ಶಿಡ್ಲಘಟ್ಟ: ರಾಜಕಾಲುವೆಯ ಹೂಳು, ತ್ಯಾಜ್ಯವನ್ನು ತೆಗೆದು ನಗರ ಹೊರವಲಯದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಅಂಚಿನ ಕೆರೆಗೆ ಸುರಿದಿದ್ದ ಗುತ್ತಿಗೆದಾರ ಹಾಗೂ ನಗರಸಭೆ ಸದಸ್ಯನನ್ನು ಶಾಸಕ ಬಿ.ಎನ್.ರವಿಕುಮಾರ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಗುತ್ತಿಗೆದಾರ ಕೆ.ಬಿ.ಮಂಜುನಾಥ್ ಮತ್ತು ನಗರಸಭೆ ಸದಸ್ಯ ರಾಘವೇಂದ್ರ ಅವರನ್ನು ಗೃಹ ಕಚೇರಿಗೆ ಕರೆಸಿಕೊಂಡ ಶಾಸಕ ಬಿ.ಎನ್.ರವಿಕುಮಾರ್ ಅವರು ಕೆರೆಗೆ ತ್ಯಾಜ್ಯ ಸುರಿದಿದ್ದಲ್ಲದೆ ಈ ಬಗ್ಗೆ ಸಾರ್ವಜನಿಕರು, ಮಾಧ್ಯಮದವರು ಪ್ರಶ್ನಿಸಿದ್ದಕ್ಕೆ ‘ಶಾಸಕರು ಹೇಳಿದ್ದಕ್ಕೆ ತಾಜ್ಯ ಸುರಿದು ಹಸನು ಮಾಡಿದ್ದೆ’ ಎಂದು ಹೇಳಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಸ್ವಂತ ಹಣ ಖರ್ಚು ಮಾಡಿ ಕೆರೆ ಅಂಚು, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ಕಸಕಡ್ಡಿ, ತ್ಯಾಜ್ಯ ತೆಗೆದರೆ ನೀವು ಅಲ್ಲಿ ಮತ್ತೆ ತ್ಯಾಜ್ಯ ಗುಡ್ಡೆ ಹಾಕುತ್ತೀರಾ. ಸ್ಥಳೀಯರು ಕೇಳಿದರೆ ಶಾಸಕರೇ ಹೇಳಿದ್ದು ಎಂದು ನನ್ನ ಮೇಲೆ ಹೇಳಿ ಮರ್ಯಾದೆ ಕಳೆಯುತ್ತೀರಾ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
‘ಈ ಮೊದಲೆ ಅಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಅಲ್ಲಿ ಯಾರಾದರೂ ಕಸ ಕಡ್ಡಿ ಹಾಕಿದರೆ ಅವರಿಗೆ ದಂಡ ವಿಧಿಸುವಂತೆ ನಗರಸಭೆ ಅಧಿಕಾರಿಗೆ ಸೂಚಿಸಿದ್ದೇನೆ. ಅಂತದ್ದರಲ್ಲಿ ನಾನು ಅಲ್ಲಿ ಕಸ ತಂದು ಹಾಕಿ ಎಂದು ಹೇಳಲು ಸಾಧ್ಯವೇ. ನಾಗರಿಕರಲ್ಲಿ ಗೊಂದಲ ಏಕೆ ಮೂಡಿಸುತ್ತೀರಿ. ಇಂತಹ ಕೆಲಸ ಮತ್ತೆ ಪುನರಾವರ್ತನೆ ಆಗಬಾರದು’ ಎಂದು ಎಚ್ಚರಿಕೆ ನೀಡಿದ್ದಾರೆ.
ಮೋರಿ ನಿರ್ಮಾಣ: ನಗರದ ಚಿಂತಾಮಣಿ ಮಾರ್ಗದ ಟೋಲ್‌ಗೇಟ್ ಬಳಿ ಹಾದು ಹೋಗಿರುವ ರಾಜಕಾಲುವೆ ಬಳಿ ಅಕ್ಕಪಕ್ಕದ ಮನೆಯವರು ಓಡಾಡಲು ಅನುಕೂಲ ಆಗುವಂತೆ ಮೋರಿ ನಿರ್ಮಿಸುವ ವಿಚಾರವಾಗಿಯೂ ಸ್ಥಳೀಯರೊಂದಿಗೆ ನಗರಸಭೆ ಸದಸ್ಯ ರಾಘವೇಂದ್ರ ನಡೆದುಕೊಂಡ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರು ಓಡಾಡಲು ಅನುಕೂಲ ಆಗುವಂತೆ ಮೋರಿ ನಿರ್ಮಿಸಿಕೊಡಿ ಎಂದು ಮನವಿ ಮಾಡಿದಾಗ, ಕ್ರಿಯಾ ಯೋಜನೆಯಲ್ಲಿ ಮೋರಿ ನಿರ್ಮಿಸುವ ವಿಚಾರ ಇಲ್ಲ. ಹಾಗಾಗಿ ಮೋರಿ ನಿರ್ಮಾಣ ಸಾಧ್ಯವಿಲ್ಲ ಎಂದು ಆ ಭಾಗದ ನಗರಸಭೆ ಸದಸ್ಯ ರಾಘವೇಂದ್ರ ಹೇಳಿದ್ದು ಸ್ಥಳೀಯರ ನಡುವೆ ಈ ವಿಚಾರ ವಾಗ್ವಾದಕ್ಕೆ ಕಾರಣವಾಗಿತ್ತು.
ಈ ವಿಚಾರವಾಗಿಯೂ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ, ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡುವುದು ಅಧಿಕಾರಿಗಳ ಕೆಲಸ. ಅದು ಬಿಟ್ಟು ಎಸ್ಟಿಮೇಟ್‌ನಲ್ಲಿ ಇಲ್ಲ, ಮೋರಿ ಆಗುವುದಿಲ್ಲ, ನೀವು ಎಲ್ಲಿ ಬೇಕಾದರೂ ಓಡಾಡಿಕೊಳ್ಳಿ ಎಂದೆಲ್ಲಾ ಹೇಳುವ ಬದಲು ನನ್ನ ಗಮನಕ್ಕೆ ತನ್ನಿ. ನಾನು ಅನುಕೂಲ ಮಾಡಿಕೊಡುತ್ತೇನೆ ಎಂದು ಬುದ್ದಿವಾದ ಹೇಳಿದ್ದಾರೆ.
ಶೀಘ್ರದಲ್ಲೆ ರಾಜಕಾಲುವೆ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿನೀಡಿ ಸ್ಥಳ ಪರಿಶೀಲಿಸಿ ಸ್ಥಳೀಯರ ಸಮಸ್ಯೆ ಆಲಿಸಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.