
ಚಿಂತಾಮಣಿ: ಗ್ರಾಮಗಳು ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿಯಾಗುತ್ತದೆ ಎಂಬ ಕನಸು ಕಂಡಿದ್ದ ಮಹಾತ್ಮ ಗಾಂಧೀಜಿ ಅವರ ಕನಸು ನನಸು ಮಾಡಲು ಪಂಚಾಯತ್ ರಾಜ್ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿದೆ. ಇದರ ಭಾಗವಾಗಿ ಕರ್ನಾಟಕದಲ್ಲಿ 1993ರಲ್ಲಿ ಪಂಚಾಯತ್ ರಾಜ್ ಇಲಾಖೆ ಆರಂಭವಾಗಿದೆ.
ಆದರೆ, ತಾಲ್ಲೂಕಿನ ಪ್ರಮುಖ ವಾಣಿಜ್ಯ ಕೇಂದ್ರ ಸ್ಥಾನವಾದ ಕೈವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳನ್ನು ಅಭಿವೃದ್ಧಿಪಡಿಸಬೇಕಾದ ಪಂಚಾಯಿತಿಗೆ ಇವತ್ತಿಗೂ ಸ್ವಂತ ಕಟ್ಟಡ ಇಲ್ಲ. ಅಚ್ಚರಿಯಾದರೂ, ಇದೇ ವಾಸ್ತವ. ಇದರಿಂದಾಗಿ ಕೈವಾರ ಗ್ರಾಮ ಪಂಚಾಯಿತಿ ಕಾರ್ಯಾಲಯವು ಗ್ರಾಮದ ಸರ್ಕಾರಿ ಆಸ್ಪತ್ರೆಯ ಹಳೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಪರಿಸ್ಥಿತಿಯು ದೀಪದ ಕೆಳಗೆ ಕತ್ತಲು ಎಂಬಂತೆ ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಿದೆ.
ತಾಲ್ಲೂಕು ಕೇಂದ್ರದಿಂದ ಕೇವಲ 12 ಕಿ.ಮೀ ದೂರದಲ್ಲಿರುವ ಕೈವಾರ ಪ್ರಸಿದ್ಧ ಯಾತ್ರಾಸ್ಥಳವೂ ಹೌದು. ಯೋಗಿನಾರೇಯಣ ಯತೀಂದ್ರರ ಮಠ, ಅಮರನಾರೇಯಣಸ್ವಾಮಿ ದೇವಸ್ಥಾನ, ಭೀಮಲಿಂಗೇಶ್ವರ ದೇವಾಲಯಗಳಿದ್ದು, ಪ್ರತಿನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಪಂಚಾಯಿತಿಯಲ್ಲಿ 18 ಜನ ಸದಸ್ಯರಿದ್ದಾರೆ. ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಕೇಂದ್ರವಾಗಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಂಡಿಲ್ಲ.
ಕೈವಾರ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕಾಗಿ 2009–10ರಲ್ಲಿ ರಾಜೀವ್ ಗಾಂಧಿ ಸಶಕ್ತೀಕರಣ ಪುರಸ್ಕಾರ ಯೋಜನೆಯಡಿ ರಾಜೀವ್ ಗಾಂಧಿ ಸೇವಾ ಕೇಂದ್ರ ನಿರ್ಮಾಣಕ್ಕಾಗಿ ₹15 ಲಕ್ಷ ಮಂಜೂರಾಗಿತ್ತು. ಅದಕ್ಕೆ ಬಡ್ಡಿ ಸೇರಿ ₹18.5 ಲಕ್ಷ ಬ್ಯಾಂಕ್‌ನಲ್ಲಿ ಠೇವಣಿ ಇಡಲಾಗಿತ್ತು. ಈ ಹಣ ಬಿಡುಗಡೆಯಾಗಿ 10–12 ವರ್ಷಗಳಾಗಿದ್ದರೂ, ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿ ಕಟ್ಟಡ ನಿರ್ಮಾಣಕ್ಕೆ ಗಮನಹರಿಸಲು ಯಾರೂ ಮುಂದಾಗಿಲ್ಲ ಎನ್ನುತ್ತಾರೆ ಸ್ಥಳೀಯರು. ಮತ್ತೊಂದೆಡೆ ಮಸ್ತೇನಹಳ್ಳಿ ಗ್ರಾಮ ಪಂಚಾಯಿತಿ ಒಳಗೊಂಡು ಕೈವಾರ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಇತ್ತೀಚೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
