸರ್ಕಾರ ಮಕ್ಕಳ ಶಿಕ್ಷಣಕ್ಕೆ ಉಚಿತ ಶಿಕ್ಷಣ, ಊಟ, ಆರೋಗ್ಯ ಕಲ್ಪಿಸಿದೆ. ವಸತಿ ಶಾಲೆಗಳನ್ನು ಮಾಡಲಾಗಿದೆ ಎಂದರು.
ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಸುಧಾಕರ್ ಮಾತನಾಡಿ, ‘ನವೆಂಬರ್ 23 ರಂದು ಮುಖ್ಯಮಂತ್ರಿ ಜಿಲ್ಲೆಯ ಕಾಮಗಾರಿ ಲೋಕಾರ್ಪಣೆ ಮಾಡಲು ಶಿಡ್ಲಘಟ್ಟಕ್ಕೆ ಬರುತ್ತಾರೆ. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಬಾಗೇಪಲ್ಲಿಯ ಕಾಮಗಾರಿಗಳಿಗೆ ಶಿಡ್ಲಘಟ್ಟದಲ್ಲಿಯೇ ಲೋಕಾರ್ಪಣೆ ಮಾಡಿಸಲು ಮನಸ್ಸು ಮಾಡಬೇಕು’ ಎಂದು ಮನವಿ ಮಾಡಿದರು.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ‘ಅಲ್ಪಸಂಖ್ಯಾತರ ವಸತಿ ಶಾಲೆ, ಹುಸೇನ್ ಷಾ ವಲಿ ದರ್ಗಾ ಅಭಿವೃದ್ಧಿಗೆ ಸರ್ಕಾರ ₹30 ಕೋಟಿ ಬಿಡುಗಡೆ ಮಾಡಿದೆ. ಅಲ್ಪಸಂಖ್ಯಾತರ ಮಕ್ಕಳು ಶಿಕ್ಷಣ ಪಡೆಯಬೇಕು. 3 ತಾಲ್ಲೂಕು ಇರುವುದರಿಂದ ವಸತಿಗಳ ಬೇಡಿಕೆ ಇದೆ. ಸರ್ಕಾರ ಮನಸ್ಸು ಮಾಡಿ 3 ತಾಲ್ಲೂಕುಗಳ ಫಲಾನುಭವಿಗಳಿಗೆ ಮನೆಗಳ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಬೇಕು’ ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಭಾಸ್ಕರ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅತೀಕ್‍ಭಾಷ, ತಹಶೀಲ್ದಾರ್ ಮನೀಷಾ ಎನ್.ಪತ್ರಿ, ತಹಶೀಲ್ದಾರ್ ಬಿ.ಕೆ.ಶ್ವೇತಾ, ಇಒ ಜಿ.ವಿ.ರಮೇಶ್, ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಎಂ.ಎಲ್.ಬಿಂದುಮತಿ, ಪಿಡಿಒ ನಾಗಮಣಿ, ಅಧ್ಯಕ್ಷೆ ನಾಗಮಣಿ, ಎಚ್.ವಿ.ನಾಗರಾಜ್, ಎಚ್.ಎಸ್.ನರೇಂದ್ರ, ಮಹಮದ್ ಎಸ್.ನೂರುಲ್ಲಾ, ನಿಜಾಮುದ್ದೀನ್ ಇದ್ದರು.
ಬಾಗೇಪಲ್ಲಿ ಚೇಳೂರು ಗುಡಿಬಂಡೆ ತಾಲ್ಲೂಕುಗಳಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ 497 ಮಂದಿಗೆ ಹಕ್ಕುಪತ್ರಗಳನ್ನು ವಿತರಿಸಲಾಯಿತು. ತಾಲ್ಲೂಕಿನ ಪರಗೋಡಿನ ಚಿತ್ರಾವತಿ ಬ್ಯಾರೇಜಿಗೆ ಸಂಚರಿಸುವ ಮಾರ್ಗದ ಸಮೀಪ ₹16 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ ಮೊರಾರ್ಜಿ ಅಲ್ಪಸಂಖ್ಯಾತರ ವಸತಿ ಶಾಲೆಗೆ ಹಾಗೂ ಕೊಡಿಕೊಂಡ ರಸ್ತೆಯಲ್ಲಿನ ಪಟ್ಟಣದ ಅವಧೂತ ಹುಸೇನ್ ಷಾ ವಲಿ ದರ್ಗಾದ ಅಭಿವೃದ್ಧಿಯ ₹2 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.