ADVERTISEMENT

ಕೈವಾರಕ್ಕೆ ಪಟ್ಟಣ ಪಂಚಾಯಿತಿ ಸ್ಥಾನ

ಡಾ.ಎಂ.ಸಿ.ಸುಧಾಕರ್ ಶಾಸಕರಾಗಿದ್ದಾಗಲೇ ಸರ್ಕಾರಕ್ಕೆ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 6:12 IST
Last Updated 9 ಆಗಸ್ಟ್ 2025, 6:12 IST
ಪಟ್ಟಣ ಪಂಚಾಯಿತಿಯಾಗಿದ್ದಕ್ಕೆ ಕೈವಾರದಲ್ಲಿ ಜನರು ಪಟಾಕಿ ಸಿಡಿಸಿ ಸಂಭ್ರಮಿಸಿದರು
ಪಟ್ಟಣ ಪಂಚಾಯಿತಿಯಾಗಿದ್ದಕ್ಕೆ ಕೈವಾರದಲ್ಲಿ ಜನರು ಪಟಾಕಿ ಸಿಡಿಸಿ ಸಂಭ್ರಮಿಸಿದರು   

ಚಿಂತಾಮಣಿ: ರಾಜ್ಯದ ಪ್ರಸಿದ್ದ ಯಾತ್ರಾಸ್ಥಳ ಕೈವಾರವನ್ನು ಗ್ರಾಮ ಪಂಚಾಯಿತಿ ಸ್ಥಾನಮಾನದಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ.

ಕಳೆದ ತಿಂಗಳು ಕೈವಾರದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಈಗ ‌ಸಚಿವ  ಡಾ.ಎಂ.ಸಿ.ಸುಧಾಕರ್‌ ಕೈವಾರಕ್ಕೆ ಮತ್ತೊಂದು ಕೊಡುಗೆ ನೀಡಿದ್ದಾರೆ.

ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಜನರಿಗೆ ನೀಡಿದ್ದ ಭರವಸೆ, ಆಶ್ವಾಸನೆ ಈಡೇರಿಸಿದ್ದಾರೆ. ಈ ಹಿಂದೆ ಸುಧಾಕರ್ ಶಾಸಕರಾಗಿದ್ದ ವೇಳೆ  (2008-2013) ಈ ಬಗ್ಗೆ ಪ್ರಸ್ತಾವ ಸರ್ಕಾರಕ್ಕೆ ಸಲ್ಲಿಕೆ ಆಗಿತ್ತು. 

ADVERTISEMENT

2013 ರ ಚುನಾವಣೆಯಲ್ಲಿ ಅವರು ಸೋತ ನಂತರ ನನೆಗುದಿಗೆ ಬಿದ್ದಿತ್ತು. ಅವರು ಮತ್ತೆ ಶಾಸಕರಾದ ಎರಡೇ ವರ್ಷದಲ್ಲಿ ಪ್ರಸ್ತಾವಗಳನ್ನು ಸಚಿವ ಸಂಪುಟ ಅನುಮೋದಿಸಿದೆ. ಗ್ರಾಮದಲ್ಲಿ ಮುಖಂಡರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಕೈವಾರ ಹಾಗೂ ಪಕ್ಕದ ಮಸ್ತೇನಹಳ್ಳಿ ಗ್ರಾಮ ಪಂಚಾಯಿತಿಯನ್ನು ಒಟ್ಟುಗೂಡಿಸಿ ಕೈವಾರ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಕೈವಾರ ಪಂಚಾಯಿತಿ ವ್ಯಾಪ್ತಿಯ ಕೈವಾರ, ಬನಹಳ್ಳಿ, ಗುಡಿಸಲು, ಶ್ಯಾಮರಾವ್ ಹೊಸಪೇಟೆ ಹಾಗೂ ಮಸ್ತೇನಹಳ್ಳಿ ಗ್ರಾಮ ಪಂಚಾಯಿತಿಯ ಮಸ್ತೇನಹಳ್ಳಿ, ಹೊಸೂರು, ಮಾರಪ್ಪನಹಳ್ಳಿ ಜಂಗಮಶೀಗೇಹಳ್ಳಿ, ಹುಲುಗುಮ್ಮನಹಳ್ಳಿ, ಗುಟ್ಟಹಳ್ಳಿ ಗ್ರಾಮಗಳು ಇನ್ನು ಮುಂದೆ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರುತ್ತವೆ.

