ಚಿಕ್ಕಬಳ್ಳಾಪುರ: ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮಂಗಳವಾರ ಕರೆ ನೀಡಿದ್ದ ಮುಷ್ಕರಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಂಬಲ ವ್ಯಕ್ತವಾಗಲಿಲ್ಲ. ಶೇ 90ರಷ್ಟು ಬಸ್‌ಗಳು ಸಂಚಾರ ನಡೆಸಿದವು.
ಆದರೆ ಪ್ರಯಾಣಿಕರ ಸಂಖ್ಯೆಯೇ ಬಸ್ ನಿಲ್ದಾಣಗಳಲ್ಲಿ ಕಡಿಮೆ ಇತ್ತು. ಬಂದ್ ಇದೆ ಎನ್ನುವುದನ್ನು ತಿಳಿದು ಬಹಳಷ್ಟು ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದರು.
ಚಿಕ್ಕಬಳ್ಳಾಪುರದಿಂದ ಬೆಂಗಳೂರು ಕಡೆಗೆ ಹೆಚ್ಚಿನ ಬಸ್‌ಗಳು ಬೆಳಗಿನ ವೇಳೆ ಸಂಚರಿಸುತ್ತವೆ. ಅದೇ ಪ್ರಕಾರ ನಿತ್ಯದಂತೆ ಬಸ್ ಸಂಚಾರವಿತ್ತು. ನಗರದ ಕೆಎಸ್‌ಆರ್ ಟಿಸಿ ಬಸ್‌ನಿಲ್ದಾಣದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಚಿಕ್ಕಬಳ್ಳಾಪುರ ಘಟಕದಿಂದ ಶೇ 90ರಷ್ಟು ಬಸ್‌ಗಳು ಕಾರ್ಯಾಚರಣೆಗೆ ಇಳಿದಿವೆ. ಯಾವುದೇ ಸಮಸ್ಯೆ ಆಗಿಲ್ಲ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಬೆಳಿಗ್ಗೆ 10ರ ವೇಳೆಗೆ ಮಾಹಿತಿ ನೀಡಿದರು.
ಗೌರಿಬಿದನೂರು, ದೊಡ್ಡಬಳ್ಳಾಪುರ, ಬಾಗೇಪಲ್ಲಿ, ಕೋಲಾರ, ತುಮಕೂರು ಹೀಗೆ ವಿವಿಧ ಕಡೆಗಳಿಗೆ ಚಿಕ್ಕಬಳ್ಳಾಪುರ ನಿಲ್ದಾಣದಿಂದ ಬಸ್‌ಗಳು ಸಂಚರಿಸಿದವು. ಜಿಲ್ಲೆಯ ಗ್ರಾಮೀಣ ಭಾಗಗಳಿಗೆ ಸ್ವಲ್ಪ ಪ್ರಮಾಣದಲ್ಲಿಯೂ ಮುಷ್ಕರದ ಬಿಸಿ ತಟ್ಟಲಿಲ್ಲ. ಸಂಚಾರ ವ್ಯವಸ್ಥೆ ಎಂದಿನ ರೀತಿಯಲ್ಲಿಯೇ ಇತ್ತು.
ಪ್ರಯಾಣಿಕರ ಸಂಖ್ಯೆ ಕಡಿಮೆ: ಮುಷ್ಕರದ ಹಿನ್ನೆಲೆಯಲ್ಲಿ ಬಸ್‌ಗಳ ಸಂಚಾರವಿದ್ದರೂ ಎಂದಿನ ರೀತಿಯಲ್ಲಿ ಪ್ರಯಾಣಿಕರು ನಿಲ್ದಾಣದಲ್ಲಿ ಇರಲಿಲ್ಲ. ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಯಾವ ಭಾಗಕ್ಕೆ ಬಸ್‌ಗಳು ಅಗತ್ಯವಿದೆ ಎನ್ನುವುದನ್ನು ತಿಳಿದು ಅಧಿಕಾರಿಗಳು ನಿಲ್ದಾಣದಿಂದ ಬಸ್‌ಗಳನ್ನು ಕಳುಹಿಸುತ್ತಿದ್ದರು.
ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆಗಾಗಿ 1059 ಖಾಸಗಿ ವಾಹನಗಳನ್ನು ಬಳಸಿಕೊಳ್ಳಲು ಮುಂದಾಗಿತ್ತು. ಆದರೆ ಈಗ ಕೆಎಸ್‌ಆರ್‌ಟಿಸಿ ಬಸ್‌ಗಳೇ ಚಾಲನೆಯಲ್ಲಿದ್ದ ಕಾರಣ ಖಾಸಗಿ ಸಾರಿಗೆಯನ್ನು ಬಳಸಿಕೊಳ್ಳಲಿಲ್ಲ.
ಎಲ್ಲ ಮಾರ್ಗಗಳಿಗೂ ಸಂಚಾರ
ನಿತ್ಯ ಚಿಕ್ಕಬಳ್ಳಾಪುರ ಘಟಕದಿಂದ 437 ಬಸ್‌ಗಳು ಕಾರ್ಯಾಚರಣೆ ನಡೆಸುತ್ತವೆ. ಮಂಗಳವಾರವೂ ಇಷ್ಟೇ ಬಸ್‌ಗಳು ಕಾರ್ಯಾಚರಣೆ ನಡೆಸಿದವು ಎಂದು ಕೆಎಸ್‌ಆರ್‌ಟಿಸಿ ಚಿಕ್ಕಬಳ್ಳಾಪುರ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು. ಬೆಳಿಗ್ಗೆ 11ರವರೆಗೆ ಬಸ್‌ಗಳ ಕಾರ್ಯಾಚರಣೆ ನಿಧಾನಗತಿಯಲ್ಲಿ ಇತ್ತು. 11ರ ನಂತರ ಸಿಬ್ಬಂದಿಯೂ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಕ್ಕೆ ಹಾಜರಾದರು. ಆ ನಂತರ ಎಲ್ಲ ಮಾರ್ಗಗಳಿಗೂ ಎಂದಿನ ರೀತಿಯಲ್ಲಿಯೇ ಬಸ್‌ಗಳು ಕಾರ್ಯಾಚರಣೆ ನಡೆಸಿದವು ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.