ADVERTISEMENT

ಕೈವಾರ ಧರೆಗಿಳಿದ ನಾದಲೋಕ

ಗಾಯನ, ಭಜನೆ ಮೂಲಕ ಸಂಗೀತೋತ್ಸವ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 3:15 IST
Last Updated 11 ಜುಲೈ 2025, 3:15 IST
ಕೈವಾರ ಸಂಗೀತೋತ್ಸವದಲ್ಲಿ ಗುರುವಾರ ನಡೆದ ಗೋಷ್ಠಿಗಾಯನ
ಕೈವಾರ ಸಂಗೀತೋತ್ಸವದಲ್ಲಿ ಗುರುವಾರ ನಡೆದ ಗೋಷ್ಠಿಗಾಯನ   

ಚಿಂತಾಮಣಿ: ಸಂಗೀತೋತ್ಸವದ ಮೂರನೇ ದಿನ ಗುರುವಾರ ಧರೆಗಿಳಿದಿದ್ದ ನಾದಲೋಕಕ್ಕೆ ಸಂಗೀತಾಸಕ್ತರು ಮನಸೋತರು.

ಗುರುವಾರ ಬೆಳಗಿನ ಜಾವ 4-30ರಿಂದ 8ಗಂಟೆವರೆಗೂ ವಿವಿಧ ಕಲಾವಿದರಿಂದ ನಾದಸ್ವರ, ಸ್ಯಾಕ್ಸೋಪೋನ್, ತವಿಲ್ ನುಡಿಸುವ ಮೂಲಕ ತಮ್ಮ ಕಲಾಸೇವೆಯನ್ನು ಸಮರ್ಪಿಸಿದರು. ನಂತರ ವಿವಿಧ ಭಜನಾ ಮಂಡಳಿಗಳಿಂದ ನಾಮ ಸಂಕೀರ್ತನೆ ನಡೆಯಿತು.

ಬೆಳಗ್ಗೆ 10ರಿಂದ ನೂರಾರು ಕಲಾವಿದರಿಂದ ಯೋಗಿನಾರೇಯಣ ತಾತಯ್ಯ ವಿರಚಿತ ಬೋಧನಾ ಕೃತಿಗಳ ಗೋಷ್ಠಿ ಗಾಯನ ಮನಸೂರೆಗೊಂಡಿತು. ಗೋಷ್ಠಿ ಗಾಯನ ನಂತರ 11ರಿಂದ ಮಧ್ಯಾಹ್ನ 1-30ರವರೆಗೂ ಗುರುಪೂಜೆ ಶ್ರದ್ಧಾ-ಭಕ್ತಿ ಹಾಗೂ ಅದ್ದೂರಿಯಾಗಿ ನೆರವೇರಿತು.

ADVERTISEMENT

ಮಧ್ಯಾಹ್ನದಿಂದ ಸಂಜೆ 5ರವರೆಗೂ ವಿವಿಧ ಸಂಗೀತಗಾರರು ಗಾಯನದ ಮೂಲಕ ಸಂಗೀತ ಸೇವೆ ಸಮರ್ಪಣೆ ಮಾಡಿದರು. ಬೆಂಗಳೂರಿನ ಸುಧಾಮಣಿ ವೆಂಕಟರಾಘವನ್ ತಂಡದ ಗಾಯನ, ಜಯಲಕ್ಷ್ಮಿ ಎಸ್.ಭಟ್ ಗಾಯನ, ತಿರುಮಲ ತಿರುಪತಿ ದೇವಸ್ಥಾನದ ಭಾಸ್ಕರ್ ತಂಡದ ಗಾಯನ, ಮಂಜುಳಾ ಜಗದೀಶ್, ಮದ್ಮಾವತಿ ಮತ್ತು ಶಿಷ್ಯವೃಂದ, ಕೆ.ಕೆ.ವೀಣಾ ಮತ್ತು ಶಿಷ್ಯವೃಂದ, ಭೈರತಿ ಆಂಜನಪ್ಪ ಮತ್ತು ಶಿಷ್ಯವೃಂದ, ವಾನರಾಶಿ ಬಾಲಕೃಷ್ಣ ಭಾಗವತರ್ ತಂಡದ ಕಚೇರಿಗಳು ಹಾಗೂ ಪಕ್ಕವಾದ್ಯಗಳು ಮನ ಸೆಳೆದವು.

