ADVERTISEMENT

ತಿದ್ದುಪಡಿ ಹಿಂಪಡೆಯದಿದ್ದರೆ ದೊಡ್ಡಮಟ್ಟದ ವಿರೋಧ

ಭೂಸುಧಾರಣಾ ಕಾಯ್ದೆ ತಿದ್ದುಪಡಿ ಹಿಂಪಡೆಯುವಂತೆ ರೈತಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 11:26 IST
Last Updated 25 ಜೂನ್ 2020, 11:26 IST
ಕೋಡಿಹಳ್ಳಿ ಚಂದ್ರಶೇಖರ್‌
ಕೋಡಿಹಳ್ಳಿ ಚಂದ್ರಶೇಖರ್‌   

ಚಿಕ್ಕಬಳ್ಳಾಪುರ: ‘ರಾಜ್ಯ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದ ಭೂಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ದೊಡ್ಡಮಟ್ಟದಲ್ಲಿ ರೈತರ ವಿರೋಧ ಎದುರಿಸಬೇಕಾಗುತ್ತದೆ’ ಎಂದು ರೈತಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೃಷಿ ಭೂಮಿ ನಮ್ಮೆಲ್ಲರ ಊಟದ ಬಟ್ಟಲು. ಅದನ್ನು ನಾಳಿನ ತಲೆಮಾರುಗಳಿಗೆ ಜೋಪಾನವಾಗಿ ಬಿಟ್ಟು ಹೋಗಬೇಕಿದೆ. ಅದಕ್ಕಾಗಿ ಭೂಮಿ ಕೃಷಿಕನ ಕೈಯಲ್ಲಿ ಇರಬೇಕು. ಅನ್ಯಕಾರ್ಯಗಳಿಗೆ ವರ್ಗಾವಣೆಯಾಗಬಾರದು’ ಎಂದು ತಿಳಿಸಿದರು.

‘ವಾರ್ಷಿಕವಾಗಿ ಮೂರು ಬೆಳೆ ಬೆಳೆಯುವಂತಹ ನಮ್ಮ ಉತ್ಕೃಷ್ಟ ಮಣ್ಣಿನ ಮೇಲೆ ವಿದೇಶಿ ಬಂಡವಾಳಶಾಹಿಗಳಿಗೆ ಕಣ್ಣು ಬಿದ್ದಿರುವ ಕಾರಣಕ್ಕೆ ಸರ್ಕಾರ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಿ, ಕಾರ್ಪೊರೇಟ್‌, ಬಹುರಾಷ್ಟ್ರೀಯ ಕಂಪೆನಿಗಳಿಗೆ ಭೂಮಿ ಖರೀದಿಸಲು ಅವಕಾಶ ಮಾಡಿಕೊಡಲು ಹೊರಟಿದೆ’ ಎಂದು ಆರೋಪಿಸಿದರು.

ADVERTISEMENT

‘ಕೈಗಾರಿಕೆಗಳನ್ನು ತೋರಿಸಿ ಕೃಷಿ ಭೂಮಿ ಲೂಟಿ ಮಾಡಲು ಹೊರಟಿದ್ದಾರೆ. ಈ ಹಿಂದೆ ಕೂಡ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆಕರ್ನಾಟಕ ಕೈಗಾರಿಕಾ ಪ್ರಾದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಹೆಸರಿನಲ್ಲಿ ಎರಡು ಲಕ್ಷ ಎಕರೆ ಭೂಮಿಯನ್ನು ಕೈಗಾರಿಕೆ ಉದ್ದೇಶಕ್ಕೆ ಖರೀದಿಸಲಾಗಿತ್ತು’ ಎಂದು ಹೇಳಿದರು.

‘ಕೆಐಎಡಿಬಿ ಹೆಸರಿನಲ್ಲಿ ಖರೀದಿಸಿದ ಭೂಮಿ ಪೈಕಿ 10 ಸಾವಿರ ಎಕರೆ ಕೂಡ ಕೈಗಾರಿಕೆಗಳಿಗೆ ಬಳಕೆಯಾಗಿಲ್ಲ. ಉಳಿದೆಲ್ಲ ಭೂಮಿ ರಿಯಲ್‌ ಎಸ್ಟೆಟ್‌ ಉದ್ಯಮಕ್ಕೆ ಬಳಕೆಯಾಗಿದೆ. ಈ ಬಗ್ಗೆ ಲೆಕ್ಕಪರಿಶೋಧನಾ ವರದಿ ಕೂಡ ಇದೆ. ಅದನ್ನು ಕಂದಾಯ ಸಚಿವ ಆರ್.ಅಶೋಕ್ ಅವರು ಸಾರ್ವಜನಿಕವಾಗಿ ಬಿಡುಗಡೆ ಮಾಡಲಿ’ ಎಂದು ತಿಳಿಸಿದರು.

