ADVERTISEMENT

ಸ್ವಹಿತಾಸಕ್ತಿಗೆ ಮಾರಾಟದ ಸರಕಾದ ಶಾಸಕರು

ರಾಜ್ಯದಲ್ಲಿ ನಡೆಯುತ್ತಿರುವ ಶಾಸಕರ ರೆಸಾರ್ಟ್ ರಾಜಕಾರಣ ವಿರುದ್ಧ ಸಿಪಿಎಂ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2019, 19:54 IST
Last Updated 17 ಜುಲೈ 2019, 19:54 IST
ಸಿಪಿಎಂ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಸಿಪಿಎಂ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.   

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ನಡೆಯುತ್ತಿರುವ ಶಾಸಕರ ರೆಸಾರ್ಟ್ ರಾಜಕಾರಣ ವಿರೋಧಿಸಿ ಸಿಪಿಎಂ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ವಾಪಸಂದ್ರದಿಂದ ಅಂಬೇಡ್ಕರ್ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಶಾಸಕರ ರೆಸಾರ್ಟ್ ರಾಜಕಾರಣದ ವಿರುದ್ಧ ಧಿಕ್ಕಾರ ಕೂಗಿದರು.

ಈ ವೇಳೆ ಮಾತನಾಡಿದ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ, ‘ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ರೆಸಾರ್ಟ್ ರಾಜಕಾರಣ ದೇಶದ ಜನರ ಮುಂದೆ ರಾಜ್ಯದ ಜನರು ತಲೆ ತಗ್ಗಿಸುವಂತಾಗಿದೆ. ಇದಕ್ಕೆಲ್ಲಾ ಜನಪ್ರತಿನಿಧಿಗಳೇ ನೇರ ಕಾರಣ. ಇಂತವರನ್ನು ವಿಧಾನಸೌಧಕ್ಕೆ ಆಯ್ಕೆ ಮಾಡಿ ಕಳುಹಿಸಿರುವುದು ದುರ್ದೈವದ ಸಂಗತಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಸರ್ಕಾರವನ್ನು ಉರುಳಿಸಲು 15 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಸೇರಿದ್ದಾರೆ. ಇನ್ನೂ ಅನೇಕರು ಹೊಟೇಲ್‌ಗಳಲ್ಲಿ ಠಿಕಾಣಿ ಹೂಡಿದ್ದಾರೆ. ಉಳಿದ ಜನಪ್ರತಿನಿಧಿಗಳು ರೆಸಾರ್ಟ್‌ಗಳಲ್ಲಿ ಬಚ್ಚಿಟ್ಟುಕೊಂಡಿರುವುದು ನಾಚಿಕೆಗೇಡಿನ ವಿಚಾರ. ಇಂತಹ ಕೆಟ್ಟ ರಾಜಕಾರಣಿಗಳಿಂದ ರಾಜ್ಯದ ಮಾನ ಹರಾಜು ಆಗುತ್ತಿದೆ’ ಎಂದು ಕಿಡಿಕಾರಿದರು.

‘ರಾಜ್ಯದ ಜನರ ಹಿತಾಸಕ್ತಿ ಮರೆತಿರುವ ಶಾಸಕರು ರೆಸಾರ್ಟ್‌ಗಳಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಸಮಸ್ಯೆಗಳು ಇದ್ದರೆ ಶಾಸಕರು ಶಾಸಕಾಂಗ ಸಭೆಯಲ್ಲಿ ಚರ್ಚೆ ಮಾಡಬಹುದಿತ್ತು. ಅದರ ಬದಲು ರೆಸಾರ್ಟ್‌ಗಳಲ್ಲಿ ಬಚ್ಚಿಟ್ಟುಕೊಳ್ಳುವ ಮೂಲಕ ರಾಜ್ಯದ ಜನರಿಗೆ ಮೋಸ ಮಾಡಿದ್ದಾರೆ. ಈ ಬಗ್ಗೆ ಶಾಸಕರು ಜನರಿಗೆ ಉತ್ತರ ನೀಡಬೇಕು’ ಎಂದು ಒತ್ತಾಯಿಸಿದರು.