ಕೈವಾರದಲ್ಲಿ ಸರ್ಕಾರಿ ಆಸ್ಪತ್ರೆ, ನಾಡಕಚೇರಿ, ಪೊಲೀಸ್ ಠಾಣೆ, ಅಂಚೆ ಕಚೇರಿ, ಬ್ಯಾಂಕು, ಪಶುಪಾಲನಾ ಆಸ್ಪತ್ರೆ, ದೂರವಾಣಿ ಕಚೇರಿ, ಶಾಲಾ ಕಾಲೇಜುಗಳು ಇವೆ. ವಾರಕ್ಕೊಮ್ಮೆ ಸಂತೆ ನಡೆಯುತ್ತಿದೆ. ಕೈವಾರ ಹೋಬಳಿಯ ಕೇಂದ್ರವಾಗಿದ್ದು ನಾನಾ ರೀತಿಯ ವ್ಯಾಪಾರ ವಹಿವಾಟು ಕೇಂದ್ರಗಳಿವೆ.

ಜನಸಾಮಾನ್ಯರಿಗೆ ಪ್ರತಿನಿತ್ಯ ಬೇಕಾಗುವ ಬಹುತೇಕ ಎಲ್ಲ ಸರ್ಕಾರಿ ಕಚೇರಿಗಳು ಮತ್ತು ಜನರ ಬದುಕಿಗೆ ಬೇಕಾಗುವ ಎಲ್ಲ ಸೌಲಭ್ಯಗಳು ಕೈವಾರದಲ್ಲಿ ಸಿಗುತ್ತವೆ.
ಮುಖ್ಯವಾಗಿ ಕೈವಾರ ಪ್ರಮುಖ ಪ್ರವಾಸಿ ಹಾಗೂ ಧಾರ್ಮಿಕ ಕೇಂದ್ರ. 

ಯೋಗಿನಾರೇಯಣ ಮಠ, ಅಮರನಾರೇಯಣಸ್ವಾಮಿ ದೇವಸ್ಥಾನ, ಭೀಮಲಿಂಗೇಶ್ವರಸ್ವಾಮಿ ದೇವಸ್ಥಾನ, ನರಸಿಂಹಸ್ವಾಮಿ ಗುಹೆ, ವೈಕುಂಠ ಧಾರ್ಮಿಕ ಕೇಂದ್ರಗಳು, ತಪೋವನ, ಕೈವಾರ ಬೆಟ್ಟ ಪ್ರವಾಸಿ ತಾಣಗಳಿವೆ. ಪ್ರತಿನಿತ್ಯ ನೂರಾರು ಸಂಖ್ಯೆಯ ಪ್ರವಾಸಿಗಳು ಮತ್ತು ಭಕ್ತರು ಭೇಟಿ ನೀಡುತ್ತಾರೆ. ಪ್ರತಿವರ್ಷ ನಡೆಯುವ ಜಾತ್ರೆ, ಸಂಗೀತೋತ್ಸವ, ಆರಾಧನೆ ಮುಂತಾದ ಕಾರ್ಯಕ್ರಮಗಳಿಗೆ ಲಕ್ಷಾಂತರ ಜನರು ಸೇರುತ್ತಾರೆ.

ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಗೊಂಡರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಅಭಿವೃದ್ಧಿ ಯೋಜನೆಗಳಿಗೆ ಅನುದಾನ  ಹೆಚ್ಚಾಗುತ್ತದೆ.

ನಗರಸಭೆ ಮತ್ತು ಪುರಸಭೆಗಳಿಗೆ ದೊರೆಯುವ ಎಲ್ಲ ಅನುದಾನ, ಸೌಲಭ್ಯಗಳು ಸಿಗುವುದರಿಂದ ಗ್ರಾಮದ ಅಭಿವೃದ್ಧಿಗೆ ಮತ್ತಷ್ಟು ಸಹಾಯಕವಾಗುತ್ತದೆ ಎಂಬುದು ಗ್ರಾಮದ ಮುಖಂಡರ ಅಭಿಪ್ರಾಯ.

ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಗೊಂಡರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅನುಷ್ಠಾನವಾಗುತ್ತಿದ್ದ ನರೇಗಾ ಯೋಜನೆ ಸ್ಥಗಿತಗೊಳ್ಳುತ್ತದೆ. ಬದಲಾಗಿ ನಗರೋತ್ಥಾನ ಯೋಜನೆ, ಎಸ್.ಎಫ್.ಸಿ, 15 ನೇ ಹಣಕಾಸ ಯೋಜನೆಯ ಅನುದಾನಗಳು ಲಭ್ಯವಾಗುತ್ತವೆ.

ಪಟ್ಟಣ ಪಂಚಾಯಿತಿಯ ಜನಸಂಖ್ಯೆಗೆ ತಕ್ಕಂತೆ ಸಿಬ್ಬಂದಿಯ ಸಂಖ್ಯೆಯು ಹೆಚ್ಚುತ್ತದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಬದಲಾಗಿ ಕೆಎಎಸ್ ಶ್ರೇಣಿಯ ಮುಖ್ಯಾಧಿಕಾರಿ ಬರುತ್ತಾರೆ. ಕಂದಾಯ ವಿಭಾಗ, ನೀರು ಪೂರೈಕೆ ವಿಭಾಗ, ಸ್ವಚ್ಛತಾ ವಿಭಾಗ ಸ್ಥಾಪನೆಯಾಗಲಿವೆ. ಕಚೇರಿ ವ್ಯವಸ್ಥಾಪಕ, ಕಂದಾಯ ನಿರೀಕ್ಷಕ, ಜೂನಿಯರ್ ಎಂಜನಿಯರ್, ಆರೋಗ್ಯ ನಿರೀಕ್ಷಕರ ಜತೆಗೆ ಕಚೇರಿ ಮತ್ತು ಸ್ವಚ್ಛತಾ ಸಿಬ್ಬಂದಿಯ ಸಂಖ್ಯೆ ಹೆಚ್ಚಾಗುತ್ತದೆ.

ಮತ್ತಷ್ಟು ಅಭಿವೃದ್ಧಿ

ಡಾ.ಎಂ.ಸಿ.ಸುಧಾಕರ್ ಕಾಳಜಿಯಿಂದ ಮಸ್ತೇನಹಳ್ಳಿಯ ಬಳಿ ಸಾವಿರಾರು ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರಾಂಗಣ ಸ್ಥಾಪಿಸಲಾಗಿದೆ. ಒಂದೊಂದಾಗಿ ಕೈಗಾರಿಕೆಗಳು ಸ್ಥಾಪನೆ ಆಗುತ್ತಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಯಾಗಿ ಜನಸಂಖ್ಯೆ ಹಾಗೂ ಎಲ್ಲ ವಹಿವಾಟುಗಳು ಹೆಚ್ಚಾಗುವ ನಿರೀಕ್ಷೆ ಇದೆ. ಭವಿಷ್ಯದಲ್ಲಿ ಪುರಸಭೆಯಾಗಿ ಮೇಲ್ದರ್ಜೆಗೇರುವ ಸಂಭವವಿದೆ. ನಾಗರಾಜ್ ಬನಹಳ್ಳಿ *** ಹೆಚ್ಚಿನ ಅನುದಾನ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿರುವುದು ಹೆಚ್ಚಿನ ಅನುದಾನಗಳು ದೊರೆಯುತ್ತವೆ. ಪವಿತ್ರ ಯಾತ್ರಾಸ್ಥಳವಾದ ಕೈವಾರ ಅಭಿವೃದ್ಧಿಯ ಪಥದಲ್ಲಿ ಸಾಗಲು ಅನುಕೂಲ ಆಗುತ್ತದೆ. ಇದಕ್ಕೆ ಶ್ರಮಿಸಿರುವ ಸಚಿವ ಡಾ.ಎಂ.ಸಿ.ಸುಧಾಕರ್ ಅವರಿಗೆ ಅಭಿನಂದನೆ. ಮಂಜುನಾಥರೆಡ್ಡಿ ಕೈವಾರ ಗ್ರಾ.ಪಂ. ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.