ADVERTISEMENT

‘ಸಾಮಾಜಿಕ ಕಾರ್ಯವೇ ಗೆಲುವಿಗೆ ಶ್ರೀರಕ್ಷೆ’

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 3:41 IST
Last Updated 1 ಡಿಸೆಂಬರ್ 2020, 3:41 IST
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖಂಡರು ಮತ್ತು ಕಾರ್ಯಕರ್ತರು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖಂಡರು ಮತ್ತು ಕಾರ್ಯಕರ್ತರು   

ಗೌರಿಬಿದನೂರು: ‘ತಾಲ್ಲೂಕಿನ ಜನರ ಪ್ರೀತಿ, ವಿಶ್ವಾಸ ಹಾಗೂ ಹಿರಿಯರ ಸಹಕಾರ ಮತ್ತು ಆಶೀರ್ವಾದದಿಂದ ಮುಂದಿನ ದಿನಗಳಲ್ಲಿ ರಾಜಕೀಯ ಧ್ರುವೀಕರಣವಾಗಲಿದೆ’ ಎಂದು ಜಿ.ಪಂ. ಸದಸ್ಯ ಕೆ‌. ಕೆಂಪರಾಜು ತಿಳಿಸಿದರು.

ನಗರ ಹೊರವಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ತಾಲ್ಲೂಕಿನ ‌ಜನತೆ ಕಳೆದ ಮೂರು ದಶಕಗಳಿಂದಲೂ ಸ್ಥಳೀಯ ರಾಜಕಾರಣದಿಂದ ಬೇಸತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬದಲಾವಣೆ ಬಯಸಿದ್ದರು. ಆದರೆ, ಅದೃಷ್ಟ ಕೈ ಹಿಡಿಯದ ಕಾರಣ ಮುಖಂಡರಾದ ಸಿ.ಆರ್. ನರಸಿಂಹಮೂರ್ತಿ ಅವರು ಕಡಿಮೆ ಮತಗಳ‌ ಅಂತರದಿಂದ ಸೋಲೊಪ್ಪಿಕೊಳ್ಳಬೇಕಾಯಿತು ಎಂದರು.

ADVERTISEMENT

ಆದರೆ ಕೆಲವೇ ದಿನಗಳ ಅಂತರದಲ್ಲಿ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ನಿಜಕ್ಕೂ ಅಚ್ಚರಿ ಮೂಡಿಸಿದೆ. ಮುಂಬರುವ ದಿನಗಳಲ್ಲಿ ಹಿರಿಯರ ಮಾರ್ಗದರ್ಶನ ಹಾಗೂ ಕಾರ್ಯಕರ್ತರ ಸಹಕಾರದಿಂದ ಸ್ಥಳೀಯ ‌ಗ್ರಾಮ ಪಂಚಾಯಿತಿ ಚುನಾವಣೆಯನ್ನು ಒಟ್ಟಾಗಿ ಎದುರಿಸಲು ಸಿದ್ಧರಾಗಿದ್ದೇವೆ. ಕಳೆದ ಒಂದು ವರ್ಷದಿಂದ ಕ್ಷೇತ್ರದಲ್ಲಿ ‌ಮಾಡಿರುವ ಸಾಮಾಜಿಕ ನೆರವಿನ ಕಾರ್ಯಗಳೇ ನಮಗೆ ಶ್ರೀರಕ್ಷೆಯಾಗಲಿವೆ. ಯುವಕರು ಉತ್ಸಾಹದಿಂದ ಚುನಾವಣಾ ಕಾರ್ಯಗಳಲ್ಲಿ‌ ಭಾಗವಹಿಸಬೇಕಾಗಿದೆ ಎಂದು‌ ಹೇಳಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಸಿ. ಮಂಜುನಾಥರೆಡ್ಡಿ ಮಾತನಾಡಿ, ಕಳೆದ 5 ವರ್ಷದಿಂದ ಕ್ಷೇತ್ರದಲ್ಲಿ ಸಾಕಷ್ಟು ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ‌ಕಾರ್ಯಗಳ‌ ಮೂಲಕ ಜನರ ವಿಶ್ವಾಸ ಮತ್ತು ನಂಬಿಕೆಯನ್ನು ಪಡೆದಿದ್ದೇವೆ ಎಂದರು.

ಕಳೆದ ಚುನಾವಣೆಯಲ್ಲಿ 60 ಸಾವಿರ ಜನರ ಆಶೀರ್ವಾದ ಪಡೆದಿದ್ದೇವೆ. ಈ ಬಾರಿಯ ಸ್ಥಳೀಯ ಚುನಾವಣೆ ಎದುರಿಸಲು ಬದ್ಧವಾಗಿದ್ದೇವೆ. ಕಾರ್ಯಕರ್ತರು ಮತ್ತು ಮುಖಂಡರು ಉತ್ಸಾಹ ಕಳೆದುಕೊಳ್ಳದೆ ಜನರ ಸಂಕಷ್ಟಗಳಿಗೆ ‌ಸ್ಪಂದಿಸುವ ಮೂಲಕ ಅವರಿಗೆ ನೆರವಾಗಬೇಕಾಗಿದೆ ಎಂದು ಹೇಳಿದರು.

ಮುಖಂಡ ಸಿ‌.ಆರ್. ನರಸಿಂಹಮೂರ್ತಿ ಮಾತನಾಡಿ, ಪಕ್ಷವು ತಾಲ್ಲೂಕಿನಲ್ಲಿ ತನ್ನದೆ ಆದ ವರ್ಚಸ್ಸು ಮತ್ತು ಪ್ರಾಮಾಣಿಕ ಕಾರ್ಯಕರ್ತರ ಬಳಗವನ್ನು ಹೊಂದಿದೆ. ಅವರೆಲ್ಲರಲ್ಲಿ‌ ಉತ್ಸಾಹ ಕುಂದಿಸದೆ ಈ ಬಾರಿಯ ಸ್ಥಳೀಯ ಚುನಾವಣೆಯಲ್ಲಿ ಪ್ರತೀ ಗ್ರಾಮದಲ್ಲಿ ಸಂಚರಿಸಿ ಪಕ್ಷ ಬಲಪಡಿಸುವ ಜೊತೆಗೆ ಕಾರ್ಯಕರ್ತರ ಬೆನ್ನೆಲುಬಾಗಿ ‌ಕಾರ್ಯನಿರ್ವಹಿಸಲು ಬದ್ಧವಾಗಿದ್ದೇವೆ ಎಂದು ಹೇಳಿದರು.

ಮುಖಂಡರಾದ ವೇದಲವೇಣಿ ರಾಮು, ಮಲ್ಲಸಂದ್ರ ಗಂಗಾಧರ್, ನರಸಿಂಹಮೂರ್ತಿ, ಎಚ್.ಎಲ್. ವೆಂಕಟೇಶ್, ಮುದುಗೆರೆ ರಾಜಶೇಖರ್, ಪ್ರಸನ್ನಕುಮಾರ್, ನಾಗೇಂದ್ರ, ಶ್ರೀಧರ್, ಪ್ರಭು, ಚಾಯಣ್ಣ, ದಿವಾಕರ್, ನಾಗರಾಜ್, ರೇಣುಕಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.