ADVERTISEMENT

ಪ್ಲಾಸ್ಟಿಕ್ ಮೇಲೆ ಮತ್ತೆ ಹದ್ದಿನಕಣ್ಣು!

ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾದ ನಗರಸಭೆ ಅಧಿಕಾರಿಗಳು, ನಗರದಲ್ಲಿ ನಿರಂತರವಾಗಿ ಮುಂದುವರಿಯುತ್ತಿರುವ ದಾಳಿ

ಈರಪ್ಪ ಹಳಕಟ್ಟಿ
Published 25 ಡಿಸೆಂಬರ್ 2019, 15:59 IST
Last Updated 25 ಡಿಸೆಂಬರ್ 2019, 15:59 IST
ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ವರ್ತಕರಿಗೆ ದಂಡ ವಿಧಿಸಿದ ನಗರಸಭೆ ಪರಿಸರ ಅಧಿಕಾರಿ ಶಿವಶಂಕರ್
ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ವರ್ತಕರಿಗೆ ದಂಡ ವಿಧಿಸಿದ ನಗರಸಭೆ ಪರಿಸರ ಅಧಿಕಾರಿ ಶಿವಶಂಕರ್   

ಚಿಕ್ಕಬಳ್ಳಾಪುರ: ನಗರಸಭೆಯ ಅಧಿಕಾರಿಗಳು ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಿದ್ದು, ಕಳೆದ ಒಂದು ವಾರದಿಂದ ನಿತ್ಯ ನಗರದ ಒಂದಲ್ಲ ಒಂದೆಡೆ ದಾಳಿ ನಡೆಸಿ ಪರಿಸರಕ್ಕೆ ಹಾನಿ ಉಂಟು ಮಾಡುವ ನಿಷೇಧಿತ ಪ್ಲಾಸ್ಟಿಕ್ ಬ್ಯಾಗ್‌ಗಳ ಬಳಕೆ ಮಾಡುವವರಿಗೆ ದಂಡ ವಿಧಿಸುವ ಮೂಲಕ ಬಿಸಿ ತಟ್ಟಿಸುವ ಕೆಲಸ ಚುರುಕಾಗಿ ಮಾಡುತ್ತಿದ್ದಾರೆ.

ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡದಂತೆ ಅರಣ್ಯ, ಪರಿಸರ ಮತ್ತು ಜೀವ ವಿಜ್ಞಾನ ಇಲಾಖೆ ಅಧಿಸೂಚನೆ ಹೊರಡಿಸಿ ಮೂರು ವರ್ಷಗಳು ಕಳೆದಿತ್ತು. ಆದರೂ ಈ ಕಾಯ್ದೆಯನ್ನು ನಗರದಲ್ಲಿ ಕಳೆದ ವರ್ಷ ಜಾರಿಗೆ ತರುವ ಪ್ರಯತ್ನ ನಡೆದಿತ್ತಾದರೂ ಅದು ಬಳಿಕ ಕಾವು ಕಳೆದುಕೊಂಡಿತ್ತು. ಪರಿಣಾಮ, ಜಿಲ್ಲೆಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನ ತಯಾರಿಸುವ ಘಟಕಗಳು ಇಲ್ಲದಿದ್ದರೂ ತಮಿಳುನಾಡು, ಬೆಂಗಳೂರಿನಿಂದ ವರ್ತಕರು ಕದ್ದುಮುಚ್ಚಿ ತಂದು ಮಾರಾಟ ಮಾಡುವ ದಂಧೆ ಅಬಾಧಿತವಾಗಿ ನಡೆದುಕೊಂಡು ಬರುತ್ತಿದೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ನಗರಸಭೆ ಅಧ್ಯಕ್ಷ, ಅಧಿಕಾರಿಗಳು ನಗರದ ವರ್ತಕರ ಸಭೆ ಕರೆದು ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮ ಮನವರಿಕೆ ಮಾಡಿಕೊಟ್ಟು, 40 ಮೈಕ್ರಾನ್‌ಗಿಂತಲೂ ಕಡಿಮೆ ಇರುವ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡದಂತೆ ತಿಳಿಸಿದ್ದರು. ಸೆಪ್ಟೆಂಬರ್ 1 ರಿಂದ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಕೂಡ ಎಚ್ಚರಿಕೆ ನೀಡಿದ್ದರು.

