ADVERTISEMENT

ಶೀಘ್ರ ಕೈಗಾರಿಕೆ ಪ್ರಕ್ರಿಯೆ ಆರಂಭಿಸಿ, ಭೂಪರಿಹಾರ ನೀಡಿ: ಎಂ.ಬಿ.ಪಾಟೀಲ್‌ಗೆ ಮನವಿ

ಕೆಐಎಡಿಬಿ ರೈತ ಪರ ಹೋರಾಟ ಸಮಿತಿಯಿಂದ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 6:16 IST
Last Updated 26 ಸೆಪ್ಟೆಂಬರ್ 2025, 6:16 IST
ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಕೆಐಎಡಿಬಿ ವತಿಯಿಂದ ತ್ವರಿತಗತಿಯಲ್ಲಿ ಕೈಗಾರಿಕೆ ಆರಂಭಿಸಿ, ಭೂಪರಿಹಾರ ನೀಡಬೇಕೆಂದು ಒತ್ತಾಯಿಸಿ ಕೆಐಎಡಿಬಿ ರೈತ ಪರ ಹೋರಾಟ ಸಮಿತಿ ಪದಾಧಿಕಾರಿಗಳು ಬೆಂಗಳೂರಿನಲ್ಲಿ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು
ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಕೆಐಎಡಿಬಿ ವತಿಯಿಂದ ತ್ವರಿತಗತಿಯಲ್ಲಿ ಕೈಗಾರಿಕೆ ಆರಂಭಿಸಿ, ಭೂಪರಿಹಾರ ನೀಡಬೇಕೆಂದು ಒತ್ತಾಯಿಸಿ ಕೆಐಎಡಿಬಿ ರೈತ ಪರ ಹೋರಾಟ ಸಮಿತಿ ಪದಾಧಿಕಾರಿಗಳು ಬೆಂಗಳೂರಿನಲ್ಲಿ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು   

ಶಿಡ್ಲಘಟ್ಟ: ತಾಲ್ಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಕೆಐಎಡಿಬಿ ವತಿಯಿಂದ ಕೈಗಾರಿಕೆ ಪ್ರಾರಂಭ ಪ್ರಕ್ರಿಯೆ ತ್ವರಿತಗತಿಯಲ್ಲಿ ನಡೆಸಲಿ. ಜೊತೆಗೆ ಭೂಸ್ವಾಧೀನ ಪಡಿಸಿಕೊಂಡ ರೈತರಿಗೆ ಪರಿಹಾರ ಬೇಗ ನೀಡಬೇಕೆಂದು ಒತ್ತಾಯಿಸಿ ಕೆಐಎಡಿಬಿ ರೈತ ಪರ ಹೋರಾಟ ಸಮಿತಿ ಪದಾಧಿಕಾರಿಗಳು ಗುರುವಾರ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.

ತ್ವರಿತಗತಿಯಲ್ಲಿ ಉತ್ತಮ ಭೂ ಪರಿಹಾರ ನೀಡಬೇಕು. ಮನೆಗೊಬ್ಬರಿಗೆ ಶಾಶ್ವತ ಕೆಲಸ ನೀಡುವ ಮೂಲಕ ಹಿಂದುಳಿದ ತಾಲ್ಲೂಕನ್ನು ಅಭಿವೃದ್ಧಿಪಡಿಸಬೇಕೆಂದು ಬೆಂಗಳೂರಿನಲ್ಲಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಸುಮಾರು 13 ಹಳ್ಳಿಗಳ 2,823 ಎಕರೆ ಜಮೀನನ್ನು ಕೈಗಾರಿಕಾ ಅಭಿವೃದ್ಧಿ ಮಂಡಳಿ ಸ್ವಾಧೀನ ಪಡಿಸಿಕೊಂಡು 13 ತಿಂಗಳು ಕಳೆದರೂ ಕೆಐಎಡಿಬಿಯಿಂದ ಯಾವುದೇ ಪ್ರಕ್ರಿಯೆ ನಡೆಯುತ್ತಿಲ್ಲ. ಹಾಗಾಗಿ ತ್ವರಿತಗತಿಯಲ್ಲಿ ಪ್ರಕ್ರಿಯೆ  ಚುರುಕುಗೊಳಿಸಬೇಕೆಂದು ಒತ್ತಾಯಿಸಿದರು.

ADVERTISEMENT

ನೀರಾವರಿ ಪ್ರದೇಶವನ್ನು ಕೈಬಿಡಬೇಕು. ಜಂಗಮಕೋಟೆ ಹೋಬಳಿಯಲ್ಲಿ 520 ಎಕರೆ ಸಂಪೂರ್ಣವಾಗಿ ಪಿಎಸ್ಎಲ್ ಕಂಪನಿ ಹೆಸರಿನಲ್ಲಿದೆ. ಆ ಜಮೀನಿನ ಮೂಲ ರೈತರಿಗೆ ಸರ್ಕಾರದ ಭೂ ಪರಿಹಾರದ ಹಣ ಜಮಾ ಮಾಡಬೇಕು. ಭೂಮಿ ನೀಡಿದ ರೈತನ ಪ್ರತಿ ಎಕರೆಗೆ ₹3 ಕೋಟಿ ರೂ ಭೂ ಪರಿಹಾರ ನೀಡಲು ಕ್ರಮ ವಹಿಸಬೇಕು ಎಂದರು.

ಕೆಐಎಡಿಬಿ ಪರ ಇರುವವರು ರೈತರ ಮೇಲೆ ಹಲ್ಲೆ, ದಬ್ಬಾಳಿಕೆ ನಡೆಸುತ್ತಿದ್ದು, ಅಂತಹವರ ವಿರುದ್ಧ ಕಾನೂನು ರೀತಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ‘ನಾನು ರೈತನ ಕುಟುಂಬದಿಂದ ಬಂದಿರುವವನು. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯ ಆಗದಂತೆ ಉತ್ತಮ ಬೆಲೆ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ತಾಲ್ಲೂಕು ಅಧ್ಯಕ್ಷ ಮುನೇಗೌಡ, ನಾಗೇಶ್‌ ಗೌಡ, ಕದಸಂಸ ತಾಲ್ಲೂಕು ಸಂಚಾಲಕ ರಾಮಾಂಜನೇಯ, ಸುಬ್ರಮಣಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.