ADVERTISEMENT

5ರಿಂದ ಭೋಗೇನಹಳ್ಳಿಯಿಂದ ಜಾಥಾ

ಪರಿಶಿಷ್ಟ ಜಾತಿಯ ಮೇಲಿನ ದೌರ್ಜನ್ಯಕ್ಕೆ ದಲಿತ ಸಂಘರ್ಷ ಸಮಿತಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 2:39 IST
Last Updated 3 ಮಾರ್ಚ್ 2021, 2:39 IST

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿ ಜನರ ಮೇಲಿನ ದೌರ್ಜನ್ಯ ತಡೆಗೆ ಆಗ್ರಹಿಸಿ ಮತ್ತು ಗುಡಿಬಂಡೆ ತಾಲ್ಲೂಕಿನ ಭೋಗೇನಹಳ್ಳಿಯಲ್ಲಿ ಪರಿಶಿಷ್ಟ ಸಮುದಾಯದ ಲಕ್ಷ್ಮಿನರಸಿಂಹಪ್ಪ ಅವರ ಕೊಲೆ ಖಂಡಿಸಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕವು ಮಾ.5 ಮತ್ತು 6ರಂದು ಭೋಗೇನಹಳ್ಳಿಯಿಂದ ಗುಡಿಬಂಡೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದೆ.

ಮಂಗಳವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎನ್.ವೆಂಕಟೇಶ್, ‘ಜಿಲ್ಲೆಯಲ್ಲಿ ಪರಿಶಿಷ್ಟ ಸಮುದಾಯದ ಮೇಲಿನ ದೌರ್ಜನ್ಯ ತಡೆಯಲು ಪೊಲೀಸರು ಮತ್ತು ಜಿಲ್ಲಾಡಳಿತ ವಿಫಲವಾಗಿದೆ’ ಎಂದು ದೂರಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಪರಿಶಿಷ್ಟ ಸಮುದಾಯಗಳ ಬಗ್ಗೆ ಕಾಳಜಿ ಇಲ್ಲ. ಅವರಿಗೆ ಕಾಳಜಿ ಇದಿದ್ದರೆ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸುತ್ತಿದ್ದರು. ಮಾನವೀಯವಾಗಿ ಸ್ಪಂದಿಸುತ್ತಿದ್ದರು ಎಂದರು.

ADVERTISEMENT

ಕರ್ನಾಟಕ, ಆಂಧ್ರಪ್ರದೇಶದ 2 ಸಾವಿರ ಮಂದಿ ಸಮುದಾಯದವರು ಈ ಜಾಥಾದಲ್ಲಿ ಪಾಲ್ಗೊಳ್ಳುವರು. ಸಮಿತಿಯ ರಾಜ್ಯ ಮಟ್ಟದ ಮುಖಂಡರು ಭಾಗಿಯಾಗುವರು ಎಂದು ಹೇಳಿದರು.

ಪರಿಶಿಷ್ಟರ ಮೇಲೆ ದೌರ್ಜನ್ಯ ಎಸಗುವವರಿಗೆ ಪೊಲೀಸರು, ಜನಪ್ರತಿನಿಧಿಗಳೇ ರಕ್ಷಣೆ ನೀಡುತ್ತಿದ್ದಾರೆ. ನಮಗೆ ಸ್ಥಳೀಯ ಮತ್ತು ಜಿಲ್ಲೆಯ ಪೊಲೀಸ್ ವ್ಯವಸ್ಥೆ ಬಗ್ಗೆ ನಂಬಿಕೆ ಇಲ್ಲ. ಆದ ಕಾರಣ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ಜಿ.ಗಂಗಪ್ಪ ಮಾತನಾಡಿ, ’ಮಾ.5ರಂದು ಬೆಳಿಗ್ಗೆ 11ಕ್ಕೆ ಕಾಲ್ನಡಿಗೆ ಜಾಥಾ ಆರಂಭವಾಗಲಿದೆ. ಅಂದು ರಾತ್ರಿ ಬೀಚಗಾನಹಳ್ಳಿಯಲ್ಲಿ ವಾಸ್ತವ್ಯ ಹೂಡಲಾಗುವುದು. 6ರಂದು ಗುಡಿಬಂಡೆ ತಲುಪಿ ಅಲ್ಲಿ ಸಾರ್ವಜನಿಕ ಬಹಿರಂಗ ಸಭೆ ನಡೆಸಲಾಗುವುದು‘ ಎಂದರು.

ಪರಿಶಿಷ್ಟರ ಮೇಲೆ ದೌರ್ಜನ್ಯ ನಡೆಸುವ ಮತ್ತು ಲಕ್ಷ್ಮಿನರಸಿಂಹಪ್ಪ ಕೊಲೆ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲ್ಲೂಕು ಆಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

’ಭೋಗೇನಹಳ್ಳಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಲಕ್ಷ್ಮಿನರಸಿಂಹಪ್ಪ ಅವರನ್ನು ಶ್ರೀರಾಮರೆಡ್ಡಿ ಮತ್ತು ಸಹಚರರು ಹತ್ಯೆ ಮಾಡಿದರು. ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಈ ಕೊಲೆ ಸಂಸ್ಕೃತಿ ನಿಲ್ಲಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ‘ ಎಂದರು.

ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದರೆ ಈ ಹತ್ಯೆಯೇ ಜರುಗುತ್ತಿರಲಿಲ್ಲ. ಪ್ರಕರಣದ ಬಗ್ಗೆ ನಿರ್ಲಕ್ಷ್ಯವಹಿಸಿದರು. ಜಿಲ್ಲೆಯಲ್ಲಿ ಏಕಸ್ವಾಮ್ಯದ ಅಧಿಕಾರ ಗಟ್ಟಿಯಾಗುತ್ತಿದೆ. ಪರಿಶಿಷ್ಟರ ಮೇಲೆ ನಿರಂತರವಾಗಿ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿವೆ ಎಂದು ಹೇಳಿದರು.

ಸತತವಾಗಿ ಒಂದೇ ಠಾಣೆಯಲ್ಲಿ ಐದಾರು ವರ್ಷ ಕೆಲಸ ನಿರ್ವಹಿಸಿದ ಪೊಲೀಸರು ಅಲ್ಲಿನ ಜನಪ್ರತಿನಿಧಿಗಳ, ಪ್ರಭಾವಿಗಳ ಮರ್ಜಿಗೆ ಒಳಗಾಗಿರುತ್ತಾರೆ. ಆದ್ದರಿಂದ ಬೇರೆ ಠಾಣೆಗಳಿಗೆ ವರ್ಗಾವಣೆ ಮಾಡಬೇಕು‘ ಎಂದರು.

ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಾಂಸ್ಕೃತಿಕ ಸಂಚಾಲಕ ಬಿ.ವಿ.ಆನಂದ್, ‘ಜಿಲ್ಲಾಡಳಿತ, ಪೊಲೀಸರು ಹಾಗೂ ಜನಪ್ರತಿನಿಧಿಗಳು ಪರಿಶಿಷ್ಟರ ಪರವಾಗಿಲ್ಲ. ಅವರ ಹಿತವನ್ನು ಕಾಯುತ್ತಿಲ್ಲ’ ಎಂದು ಆರೋಪಿಸಿದರು.

ಬಿ.ವಿ.ವೆಂಕಟರಮಣಪ್ಪ, ಎ.ಕೃಷ್ಣಪ್ಪ ಹಾಗೂ ಮುಖಂಡರು ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.