‘ಕೇಂದ್ರದಲ್ಲಿ 2ನೇ ಬಾರಿ ಆಡಳಿತಕ್ಕೆ ಬಂದ ಬಿಜೆಪಿ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ರಾಜ್ಯದಲ್ಲಿ ಬಿಜೆಪಿ ಹಿಂಬಾಗಿಲಿನಿಂದ ಅಧಿಕಾರ ಪಡೆಯುವ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಗೋವಾದಲ್ಲಿ 15 ಶಾಸಕರನ್ನು ಪಕ್ಷಾಂತರ ಮಾಡಿಸಿ, ಅವರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಮಧ್ಯಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಲದಲ್ಲಿ ಕೂಡ ಅಧಿಕಾರದ ಆಸೆಗಾಗಿ ರಾಜಕೀಯ ಪಿತೂರಿಗಳು ನಡೆಯುತ್ತಿವೆ. ಬಿಜೆಪಿಯಿಂದ ಪ್ರಜಾಪ್ರಭುತ್ವಕ್ಕೆ ದೊಡ್ಡ ಗಂಡಾಂತರ ಬಂದಿದೆ’ ಎಂದು ಆಪಾದಿಸಿದರು.

‘ರಾಜ್ಯದಲ್ಲಿ ಇವತ್ತು ಶಾಸಕರು ಮಾರಾಟದ ಸರಕಾಗಿದ್ದಾರೆ. ತಮ್ಮ ವೈಯಕ್ತಿಕ ಲಾಭಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಜಿಗಿಯಲು ಮುಂದಾಗುತ್ತಿದ್ದಾರೆ. ಶಾಸಕರು ತಮ್ಮನ್ನು ತಾವೇ ಮಾರಾಟ ಮಾಡಿಕೊಳ್ಳಲು ಇಂತಿಷ್ಟು ಹಣ ಎಂದು ಬೋರ್ಡ್‌ಗಳನ್ನು ಹಾಕಿಕೊಂಡಿದ್ದಾರೆ. ಮತದಾರರು ಇಂತಹವರನ್ನು ಆಯ್ಕೆ ಮಾಡಿ ಶಾಸಕಾಂಗ ಸಭೆಗೆ ಕಳಿಸಿದರೆ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಸಮಸ್ಯೆಗಳು ಎಂದಿಗೂ ಬಗೆಹರಿಯುವುದಿಲ್ಲ’ ಎಂದು ಹೇಳಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ಮಾತನಾಡಿ, ‘ರಾಜ್ಯದಲ್ಲಿ ಇತ್ತೀಚಿನ ರಾಜಕೀಯ ಬೆಳವಣಿಗೆಯಿಂದ ರಾಜ್ಯದ ಜನರಿಗೆ ಅನ್ಯಾಯವಾಗಿದೆ. ವಿಧಾನಸೌಧಕ್ಕೆ ಆಯ್ಕೆಯಾಗಿ ಹೋದ ಜನಪ್ರತಿನಿಧಿಗಳು ಅದನ್ನು ಮರೆತು ವೈಯಕ್ತಿಕ ಸ್ವಾರ್ಥ ಈಡೇರಿಸಿಕೊಳ್ಳಲು ರೆಸಾರ್ಟ್‌ಗಳಲ್ಲಿ ಬಚ್ಚಿಟ್ಟು ಕೊಳ್ಳಲು ಮುಂದಾಗಿರುವುದು ಖಂಡನೀಯ. ಇಂತಹ ರಾಜಕಾರಣಿಗಳಿಗೆ ಮುಂದಿನ ದಿನಗಳಲ್ಲಿ ಮತದಾರರೇ ತಕ್ಕ ಪಾಠ ಕಲಿಸಬೇಕು’ ಎಂದು ಹೇಳಿದರು.

ಸಿಪಿಎಂ ಮುಖಂಡರಾದ ಎಚ್.ಪಿ.ಲಕ್ಷ್ಮೀನಾರಾಯಣ, ಮಧು, ಮಂಜುನಾಥ್‌ ರೆಡ್ಡಿ, ಜೈನಾಬಿ, ರವಿಚಂದ್ರರೆಡ್ಡಿ, ಆರ್.ಎನ್.ರಾಜು, ಚನ್ನರಾಯಪ್ಪ ಪ್ರತಿಭಟನೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.