ADVERTISEMENT

ಜತೆಗೆ ನಗರಸಭೆ ಆಯುಕ್ತರ ನೇತೃತ್ವದಲ್ಲಿ ಅಧಿಕಾರಿಗಳು ನಗರದ ಮಳಿಗೆಗಳ ಮೇಲೆ ಮೇಲಿಂದ ಮೇಲೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಳ್ಳುವ ಜತೆಗೆ ದಂಡ ವಿಧಿಸಲು ಆರಂಭಿಸಿದರು. ಪರಿಣಾಮವಾಗಿ ವರ್ತಕರೆಲ್ಲರೂ ಅನಿವಾರ್ಯವಾಗಿ ಬಟ್ಟೆ ಬ್ಯಾಗ್‌ಗಳ ಬಳಕೆ ಮೊರೆ ಹೋಗಿದ್ದರು.

ಪರಿಣಾಮ, ನಗರದ ಎಲ್ಲಾ ಹೊಟೇಲ್‌ಗಳು ಸೇರಿದಂತೆ ಎಲ್ಲಾ ಬಗೆಯ ಮಳಿಗೆಗಳಲ್ಲಿ ಯಥೇಚ್ಛವಾಗಿ ಬಳಕೆಯಾಗುತ್ತಿದ್ದ ನಿಷೇಧಿತ ಪ್ಲಾಸ್ಟಿಕ್ ಜಾಗದಲ್ಲಿ ಬಿಳಿ ಬಟ್ಟೆಯ ಬ್ಯಾಗ್‌ ಬಳಕೆಯಾಗಲು ಆರಂಭಿಸಿತು. ಆದರೆ ನಗರಸಭೆ ಅಧಿಕಾರಿಗಳ ದಾಳಿ ನಿಲ್ಲುತ್ತಿದ್ದಂತೆ ಸಣ್ಣಪುಟ್ಟ ವರ್ತಕರು, ತಳ್ಳು ಗಾಡಿಯವರು ಪುನಃ ನಿಷೇಧಿತ ಪ್ಲಾಸ್ಟಿಕ್ ಬಳಕೆ ಆರಂಭಿಸಿದರು. ಪುನಃ ಪ್ಲಾಸ್ಟಿಕ್ ಹಾವಳಿ ಹೆಚ್ಚಾಗುತ್ತಿದ್ದಂತೆ ಕಳೆದ ಜುಲೈನಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಸುವವರಿಗೆ ದಂಡ ವಿಧಿಸುವುದಾಗಿ ಪ್ರಚಾರ ಸಹ ನಡೆಸಲಾಗಿತ್ತು.

ಕಳೆದ ಆಗಸ್ಟ್‌ನಲ್ಲಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ಸಂತೋಷ್ ಬಾಬು ಅವರು ನಗರದಲ್ಲಿ ಪ್ಲಾಸ್ಟಿಕ್ ಕೈಚೀಲ ಕೊಂಡೊಯ್ಯುತ್ತಿದ್ದ ಪಾದಚಾರಿಗಳಿಗೆ ದಂಡ ವಿಧಿಸಿ, ಬಟ್ಟೆ ಕೈಚೀಲ ನೀಡುವ ಮೂಲಕ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಜಾಗೃತಿ ಮೂಡಿಸಿದ್ದರು. ಆಗಸ್ಟ್‌ನಲ್ಲಿ ಕೆಲ ದಿನ ತಹಬದಿಗೆ ಬಂದಿದ್ದ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮತ್ತೆ ಎಂದಿನಂತೆ ಯಥಾಸ್ಥಿತಿಯಲ್ಲಿ ಉಪಯೋಗದಲ್ಲಿತ್ತು.

ಕೆಲ ತಿಂಗಳ ಹಿಂದೆ ನಗರಸಭೆಗೆ ನೂತನ ಆಯುಕ್ತರಾಗಿ ಬಂದ ಡಿ.ಲೋಹಿತ್ ಅವರ ಕಾಳಜಿಯಿಂದಾಗಿ ನಗರದಲ್ಲಿ ಪುನಃ ನಿಷೇಧಿತ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವ ಕಾರ್ಯ ಚುರುಕು ಪಡೆದಿದ್ದು, ಕಳೆದ ಸುಮಾರು10 ದಿನಗಳಿಂದ ನಗರಸಭೆ ಅಧಿಕಾರಿಗಳು ನಗರದಲ್ಲಿ ಪ್ಲಾಸ್ಟಿಕ್ ಬಳಕೆಯ ಮೇಲೆ ಹದ್ದಿನ ಕಣ್ಣಿಟ್ಟು, ಕಾನೂನು ಉಲ್ಲಂಘಿಸುವವರಿಂದ ಸುಮಾರು ₹50 ಸಾವಿರದಷ್ಟು ದಂಡ ವಸೂಲಿ ಮಾಡುವ ಜತೆಗೆ ಸುಮಾರು 200 ಕೆ.ಜಿ ನಿಷೇಧಿತ ಪ್ಲಾಸ್ಟಿಕ್ ಜಪ್ತಿ ಮಾಡಿದ್ದಾರೆ. ಅದರ ಬೆನ್ನಲ್ಲೇ ದಂಡದ ಭಯಕ್ಕೆ ವರ್ತಕರು ನಿಷೇಧಿತ ಪ್ಲಾಸ್ಟಿಕ್ ಬಳಸಲು ಹಾಕಲು ಆರಂಭಿದ್ದಾರೆ.