5 ವರ್ಷಗಳಿಂದ ಸರ್ಕಾರಿ ಆಸ್ಪತ್ರೆಯ ಹಳೆಯ ಕಟ್ಟಡದಲ್ಲಿ ಪಂಚಾಯಿತಿ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದು, ನಿತ್ಯ ನೂರಾರು ಮಂದಿ ತಮ್ಮ ಕೆಲಸ ಕಾರ್ಯಗಳಿಗಾಗಿ ಬಂದು ಹೋಗುತ್ತಾರೆ. ಇದರಿಂದ ರೋಗಿಗಳಿಗೆ ತೊಂದರೆ ಆಗುತ್ತಿದೆ. ಆಸ್ಪತ್ರೆಯನ್ನು ಸಮುದಾಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಗ್ರಾಮ ಪಂಚಾಯಿತಿ ಕಚೇರಿ ಇರುವ ಕಟ್ಟಡವನ್ನು ನೆಲಸಮ ಮಾಡಲು 3 ವರ್ಷಗಳ ಹಿಂದೆ ಆದೇಶವಾಗಿದೆ. ಸಮುದಾಯ ಕೇಂದ್ರವಾಗಿರುವುದರಿಂದ ಆಸ್ಪತ್ರೆಗೆ ನೂತನ ಕಟ್ಟಡ ನಿರ್ಮಾಣದ ಅಗತ್ಯವಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ತಾಲ್ಲೂಕಿನಲ್ಲಿ ಚಿನ್ನಸಂದ್ರ, ಕೋನಪ್ಪಲ್ಲಿ, ಕಾಗತಿ, ಊಲವಾಡಿ, ಕೈವಾರ ಒಳ್ಳೆಯ ಸಂಪನ್ಮೂಲ ಗ್ರಾಮ ಪಂಚಾಯಿತಿಗಳಾಗಿವೆ. ಕೈವಾರ ಪವಿತ್ರ ಯಾತ್ರಾಸ್ಥಳವೂ ಆಗಿರುವುದರಿಂದ ಸಾಕಷ್ಟು ಆದಾಯವೂ ಬರುತ್ತಿದೆ. ತಾಲ್ಲೂಕಿನಲ್ಲಿ ಹಲವಾರು ಗ್ರಾಮ ಪಂಚಾಯಿತಿಗಳು ಉತ್ತಮ ಕಟ್ಟಡಗಳನ್ನು ನಿರ್ಮಾಣ ಮಾಡಿಕೊಂಡಿವೆ. ಆಡಳಿತ ಕಚೇರಿ, ಸಭಾಂಗಣ, ಅಧ್ಯಕ್ಷ, ಉಪಾಧ್ಯಕ್ಷರ ಕೊಠಡಿಗಳು, ಇ-ಆಡಳಿತಕ್ಕೆ ಬೇಕಾದ ಸುಸಜ್ಜಿತ ವ್ಯವಸ್ಥೆಗಳನ್ನು ಮಾಡಿಕೊಂಡಿವೆ. ತಾಲ್ಲೂಕಿನಲ್ಲೇ ದೊಡ್ಡ ಹಾಗೂ ಸಂಪನ್ಮೂಲವುಳ್ಳ ಕೈವಾರ ಗ್ರಾಮ ಪಂಚಾಯಿತಿಗೆ ಸ್ವಂತ ಕಟ್ಟಡವಿಲ್ಲದಿರುವುದು ದುರದೃಷ್ಟಕರ ಎಂಬುದು ನಿವಾಸಿಗಳ ಕೊರಗು.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳು ಗ್ರಾಮ ಪಂಚಾಯಿತಿಗಳ ಮೂಲಕವೇ ಅನುಷ್ಠಾನವಾಗುತ್ತವೆ. ಪ್ರತಿವರ್ಷ ಕೋಟ್ಯಂತರ ಅನುದಾನವೂ ಹರಿದುಬರುತ್ತದೆ. ಗ್ರಾಮ ಪಂಚಾಯಿತಿಯ ಬಾಬೂಜಿ ಸೇವಾ ಕೇಂದ್ರದ ಮೂಲಕ ಸುಮಾರು ಸೇವೆಗಳನ್ನು ಜನರಿಗೆ ನೀಡಬೇಕಾಗಿದೆ. ಗ್ರಾಮ ಪಂಚಾಯಿತಿಗೆ ಸುಸಜ್ಜಿತ ಕಟ್ಟಡವಿಲ್ಲದೆ ಸೇವೆಗಳನ್ನು ನೀಡುವುದಾದರೂ ಹೇಗೆ ಎಂದು ನಾಗರಿಕರು ಪ್ರಶ್ನಿಸುತ್ತಾರೆ.
₹80 ಲಕ್ಷ ವೆಚ್ಚದಲ್ಲಿ ಕಾಮಗಾರಿ
ನರೇಗಾದಲ್ಲಿ ₹28 ಲಕ್ಷ ಬ್ಯಾಂಕಿನಲ್ಲಿದ್ದ ಠೇವಣಿ ಹಣ ಸೇರಿ ಗ್ರಾಮ ಪಂಚಾಯಿತಿ ₹23 ಲಕ್ಷ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಶಾಸಕ ಡಾ.ಎಂ.ಸಿ.ಸುಧಾಕರ್ ₹10 ಲಕ್ಷ ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ₹10 ಲಕ್ಷ ಹಾಗೂ 15ನೇ ಹಣಕಾಸು ಯೋಜನೆಯಲ್ಲಿ 10 ಸೇರಿ ಸುಮಾರು ₹80 ಲಕ್ಷ ಬಜೆಟ್‌ನಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕರಿಬಸಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. ಆದಾಗ್ಯೂ 2022ರಲ್ಲಿ ಗ್ರಾಮ ಪಂಚಾಯಿತಿ ಕಟ್ಟಡ ಕಾಮಗಾರಿ ಆರಂಭವಾಗಿದ್ದು 3 ವರ್ಷವಾದರೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಸ್ಥಳೀಯರು ಗೊಣಗುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.