ಚಿಕ್ಕಬಳ್ಳಾಪುರ: ಮನುಷ್ಯನ ಜೀವನಕ್ಕೆ ಬೇಕಾದ ಎಲ್ಲ ಆದರ್ಶ, ಸಲಹೆ, ಮಾರ್ಗದರ್ಶನಗಳು ಭಗವದ್ಗೀತೆಯ ತಾತ್ಪರ್ಯದಲ್ಲಿವೆ ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯಾದವ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಶನಿವಾರ ನಡೆದ ಕೃಷ್ಣನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದೂ ಧರ್ಮೀಯರು ಕೃಷ್ಣನನ್ನು ಆರಾಧಿಸುವ, ಪೂಜಿಸುವ ಸಂಪ್ರದಾಯವನ್ನು ಅನಾದಿ ಕಾಲದಿಂದಲೂ ಪಾಲಿಸುತ್ತಿದ್ದಾರೆ. ಧರ್ಮದ ರಕ್ಷಣೆ ಮಾಡಲು ಕೃಷ್ಣನು ತೆಗೆದುಕೊಂಡ ನಿರ್ಧಾರ ಸತ್ಯದ ದಾರಿಯಾಗಿದೆ. ಜಗತ್ತಿನಲ್ಲಿ ಅಧರ್ಮ ಹೆಚ್ಚಾದಾಗ ಎಲ್ಲಾ ಕಾಲಕ್ಕೂ ಸಂಭವಾಮಿ ಯುಗೇ ಯುಗೇ ಎಂದು ಹೇಳಿ ಧರ್ಮೋದ್ಧಾರಕವಾಗಿ, ಜಗದೋದ್ಧಾರಕನಾಗಿ ನಿಂತರು ಎಂದರು.
ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರು ಕೌರವರ ಯುದ್ಧದಲ್ಲಿ ಧರ್ಮ ರಕ್ಷಣೆ ಕರ್ತವ್ಯ ಮಾಡಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರು ಸಲಹೆಗಾರ, ಯೋಧ, ರಾಜತಾಂತ್ರಿಕ ಮತ್ತು ಮಾರ್ಗದರ್ಶಕ ಸೇರಿದಂತೆ ಬಹು ಪಾತ್ರಗಳಲ್ಲಿ ಯಶಸ್ವಿಯಾಗಿ ಕಾಣಿಸಿಕೊಳ್ಳುತ್ತಾರೆ. ಒಬ್ಬ ಮಗನಾಗಿ, ಅಣ್ಣನಾಗಿ, ಪತಿಯಾಗಿ, ತಂದೆಯಾಗಿ, ಸಹೋದರನಾಗಿ, ಮಿತ್ರನಾಗಿ ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನು ಕೃಷ್ಣನ ಜೀವನ ಚರಿತ್ರೆಯನ್ನು ಅರಿಯುವ ಮೂಲಕ ತಿಳಿದುಕೊಳ್ಳಬಹುದಾಗಿದೆ ಎಂದರು.
ಕೃಷ್ಣ ಎಂದರೆ ಒಂದು ರೀತಿಯ ಚೇತನ, ಜೀವಂತಿಕೆ, ಕಳೆ. ಇಂದಿಗೂ ಅನೇಕ ತಾಯಂದಿರು ಮನೆಯಲ್ಲಿ ಚಿಕ್ಕ ಮಕ್ಕಳಿಗೆ ಕೃಷ್ಣನ ವೇಷವನ್ನ ಹಾಕಿ ಆನಂದಪಡುತ್ತಾರೆ. ಸೂರ್ಯ, ಚಂದ್ರ, ಭೂಮಿ ಇರುವವರೆಗೂ ಕೃಷ್ಣನ ಜೀವನ ಚರಿತ್ರೆ, ಆದರ್ಶ ಪ್ರಸ್ತುತವಾಗಿರಲಿವೆ ಎಂದರು.
ಪೆರೇಸಂದ್ರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಎನ್. ನರಸಿಂಹರೆಡ್ಡಿ ಮಾತನಾಡಿ, ಕೃಷ್ಣ ಜಯಂತಿಯನ್ನು ವಿಶ್ವದಾದ್ಯಂತ ಆಚರಿಸಲ್ಪಡುತ್ತಿದೆ. ಅನ್ಯ ಜನಾಂಗಕ್ಕೆ ಸೇರಿದ ಜಾಂಬವತಿಯನ್ನು ಮದುವೆಯಾಗುವ ಮೂಲಕ ಅಂತರ್ಜಾತಿ ವಿವಾಹಕ್ಕೆ ನಾಂದಿಯಾಗಿರುವ ದೈವ ಸ್ವರೂಪಿ ಕೃಷ್ಣ. ಜೂಜಿನಲ್ಲಿ ಪಾಂಡವರು ಸೋತ ನಂತರ ದ್ರೌಪದಿ ವಸ್ತ್ರಾಭರಣ ಮಾಡುವ ಸಂದರ್ಭದಲ್ಲಿ ಹೆಣ್ಣಿನ ಮಾನ, ಗೌರವ ಕಾಪಾಡುತ್ತಾರೆ. ಕೃಷ್ಣ ಪಾಂಡವರ ಜೊತೆ ಸೇರಿ ಧರ್ಮವೆಂಬ ಯುದ್ಧವನ್ನು ಗೆಲ್ಲುತ್ತಾರೆ ಎಂದು ಅವರ ಜೀವನ ಚರಿತ್ರೆ ತಿಳಿಸಿಕೊಟ್ಟರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್ ಭಾಸ್ಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗನ್ನಾಥ್ ರೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ ರವಿಕುಮಾರ್, ತಹಶೀಲ್ದಾರ್ ರಶ್ಮಿ, ಕೆ.ಎಂ ಮುನೇಗೌಡ, ಆರ್.ವೆಂಕಟೇಶ್, ವಿ.ಮನಿಕೃಷ್ಣಪ್ಪ, ವೆಂಕಟೇಶ್, ಶ್ರೀನಿವಾಸ್, ನರಸಪ್ಪ, ಗೋಪಾಲಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.