ADVERTISEMENT

ಚಿಂತಾಮಣಿ: ಕೈವಾರ ತಾತಯ್ಯ ಮಠದಲ್ಲಿ ಹುಣ್ಣಿಮೆ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 2:25 IST
Last Updated 10 ಆಗಸ್ಟ್ 2025, 2:25 IST
ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ ಶನಿವಾರ ನಡೆದ ಹುಣ್ಣಿಮೆ ರಥೋತ್ಸವದ ದೃಶ್ಯ
ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ ಶನಿವಾರ ನಡೆದ ಹುಣ್ಣಿಮೆ ರಥೋತ್ಸವದ ದೃಶ್ಯ   

ಚಿಂತಾಮಣಿ: ತಾಲ್ಲೂಕಿನ ಕೈವಾರದಲ್ಲಿ ಶನಿವಾರ ಸದ್ಗುರು ಯೋಗಿನಾರೇಯಣ ಮಠದಲ್ಲಿ ಶ್ರಾವಣ ಮಾಸದ ಹುಣ್ಣಿಮೆ ಪ್ರಯುಕ್ತ ರಥೋತ್ಸವ ನಡೆಯಿತು.

ಗರ್ಭಗುಡಿಯಲ್ಲಿರುವ ಸದ್ಗುರು ಯೋಗಿ ನಾರೇಯಣ ತಾತಯ್ಯನವರ ಮೂಲ ಬೃಂದಾವನವನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು. ಹುಣ್ಣಿಮೆ ಪೂಜೆಗಾಗಿ ಪೀಠ ಅಲಂಕರಿಸಿ ಶ್ರೀದೇವಿ ಭೂದೇವಿ ಸಮೇತ ಅಮರನಾರೇಯಣ ಹಾಗೂ ತಾತಯ್ಯನವರ ಉತ್ಸವ ಮೂರ್ತಿಗಳನ್ನು ಕೂರಿಸಲಾಗಿತ್ತು. ಉತ್ಸವ ಮೂರ್ತಿಗಳಿಗೆ ಪಂಚಾಮೃತ ಮತ್ತು ಮಂಗಳ ದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಯಿತು.

ಶಾಸ್ತ್ರೋಕ್ತವಾಗಿ ಅಷ್ಟಾವಧಾನ ಸೇವೆ ಸಮರ್ಪಿಸಿ ಮಹಾಮಂಗಳಾರತಿ ಬೆಳಗಲಾಯಿತು. ತಾತಯ್ಯ ಅವರ ಉತ್ಸವ ಮೂರ್ತಿಯನ್ನು ಮಂಗಳ ವಾದ್ಯಗಳೊಂದಿಗೆ ಕರೆತಂದು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ADVERTISEMENT

‘ಗೋವಿಂದ’ ನಾಮಸ್ಮರಣೆಯೊಂದಿಗೆ ದೇವಾಲಯದ ಸುತ್ತಲೂ ರಥೋತ್ಸವ ನಡೆಯಿತು. ನೂರಾರು ಜನ ಭಕ್ತರು ರಥದೊಂದಿಗೆ ಸುತ್ತು ಹಾಕಿದರು. 

ಮಠದಲ್ಲಿ ಪ್ರಾತಃಕಾಲ ಘಂಟನಾದ, ಸುಪ್ರಭಾತದೊಂದಿಗೆ ಗೋಪೂಜೆ ಮಾಡಲಾಯಿತು. ತಾತಯ್ಯನವರು ಜೀವ ಸಮಾಧಿಯಾದ ಬೃಂದಾವನಕ್ಕೆ ತುಳಸಿ ಹಾರ ಹಾಗೂ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು.

ಸಂಜೆ ನಾದಸುಧಾರಸ ಸಂಕೀರ್ತನ ವೇದಿಕೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು.

ಧರ್ಮಾಧಿಕಾರಿ ಎಂ.ಆರ್. ಜಯರಾಂ ಸಂಕೀರ್ತನ ವೇದಿಕೆ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತ್, ಪ್ರವಚನಕಾರ ಟಿ.ಎಲ್. ಆನಂದ್, ಟ್ರಸ್ಟ್ ಪದಾಧಿಕಾರಿಗಳು, ವ್ಯವಸ್ಥಾಪಕ ಲಕ್ಷ್ಮಿನಾರಾಯಣ್ ಹಾಗೂ ಅಪಾರ ಭಕ್ತರು ಪಾಲ್ಗೊಂಡಿದ್ದರು.

ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ ಶನಿವಾರ ನಡೆದ ಹುಣ್ಣಿಮೆ ರಥೋತ್ಸವದ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.