ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯಿತಿ ಮುಖ್ಯಲೆಕ್ಕಾಧಿಕಾರಿ ಕಾರು ಚಾಲಕ ಬಾಬು ಆತ್ಮಹತ್ಯೆ ಪ್ರಕರಣದ ಆರೋಪಿಗಳಾದ ನಾಗೇಶ್ ಮತ್ತು ಮಂಜುನಾಥ್ ತಲೆಮರೆಸಿಕೊಂಡಿದ್ದಾರೆ. ಮೊಬೈಲ್‌ಗಳನ್ನು ಮನೆಯಲ್ಲಿಯೇ ಬಿಟ್ಟು ತೆರಳಿದ್ದಾರೆ. ಈ ಇಬ್ಬರ ಪತ್ತೆಗೆ ಪೊಲೀಸರು ತಂಡ ಸಹ ರಚಿಸಿದ್ದಾರೆ.
ಬಾಬು ಆತ್ಮಹತ್ಯೆ ಪ್ರಕರಣವು ಚಿಕ್ಕಬಳ್ಳಾಪುರದಲ್ಲಿ ನಾನಾ ರೀತಿಯ ಚರ್ಚೆಗಳನ್ನು ಹುಟ್ಟು ಹಾಕಿದೆ. ಬಾಬು ಸಾಲ ಮಾಡಿ ನಾಗೇಶ್ ಮತ್ತು ಮಂಜುನಾಥ್‌ಗೆ ಹಣ ನೀಡಿದ್ದಾರೆ. ಮುನಿರಾಜು ಎಂಬುವವರ ಬಳಿ ₹16 ಲಕ್ಷ, ಕೃಷ್ಣಪ್ಪ ಬಳಿ ₹3 ಲಕ್ಷ ಸಾಲ ಮಾಡಿ ಹಣ ನೀಡಿದ್ದರು ಎನ್ನುವುದು ಅವರ ಪತ್ನಿ ನೀಡಿರುವ ದೂರಿನಲ್ಲಿದೆ. ಹೀಗದೆ ದೊಡ್ಡ ಪ್ರಮಾಣದಲ್ಲಿಯೇ ಬಾಬು ವಹಿವಾಟು ನಡೆಸಿದ್ದಾರೆ. ಅವರು ದೊಡ್ಡ ಪ್ರಮಾಣದಲ್ಲಿ ಸಾಲ ಮಾಡಿದ್ದರು ಎನ್ನುವ ಚರ್ಚೆಗಳೂ ಬಿರುಸಾಗಿವೆ.
‘₹11 ಲಕ್ಷ ಸಾಲ ಮಾಡಿ ಆ ಹಣವನ್ನು ಆನ್‌ಲೈನ್ ಆಟಗಳಲ್ಲಿ ಸೋತಿದ್ದೆ’ ಎಂದು ಡೆತ್‌ನೋಟ್‌ನಲ್ಲಿ ಬಾಬು ಸಹ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಕಚೇರಿಯ ಮಹಿಳಾ ಸಿಬ್ಬಂದಿಯೊಬ್ಬರು ಡೆತ್‌ನೋಟ್ ಅನ್ನು ಆ.4ರಂದೇ ಅವರ ಪತ್ನಿಗೆ ವಾಟ್ಸ್‌ಆ್ಯಪ್ ಮಾಡಿದ್ದಾರೆ. ಬಾಬು ಆತ್ಮಹತ್ಯೆ ಮಾಡಿಕೊಳ್ಳುವ ಮೂರು ದಿನಗಳ ಮುನ್ನವೇ ಡೆತ್‌ನೋಟ್ ಸಿಕ್ಕಿದೆ. ಡೆತ್‌ನೋಟ್ ಮತ್ತು ಹಣದ ಪ್ರಮಾಣ ಬಗ್ಗೆ ಚರ್ಚೆಗಳು ಕಾವೇರಿವೆ.
ನಾಗೇಶ್ ಮತ್ತು ಮಂಜುನಾಥ್‌ರಿಂದ ವಂಚನೆಗೆ ಒಳಗಾದ ಬಾಬು ಸಂಸದರ ಗಮನಕ್ಕೆ ಈ ವಿಚಾರವನ್ನು ತಂದಿದ್ದರೆ ಅವರ ಪ್ರಾಣ ಸಹ ಉಳಿಯುತ್ತಿತ್ತು ಎಂದು ಬಿಜೆಪಿ ಮುಖಂಡರು ನುಡಿಯುತ್ತಿದ್ದಾರೆ. ಮತ್ತೊಂದು ಕಡೆ ಕಾಂಗ್ರೆಸ್ ಮುಖಂಡರು ಸಂಸದ ಡಾ.ಕೆ.ಸುಧಾಕರ್ ನಡೆಯ ಬಗ್ಗೆ ವಿಶ್ಲೇಷಿಸುತ್ತಿದ್ದಾರೆ.
ಸಂಸದ ಡಾ.ಕೆ.ಸುಧಾಕರ್ ಅವರು ಜಾಮೀನಿಗೆ ನ್ಯಾಯಾಲಯದ ಮೊರೆ ಹೋಗಿದ್ದಾರೆಯೇ?, ಪೊಲೀಸರು ಅವರ ಮೇಲೆ ಕ್ರಮವಹಿಸಲು ಲೋಕಸಭೆ ಸಭಾಧ್ಯಕ್ಷರಿಂದ ಅನುಮತಿ ಪಡೆಯಬೇಕು. ಈ ಪ್ರಕ್ರಿಯೆಗಳು ಯಾವ ರೀತಿಯಲ್ಲಿ ನಡೆಯುತ್ತವೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಕಾರಣ ಯಾವ ರೀತಿಯಲ್ಲಿ ಮುಂದಿನ ಕಾನೂನು ಪ್ರಕ್ರಿಯೆಗಳು ಜರುಗಲಿವೆ ಎನ್ನುವ ಬಗ್ಗೆ ಚಿಕ್ಕಬಳ್ಳಾಪುರದಲ್ಲಿ ಚರ್ಚೆಗಳು ಜೋರಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.