ಈ ಹಿಂದೆ ನಗರದ ಅನೇಕ ಹೊಟೇಲ್‌ಗಳಲ್ಲಿ ಪ್ಲಾಸ್ಟಿಕ್ ಹಾಳೆಗಳಲ್ಲಿ ಇಡ್ಲಿ ಬೇಯಿಸಲಾಗುತ್ತಿತ್ತು. ಅದರಿಂದಾಗಿ ಪ್ರತಿದಿನ ಸಾವಿರಾರು ಜನರ ಹೊಟ್ಟೆಗೆ ವಿಧಾನಗತಿಯಲ್ಲಿ ಹಾನಿಕಾರಕ ವಿಷ ದೇಹ ಸೇರುತ್ತಿತ್ತು. ಇದೀಗ ಅದಕ್ಕೂ ಕಡಿವಾಣ ಬಿದ್ದಿದ್ದು, ಬಹುತೇಕರು ಇಡ್ಲಿ ಬೇಯಿಸಲು ಬಟ್ಟೆ ಬಳಸುತ್ತಿದ್ದಾರೆ. ನಗರಸಭೆಯ ಈ ಕಟ್ಟುನಿಟ್ಟಿನ ಕ್ರಮದಿಂದಾಗಿ ತ್ಯಾಜ್ಯದಲ್ಲಿ ಪ್ಲಾಸ್ಟಿಕ್ ಪ್ರಮಾಣ ಕೂಡ ತಗ್ಗಿದೆ.

‘ಪ್ಲಾಸ್ಟಿಕ್ ಒಂದು ಬ್ರಹ್ಮ ರಾಕ್ಷಸ ಇದ್ದಂತೆ. ಅದು ಸುಟ್ಟರೂ ಅಪಾಯಕಾರಿ, ಹಾಗೇ ಎಸೆದರೆ ಕೊಳೆಯದೇ ಮತ್ತಷ್ಟು ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಅದರಲ್ಲೂ ಒಂದೇ ಒಂದು ಬಾರಿ ಬಳಸಿ ಬಿಸಾಕುವ, ಪುನರ್ ಬಳಕೆ ಮಾಡಲಾಗದಂತಹ ಪ್ಲಾಸ್ಟಿಕ್ ಇವತ್ತು ಬಹುತೇಕ ನಗರಗಳಲ್ಲಿ ಕೃತಕ ಬೆಟ್ಟವೊಂದನ್ನು ನಿರ್ಮಾಣ ಮಾಡುತ್ತಿದೆ. ಇದು ಕಳವಳದ ಸಂಗತಿ. ಆದ್ದರಿಂದ ವರ್ತಕರಾಗಲಿ, ನಾಗರಿಕರಾಗಲಿ ಸ್ವಯಂಪ್ರೇರಿತರಾಗಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುವುದು ನಿಲ್ಲಿಸಬೇಕಾದ ಅಗತ್ಯವಿದೆ’ ಎನ್ನುತ್ತಾರೆ ನಗರಸಭೆ ಆಯುಕ್ತ ಡಿ.ಲೋಹಿತ್.

‘ನಗರದಲ್ಲಿ ಈಗಾಗಲೇ ತ್ಯಾಜ್ಯವನ್ನು ಬೇರ್ಪಡಿಸಿ, ಹಸಿ ಕಸದಿಂದ ಗೊಬ್ಬರ ಮಾಡಲಾಗುತ್ತಿದೆ. ಪುನರ್ ಬಳಕೆ ಮಾಡಬಹುದಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಪೌರಕಾರ್ಮಿಕರು ಮಾರಾಟ ಮಾಡಿ ಹಣ ಪಡೆಯುತ್ತಿದ್ದಾರೆ. ನಗರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಿಸುವ ತೀರ್ಮಾನ ಮಾಡಿದ್ದೇವೆ. ಹೀಗಾಗಿ ದಾಳಿ ನಿರಂತರವಾಗಿ ಮುಂದುವರಿಸುತ್ತೇವೆ. ಪದೇ ಪದೇ ಕಾನೂನು ಉಲ್ಲಂಘಿಸುವ ವರ್ತಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.