ಸಂಜೆ ವಿಶೇಷ ಕಾರ್ಯಕ್ರಮಗಳಲ್ಲಿ ಬೆಂಗಳೂರು ಅನಂತಕೃಷ್ಣ ಶರ್ಮ ಮತ್ತು ತಂಡದ ಲಯ ಲಹರಿ ತಾಳವಾದ್ಯ ಸಂಗೀತ ಪ್ರಿಯರ ಮನಸೂರೆಗೊಂಡಿತು. ಚೆನ್ನೈನ ಅಭಿಷೇಕ್ ರಘುರಾಮ್ ವೀಣಾವಾದನ ಮತ್ತು ಯು.ರಾಜೇಶ್ ಮ್ಯಾಂಡೋಲಿನ್ ಸೋಲೋ ಸಂಗೀತ ಪ್ರಿಯರನ್ನು ಗಾನ ಗಂಧರ್ವ ಲೋಕಕ್ಕೆ ಕರೆದೊಯ್ಯಿತು. ಚೆನ್ನೈನ ಶಂಕರ ಸುಬ್ರಮಣ್ಯಂ ಮೃದಂಗ, ಪ್ರವೀಣ್ ನಾರಾಯಣ ತಬಲ, ಸ್ವಾಮಿನಾಥನ್ ಸೆಲ್ವಗಣೇಶ್ ಖಂಜಿರ ನುಡಿಸುವ ಮೂಲಕ ಸಾಥ್ ನೀಡಿದರು. ಸುಮಾರು ಒಂದೂವರೆ ಗಂಟೆ ಪ್ರೇಕ್ಷಕರು ತನ್ಮಯರಾಗಿ ಆಲಿಸಿದರು.

ಪುತ್ತೂರ್ ಗಣೇಶ್ ಅವರ ಸ್ಯಾಕ್ಸೋಪೋನ್ ಬಹುಕಾಲ ಸಂಗೀತಪ್ರಿಯರ ಮನದಲ್ಲಿ ಉಳಿಯುವಂತೆ ಮಾಡಿತು. ತಿರುಪತಿ ಗಿರಿನಾಥರೆಡ್ಡಿ ಪಿಟೀಲು, ಕೆ.ಎಸ್.ಪ್ರಶಾಂತ್ ಮೃದಂಗ, ರಾಜೇಂದ್ರ ನಾಕೋಡ್ ತಬಲ, ಬಿ.ರಾಜಶೇಖರ್ ಮೋರ್ಸಿಂಗ್ ನುಡಿಸಿ ಮತ್ತಷ್ಟು ಮೆರಗು ನೀಡಿದರು.

ಬೆಂಗಳೂರಿನ ನಯನಾ ರಮೇಶ್ ಅವರ ಭರತನಾಟ್ಯ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡಿತು. ಸಭಾಂಗಣ ಹಾಗೂ ಹೊರಗೆ ಪ್ರೇಕ್ಷಕರು ತುಂಬಿ ತುಳುಕುತ್ತಿದ್ದರು.

ರಾತ್ರಿ 11ರಿಂದ ತಿರುಪಂಬೂರು ಟಿ.ಎಸ್.ಎನ್ ಕುಂಜಿತಾಬಾಲನ್ ತಂಡ, ತಿರುಪತಿಯ ವಿ.ಸತ್ಯನಾರಾಯಣ್ ತಂಡ, ಬೇತಮಂಗಲ ರಮೇಶ್ ತಂಡ, ರಾಮದಾಸ್ ವಾಗಟ, ಅತ್ತಿಬೆಲೆ ಎ.ಸಿ.ರಾಜಶೇಖರ್ ತಂಡಗಳು ನಾದಸ್ವರ ಕಾರ್ಯಕ್ರಮ ಇಡೀ ರಾತ್ರಿ ನಡೆದವು.

ಸಂಗೀತದ ಜತೆಗೆ ಸಾವಿರಾರು ಭಜನಾ ತಂಡಗಳು ಭಜನೆ, ಕೋಲಾಟಗಳಲ್ಲಿ ಭಾವಪರವಶರಾಗಿ ಮಗ್ನವಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.