ADVERTISEMENT

ಚಿಕ್ಕಬಳ್ಳಾಪುರ ಜಿಲ್ಲಾ ಕೃಷ್ಣ ಭವನ ನಿರ್ಮಾಣಕ್ಕೆ ಅನುದಾನ: ಸುಧಾಕರ್ ಭರವಸೆ

ಸಂಸದ ಡಾ.ಕೆ ಸುಧಾಕರ್ ಭರವಸೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2024, 16:02 IST
Last Updated 26 ಆಗಸ್ಟ್ 2024, 16:02 IST
ಚಿಕ್ಕಬಳ್ಳಾಪುರದಲ್ಲಿ ನಗರದ ವೇಣುಗೋಪಾಲ ದೇವಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೃಷ್ಣ ಜಯಂತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಮತ್ತು ಸಂಸದ ಡಾ.ಕೆ ಸುಧಾಕರ್ ಉದ್ಘಾಟಿಸಿದರು
ಚಿಕ್ಕಬಳ್ಳಾಪುರದಲ್ಲಿ ನಗರದ ವೇಣುಗೋಪಾಲ ದೇವಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೃಷ್ಣ ಜಯಂತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಮತ್ತು ಸಂಸದ ಡಾ.ಕೆ ಸುಧಾಕರ್ ಉದ್ಘಾಟಿಸಿದರು   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಜಿಲ್ಲಾ ಶ್ರೀಕೃಷ್ಣ ಭವನ ನಿರ್ಮಿಸಲು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ₹50 ಲಕ್ಷ ನೀಡಲಾಗುವುದು ಎಂದು ಸಂಸದ ಡಾ.ಕೆ ಸುಧಾಕರ್ ಪ್ರಕಟಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಾದವ ಕ್ಷೇಮಾಭಿವೃದ್ಧಿ ಸಂಘ ಸಹಯೋಗದಲ್ಲಿ ನಗರದ ವೇಣುಗೋಪಾಲ ದೇವಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ  ಕೃಷ್ಣ ಜಯಂತಿಯಲ್ಲಿ ಅವರು ಮಾತನಾಡಿದರು.

ಯಾದವ ಸಮುದಾಯದವರಿಗೆ ಹಕ್ಕು ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಜಿಲ್ಲೆಯಲ್ಲಿ, ಜಿಲ್ಲಾ ಶ್ರೀಕೃಷ್ಣ ಭವನ ನಿರ್ಮಿಸಲು ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಮೀನು ಮಂಜೂರು ಮಾಡಿ ಅಧಿಕೃತ ಪತ್ರ ಹಸ್ತಾಂತರ ಮಾಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿ, ಭವನ ನಿರ್ಮಾಣಕ್ಕೆ ನೆರವಾಗಬೇಕು. ಭವನ ನಿರ್ಮಾಣಕ್ಕಾಗಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಅನುದಾನ ನೀಡುತ್ತೇನೆ ಎಂದು ಹೇಳಿದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಮಾತನಾಡಿ, ಭಾರತದ ಭವ್ಯ ಪರಂಪರೆಯಲ್ಲಿ ಕೃಷ್ಣನಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಅಧರ್ಮ ಅಳಿಸಿ ಸತ್ಯ, ಧರ್ಮ ಎತ್ತಿ ಹಿಡಿಯಲು ಕೃಷ್ಣ ನಡೆದ ಹಾದಿ ಮಹತ್ವ ಪೂರ್ಣವಾದುದು. ಈ ಹಿನ್ನೆಲೆಯಲ್ಲಿ ಕೃಷ್ಣ ಹೇಳಿರುವಂತೆ ಸತ್ಯ ಧರ್ಮವನ್ನು ಅರಿತು ಇಡೀ ವಿಶ್ವವೇ ಒಂದು ಕುಟುಂಬ ಎಂಬಂತೆ ಎಲ್ಲರೂ ಸಾಮರಸ್ಯದ ಸಹಬಾಳ್ವೆ ನಡೆಸಬೇಕು ಎಂದರು.

