ADVERTISEMENT

ಚಿಂತಾಮಣಿ: ಕಿಸಾನ್ ಸಂಘದಿಂದ ಹಕ್ಕೊತ್ತಾಯ ಜಾಥಾ

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 6:28 IST
Last Updated 13 ಜನವರಿ 2022, 6:28 IST
ಚಿಂತಾಮಣಿಯಲ್ಲಿ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತೀಯ ಕಿಸಾನ್ ಸಂಘಟನೆಯು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು
ಚಿಂತಾಮಣಿಯಲ್ಲಿ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತೀಯ ಕಿಸಾನ್ ಸಂಘಟನೆಯು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು   

ಚಿಂತಾಮಣಿ: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತೀಯ ಕಿಸಾನ್ ಸಂಘವು ಹಕ್ಕೊತ್ತಾಯ ಜಾಥಾ, ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮಂಗಳವಾರ ಮನವಿ ಸಲ್ಲಿಸಿತು.

ಕಿಸಾನ್ ಸಂಘಟನೆಯ ನೂರಾರು ಕಾರ್ಯಕರ್ತರು ನಗರದ ಪ್ರವಾಸಿ ಮಂದಿರ ಬಳಿ ಜಮಾವಣೆಗೊಂಡರು. ರೈತರ ಬೇಡಿಕೆಗಳ ಬಗ್ಗೆ ನಾಮಫಲಕಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತಾ ನಗರದಲ್ಲಿ ಜಾಥಾ ನಡೆಸಿದರು. ಜಾಥಾ ಮೂಲಕ ತಾಲ್ಲೂಕು ಕಚೇರಿಗೆ ಬಳಿ ತೆರಳಿದರು. ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕಿಸಾನ್ ಸಂಘಟನೆಯ ಮುಖಂಡ ಕೆ.ಎಲ್.ಶ್ರೀನಾಥ್ ಮಾತನಾಡಿ, ‘ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳಲ್ಲಿ ರೈತರು ಸಾಲವನ್ನು ಮಾಡಿರುತ್ತಾರೆ. ಎರಡು ವರ್ಷಗಳಿಂದ ಕೊರೊನಾ ಮತ್ತು ಅತಿವೃಷ್ಟಿಯಿಂದ ಸಾಲ ಮರುಪಾವತಿ ಮಾಡಲು ಸಾಧ್ಯವಾಗಿಲ್ಲ. ಸಾಲವನ್ನು ಮನ್ನಾ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಕಾರ್ಯದರ್ಶಿ ಎನ್.ಆರ್.ಆನಂದ್ ಮಾತನಾಡಿ, ‘ಖಾಸಗಿ ಆಸ್ಪತ್ರೆಗಳಲ್ಲಿ 60 ವರ್ಷ ಮೇಲ್ಪಟ್ಟ ಎಲ್ಲ ರೈತರಿಗೆ ₹10 ಲಕ್ಷ ವರೆಗಿನ ಉಚಿತ ವೈದ್ಯಕೀಯ ಸೌಲಭ್ಯ ನೀಡುವ ಬಗ್ಗೆ ಸರ್ಕಾರವು ಮಸೂದೆ ಜಾರಿಗೆ ತರಬೇಕು. ರೈತರ ಮಕ್ಕಳಿಗೆ ವೃತ್ತಿಪರ ಶಿಕ್ಷಣ ಮತ್ತು ಉನ್ನತ ಶಿಕ್ಷಣವನ್ನು ಶುಲ್ಕರಹಿತವಾಗಿ ನೀಡಬೇಕು. ಬಗರ್ ಹುಕುಂ ಸಾಗುವಳಿಯಲ್ಲಿ ಮಂಜೂರಾದ ಭೂಮಿಗೆ ಪಹಣಿಯಲ್ಲಿ ಪಿ.ನಂಬರ್ ನೀಡಿದ್ದು ಖಾತೆ ಮಾಡಿಸಿಕೊಳ್ಳಲು ಆಗುತ್ತಿಲ್ಲ. ಈ ತೊಂರೆಯನ್ನು ನಿವಾರಿಸಿ ಖಾತೆ ಮಾಡಿಸಿಕೊಳ್ಳಲು ಕ್ರಮಕೈಗೊಳ್ಳಬೇಕು’ ಎಂದರು.

‘ರೈತರಿಗೆನಿಗದಿತ ಬೆಲೆಯಲ್ಲಿ ಬಿತ್ತನೆ ಬೀಜ, ಗೊಬ್ಬರ, ಕೀಟ ನಿವಾರಕಗಳನ್ನು ಒದಗಿಸಬೇಕು. ಪ್ಯಾಕೆಟ್ ಮೇಲೆನಿಗದಿತ ಬೆಲೆಯನ್ನು ನಮೂದಿಸಬೇಕು. ಜಿಲ್ಲೆಯಲ್ಲಿ 1.30 ಲಕ್ಷ ರೇಷ್ಮೆ ಬೆಳೆಗಾರರಿದ್ದು, 1.96 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆ ಬೆಳೆಯುತ್ತಾರೆ. ಸುಮಾರು 3 ಸಾವಿರ ಜನ ರೀಲರ್ಸ್ ಇರುವುದರಿಂದ ತರಬೇತಿ ಕೇಂದ್ರವನ್ನು ಸ್ಥಾಪಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.