ADVERTISEMENT

ಜ.13ಕ್ಕೆ ಕನಕಪುರ ಚಲೋ

ಯೇಸು ಪ್ರತಿಮೆ ನಿರ್ಮಾಣಕ್ಕೆ ನೀಡಿರುವ ಜಾಗವನ್ನು ಹಿಂಪಡೆಯುವಂತೆ ಹಿಂದೂ ಜಾಗರಣ ವೇದಿಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 15:34 IST
Last Updated 7 ಜನವರಿ 2020, 15:34 IST

ಚಿಕ್ಕಬಳ್ಳಾಪುರ: ‘ಯೇಸು ಪ್ರತಿಮೆ ನಿರ್ಮಾಣಕ್ಕೆ ನೀಡಿರುವ ಜಾಗವನ್ನು ಹಿಂಪಡೆಯುವಂತೆ ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಜ.13 ರಂದು ಕನಕಪುರ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಹಿಂದೂ ಜಾಗರಣಾ ವೇದಿಕೆಯ ಮುಖಂಡ ಕುಮಾರ ಸುಬ್ರಹ್ಮಣ್ಯಂ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಾರೋಬೆಲೆ ಕಪಾಲಬೆಟ್ಟ ಅಭಿವೃದ್ದಿ ಟ್ರಸ್ಟ್‌ಗೆ ಕಾನೂನು ಗಾಳಿಗೆ ತೂರಿ ಸರ್ಕಾರಿ ಗೋಮಾಳ ಜಮೀನನ್ನು ಮಂಜೂರು ಮಾಡಲಾಗಿದೆ.ಈ ವ್ಯಾಪ್ತಿಯ ನಲ್ಲಹಳ್ಳಿ ಗ್ರಾಮದಲ್ಲಿ 1,828 ಜಾನುವಾರುಗಳಿದ್ದು, ನಿಯಮಾನುಸಾರ 548 ಎಕರೆ ಗೋಮಾಳ ಜಮೀನನ್ನು ಕಾಯ್ದಿರಿಸಬೇಕು. ಆದರೆ ಟ್ರಸ್ಟ್‌ಗೆ ಜಮೀನು ನೀಡಿರುವ ಕಾರಣ 209.22 ಎಕರೆ ಮಾತ್ರವಿದ್ದು ಮಂಜೂರು ಮಾಡಿರುವುದು ಕಾನೂನು ಬಾಹಿರವೆಂದು ಸಾಭೀತಾಗಿದೆ.ಅಲ್ಲದೆ ಈ ಬೆಟ್ಟದಲ್ಲಿನ ಜೀವ ವೈಧ್ಯತೆಗೂ ತೊಂದರೆ ಉಂಟಾಗಿದೆ’ ಎಂದರು.

‘ದುರುದ್ಧೇಶದಿಂದ ಹತ್ತಾರು ಎಕರೆ ಜಮೀನನ್ನು ಶಿಲುಬೆ ನಿರ್ಮಾಣಕ್ಕೆ ನೀಡುವ ಮೂಲಕ ಮತಾಂತರಕ್ಕೆ ಪಿತೂರಿ ನಡೆಸಲಾಗಿದ್ದು, ಇದನ್ನು ಇಡೀ ರಾಜ್ಯ ಖಂಡಿಸಬೇಕಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಕ್ರೈಸ್ತರೂ ಸೇರಿದಂತೆ ಅನೇಕ ಧರ್ಮದವರು ಸುಮಾರು 200 ವರ್ಷಕ್ಕೂ ಹೆಚ್ಚು ಕಾಲ ಭಾರತದ ಮೇಲೆ ದಾಳಿ ನಡೆಸಿದರು. ಆದರೆ, ಹಿಂದೂ ಸಂಸ್ಕೃತಿಯನ್ನು ನಾಶ ಮಾಡಲು ಸಾಧ್ಯವಾಗಲಿಲ್ಲ. ಇದೀಗ ಕನಕಪುರದ ಕಪಾಲ ಬೆಟ್ಟ ಕ್ರೈಸ್ತೀಕರಣ ಮಾಡಿ, ಸುತ್ತಮುತ್ತಲ ಜನರನ್ನು ಮತಾಂತರ ಮಾಡುವ ಮೂಲಕ ಆದಿಪತ್ಯ ಸಾಧಿಸುವ ಯತ್ನ ನಡೆದಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.

ADVERTISEMENT

ಹಿಂದೂ ಜಾಗರಣಾ ವೇದಿಕೆ ತುಮಕೂರು ವಿಭಾಗೀಯ ಸಂಚಾಲಕ ಮುನೀಂದ್ರ ಮಾತನಾಡಿ, ‘ರಾಜಕೀಯ ಲಾಭಗಳಿಸಲು ಕಾನೂನು ಬಾಹಿರವಾಗಿ ಮುನೇಶ್ವರಸ್ವಾಮಿಯ ಬೆಟ್ಟ ಎಂದು ಪ್ರಸಿದ್ದಿ ಹೊಂದಿದ್ದ ಧಾರ್ಮಿಕ ಕ್ಷೇತ್ರವನ್ನು ಕ್ರೈಸ್ತೀಕರಣಗೊಳಿಸಲಾಗುತ್ತಿದೆ. ಈಗಾಗಲೇ ಚಾಮರಾಜ ನಗರ, ಕೊಳ್ಳೆಗಾಲ, ರಾಮನಗರ ವ್ಯಾಪ್ತಿಯಲ್ಲಿ ವ್ಯಾಪಕ ಆಮೀಷದ ಮತಾಂತರ ನಡೆಯುತ್ತಿದ್ದು, ಯೇಸು ಪ್ರತಿಮೆ ಸ್ಥಾಪಿಸಲು ಮುಂದಾಗಿರುವುದು ಮತಾಂತರಕ್ಕೆ ಮತ್ತಷ್ಟು ಅನುಕೂಲಮಾಡಿಕೊಡಲಿದೆ’ ಎಂದು ಹೇಳಿದರು.

‘ಕಪಾಲ ಬೆಟ್ಟದಲ್ಲಿ ಯಾವುದೇ ದುರುದ್ದೇಶ ಪೂರಿತ ಚಟುವಟಿಕೆಗಳು ನಡೆಯಬಾರದು. ಕಪಾಲಬೆಟ್ಟ ಏಸುಬೆಟ್ಟ ಆಗಲು ಬಿಡುವುದಿಲ್ಲ. ಕನಕಪುರ ಚಲೋ ಮೂಲಕ ಕಪಾಲಬೆಟ್ಟವನ್ನು ಏಸು ಬೆಟ್ಟ ಮಾಡಲು ಸಹಕರಿಸುತ್ತಿರುವ ವ್ಯಕ್ತಿಗಳಿಗೆ ಎಚ್ಚರಿಕೆ ನೀಡಲಾಗುವುದು. ಅಲ್ಲದೆ ಸರಕಾರ ಕೂಡಲೇ ಕ್ರೈಸ್ತ ಮಿಷನರಿಗಳಿಗೆ ಅಕ್ರಮವಾಗಿ ನೀಡಿರುವ ಭೂಮಿಯನ್ನು ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿದರು.
ಮುಖಂಡರಾದ ರವಿಕುಮಾರ್, ಸುಧಾಕರ್, ವರದರಾಜು, ಶೇಖರ್, ಕೊಂಡಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.