ಕೃಷ್ಣ ಸಂದೇಶ ಮತ್ತು ಬೋಧನೆ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಮುಂದುವರೆಯಬೇಕು ಎಂದರು.

ಪೆರೇಸಂದ್ರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಪಿ.ಎನ್. ನರಸಿಂಹರೆಡ್ಡಿ ಅವರು ವಿಶೇಷ ಉಪನ್ಯಾಸ ನೀಡಿದರು.

ಇತ್ತೀಚಿಗೆ ಶ್ರೀಲಂಕಾದಲ್ಲಿ ನಡೆದ  ಏಷಿಯನ್ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುವ ಶಿಕ್ಷಕ ಪ್ರಭಾಕರ ಅವರನ್ನು ಸನ್ಮಾನಿಸಲಾಯಿತು. ಅತಿ ಹೆಚ್ಚು ಅಂಕಗಳಿಸಿದ ಸಮುದಾಯದ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಬೇಕು ಎಂದು ತಿಳಿಸಿದರು.

ವೇದಿಕೆ ಕಾರ್ಯಕ್ರಮದ ನಂತರ ಕೃಷ್ಣ ಮೂರ್ತಿಯನ್ನು ಹೂವಿನ ಪಲ್ಲಕ್ಕಿ ಇರಿಸಿ ಮೆರವಣಿಗೆ ನಡೆಸಲಾಯಿತು. ವೇಣುಗೋಪಾಲ ದೇವಾಲಯದಿಂದ ಆರಂಭಗೊಂಡು ಬಿ.ಬಿ ರಸ್ತೆ ಮೂಲಕ ನಗರದ ಮುಖ್ಯ ಬೀದಿಗಳಲ್ಲಿ ಅದ್ದೂರಿಯಾಗಿ ಸಾಗಿತು. ಜಾನಪದ, ತಮಟೆ ವಾದ್ಯ, ಸೋಮನ ಕುಣಿತಗಳು ಸಾರ್ವಜನಿಕರ ಗಮನ ಸೆಳೆದವು.

ಶಾಸಕ ಪ್ರದೀಪ್ ಈಶ್ವರ್, ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಜಿ,ಪಂ ಸಿಇಒ ಪ್ರಕಾಶ್ ಜಿ.ಟಿ ನಿಟ್ಟಾಲಿ, ಹೆಚ್ಚುವರಿ ಜಿಲ್ಲಾಧಿಕಾರಿ ಎನ್. ಭಾಸ್ಕರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್‌ಐ ಖಾಸಿಂ, ಉಪವಿಭಾಗಾಧಿಕಾರಿ ಡಿ.ಎಲ್.ಅಶ್ವಿನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್ ಕೇಶವರೆಡ್ಡಿ, ತಾಲ್ಲೂಕು ತಹಶೀಲ್ದಾರ್ ಅನಿಲ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಡಿ.ಎಂ ರವಿಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕೆ.ಮುನೇಗೌಡ, ರಾಜ್ಯ ಯಾದವ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕ ಎಂ ಗಂಗಾಧರ, ಚಿಕ್ಕಬಳ್ಳಾಪುರ ಯಾದವ ಕ್ಷೇಮಾಭಿವೃದ್ಧಿ ಜಿಲ್ಲಾಧ್ಯಕ್ಷ ಆರ್.ವೆಂಕಟೇಶ್, ಯಾದವ ಕ್ಷೇಮಾಭಿವೃದ್ಧಿ ತಾಲ್ಲೂಕು ಅಧ್ಯಕ್ಷ ಮುನಿಕೃಷ್ಣ, ಸಮುದಾಯದ ಮುಖಂಡರಾದ ಕೆ.ವಿ ನಾಗರಾಜ್, ಮುತ್ತರಾಯಪ್ಪ, ಮುನಿರಾಜು ಹಾಜರಿದ್ದರು.

ಗಮನ ಸೆಳೆದ ಕೃಷ್ಣಜನ್ಮಾಷ್ಟಮಿ ಮೆರವಣಿಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.