ಆಲಂಬಗಿರಿಯ ಕಲ್ಕಿ ಲಕ್ಷ್ಮಿ ವೆಂಕಟರಮಣಸ್ವಾಮಿ ರಥೋತ್ಸವದಲ್ಲಿ ಭಾಗವಹಿಸಿದ್ದ ಜನಸ್ತೋಮ
ಚಿಂತಾಮಣಿ: ಪುರಾಣ ಪ್ರಸಿದ್ಧ ಆಲಂಬಗಿರಿ ಗ್ರಾಮದ ಕಲ್ಕಿ ಲಕ್ಷ್ಮಿ ವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವ ಶನಿವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ರಥೋತ್ಸವದ ಅಂಗವಾಗಿ ದೇವಾಲಯವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಬೆಳಿಗ್ಗೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು.
ಕೈವಾರದಿಂದ ಅಲಂಕೃತ ಪಲ್ಲಕ್ಕಿಯಲ್ಲಿ ಸದ್ಗುರು ತಾತಯ್ಯನವರ ಉತ್ಸವ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಲಾಗಿತ್ತು. ದೇವಾಲಯದ ಪ್ರಾಂಗಣದಲ್ಲಿರುವ ಕಲ್ಯಾಣ ಮಂಟಪದಲ್ಲಿ ಯೋಗಿನಾರೇಯಣ ಮಠದ ಧರ್ಮಾಧಿಕಾರಿ ಎಂ.ಆರ್.ಜಯರಾಂ ದಂಪತಿಗಳು ಶ್ರೀಕೃಷ್ಣ ಗಂಧೋತ್ಸವ ಸಮರ್ಪಿಸಿದರು.
ಗಂಧೋತ್ಸವದ ನಂತರ ಆಸ್ಥಾನ ಸೇವೆ ನೆರವೇರಿಸಿ, ಭೂನಿಳಾ ಸಮೇತ ಲಕ್ಷ್ಮಿ ವೆಂಕಟರಮಣಸ್ವಾಮಿಯ ಉತ್ಸವಮೂರ್ತಿಯನ್ನು ವೇದಘೋಷ ಮತ್ತು ಮಂಗಳವಾದ್ಯಗಳೊಂದಿಗೆ ಶಾಸ್ತ್ರೋಕ್ತವಾಗಿ ಉತ್ಸವ ಪಲ್ಲಕ್ಕಿಯಲ್ಲಿ ಕರೆತಂದು ಅಲಂಕೃತಗೊಂಡಿದ್ದ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಥೋತ್ಸವದ ಅಂಗವಾಗಿ ರಥಶಾಂತಿ, ರಥಪೂಜೆ, ಹೋಮ, ಪೂರ್ಣಾಹುತಿ ಸಮರ್ಪಿಲಾಯಿತು.
ರಥಕ್ಕೆ ಚಾಲನೆ ನೀಡುತ್ತಿದ್ದಂತೆ ಗೋವಿಂದಾ, ಗೋವಿಂದಾ ನಾಮಸ್ಮರಣೆ ಮುಗಿಲುಮುಟ್ಟಿತು. ಸಾವಿರಾರು ಭಕ್ತರು ರಥವನ್ನು ಎಳೆದು ಪುನೀತರಾದರು. ಭಕ್ತರು ತೇರಿಗೆ ಬಾಳೆಹಣ್ಣು, ದವನ ಸಮರ್ಪಿಸಿದರು.
ಜಾತ್ರೆಯಲ್ಲಿ ಭಕ್ತರಿಗೆ ಅಲ್ಲಲ್ಲಿ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಜತೆಗೆ ಅನ್ನಸಂತರ್ಪಣೆ ನೆರವೇರಿತು. ನಾದಸ್ವರ, ತಮಟೆ ವಾದ್ಯಗಳೊಂದಿಗೆ ರಥೋತ್ಸವ ಸಾಗಿತು.
ಬ್ರಹ್ಮ ರಥೋತ್ಸವದ ಅಂಗವಾಗಿ ಸುಮಾರು 11 ದಿನಗಳು ಧಾರ್ಮಿಕ ಕೈಂಕರ್ಯಗಳು ನಡೆದವು.
ಗಿರಿಪ್ರದಕ್ಷಿಣೆ: ದೇವಾಲಯದಿಂದ 1 ಕಿ.ಮೀ ದೂರದಲ್ಲಿರುವ ಆಲಂಬಗಿರಿ ಬೆಟ್ಟದ ಪ್ರಕೃತಿಯ ತಪ್ಪಲಿನಲ್ಲಿ ಹುಣ್ಣಿಮೆ ಪ್ರಯುಕ್ತ ಸಂಕೀರ್ತನಾ ಗಿರಿಪ್ರದಕ್ಷಿಣೆ ನಡೆಸಲಾಯಿತು. ಸಾವಿರಾರು ಭಕ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.