‘ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ಈಗಾಗಲೇ ರಾಜ್ಯದಲ್ಲಿ ಸುಗ್ರಿವಾಜ್ಞೆ ಮೂಲಕ ಕರ್ನಾಟಕ ಕೃಷಿ ಉತ್ಪನ್ನಗಳ ಮಾರಾಟ (ನಿಯಂತ್ರಣ ಮತ್ತು ಅಭಿವೃದ್ಧಿ)(ಎರಡನೇ ತಿದ್ದುಪಡಿ) ಮಸೂದೆ ಜಾರಿಗೆ ತರಲಾಗಿದೆ. ಜತೆಗೆ, ಕೇಂದ್ರ ಕೂಡ ಬಿತ್ತನೆ ಬೀಜಗಳ ಮಸೂದೆ–2019 ಸಿದ್ಧಪಡಿಸಿದೆ.ರೈತರನ್ನು ದಿವಾಳಿ ಎಬ್ಬಿಸುವ ಇಂತಹ ಕಾನೂನು ತರಲು ಹೊರಟಿರುವುದು ವಿಪರ್ಯಾಸ’ ಎಂದರು.

‘ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಯಾವುದೇ ಕಾಯ್ದೆ ಜಾರಿಗೆ ಮುನ್ನ ವಿಧಾನಸಭೆ, ಸಂಸತ್ತಿನಲ್ಲಿ, ಸಮಾಜದ ನಡುವೆ ಚರ್ಚೆಯಾಗಬೇಕು. ಆದರೆ, ಯಾವುದೇ ಚರ್ಚೆಗಳಿಲ್ಲದೆ ಸುಗ್ರಿವಾಜ್ಞೆ ಮೂಲಕ ನಮ್ಮ ಮೇಲೆ ಕಾಯ್ದೆ ಹೇರುವುದಾದರೆ ಇದು ಯಾವ ಸೀಮೆಯ ಪ್ರಜಾಪ್ರಭುತ್ವ? ಜನರ ಬಾಯಿಗೆ ಬಟ್ಟೆ ಕಟ್ಟಿಸಿ ಕಾಯ್ದೆ ಜಾರಿಗೆ ತರುವುದು ಸರಿಯೇ’ ಎಂದು ಖಾರವಾಗಿ ಪ್ರಶ್ನಿಸಿದರು.

‘ಇದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಸರ್ಕಾರಗಳ ತಲೆಗಳು ಉರುಳಿ ಹೋಗುತ್ತವೆ. ಯಾವುದೇ ಕಾರ್ಪೊರೇಟ್‌ ಕಂಪೆನಿ ಬಂದು ರೈತರ ಜಮೀನಿನಲ್ಲಿ ಪ್ರವೇಶಿಸಿದರೆ ರೈತರು ಕ್ಷಮಿಸಲು ಸಾಧ್ಯವಿಲ್ಲ. ರೈತನ ಮಗ ಎಂದು ಹೇಳಿಕೊಳ್ಳುವ ಯಡಿಯೂರಪ್ಪ ಅವರು ಕೂಡ ರೈತರ ಹಿತ ಕಾಪಾಡುವ ಬದಲು ರೈತರನ್ನೇ ಮುಗಿಸಲು ಹೊರಟಿದ್ದಾರೆ. ಅದು ಸರಿಯಾದ ನಡವಳಿಕೆಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತಸಂಘದ ರಾಜ್ಯದ ಘಟಕದ ಉಪಾಧ್ಯಕ್ಷ ನಾಗಣ್ಣ, ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ಕಾರ್ಯದರ್ಶಿ ಶಿವಪ್ಪ, ಸಹಕಾರ್ಯದರ್ಶಿ ವೀರಭದ್ರಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷ ರಾಮನಾಥ್, ಪದಾಧಿಕಾರಿಗಳಾದ ವೇಣುಗೋಪಾಲ್, ಉಮಾ, ಲಕ್ಷ್ಮಣರೆಡ್ಡಿ, ತಾದೂರು ಮಂಜುನಾಥ್, ರಮಣಾರೆಡ್ಡಿ, ರಾಮಾಂಜನಪ್ಪ, ಮುರುಳಿ, ಮಾಳಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.