ADVERTISEMENT

ಕಾನೂನು ಬಲ್ಲವನಿಗೆ ಭಯವಿಲ್ಲ: ನ್ಯಾಯಾಧೀಶ ರಾಮಲಿಂಗೇಗೌಡ

ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ; ನ್ಯಾಯಾಧೀಶರಾದ ರಾಮಲಿಂಗೇಗೌಡ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 5:34 IST
Last Updated 11 ನವೆಂಬರ್ 2025, 5:34 IST
ಚಿಕ್ಕಬಳ್ಳಾಪುರದಲ್ಲಿ ನಡೆದ ‘ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ’ ಕಾರ್ಯಕ್ರಮವನ್ನು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಟಿ.ಪಿ ರಾಮಲಿಂಗೇಗೌಡ ಹಾಗೂ ಗಣ್ಯರು ಉದ್ಘಾಟಿಸಿದರು
ಚಿಕ್ಕಬಳ್ಳಾಪುರದಲ್ಲಿ ನಡೆದ ‘ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ’ ಕಾರ್ಯಕ್ರಮವನ್ನು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಟಿ.ಪಿ ರಾಮಲಿಂಗೇಗೌಡ ಹಾಗೂ ಗಣ್ಯರು ಉದ್ಘಾಟಿಸಿದರು   

ಚಿಕ್ಕಬಳ್ಳಾಪುರ: ಕಾನೂನುಗಳು, ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ತಿಳಿದು ಕೊಳ್ಳುವ ಜೊತೆಗೆ ಇತರರಿಗೂ ತಿಳಿಸಿಕೊಡಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಟಿ.ಪಿ ರಾಮಲಿಂಗೇಗೌಡ ಮನವಿ ಮಾಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್, ಶಿಕ್ಷಣ ಇಲಾಖೆ, ವಕೀಲರ ಸಂಘದ ಆಶ್ರಯದಲ್ಲಿ ಸೋಮವಾರ ನಗರದ ಜಿಲ್ಲಾ ಕನ್ನಡ ಭವನದಲ್ಲಿ ನಡೆದ ‘ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 

ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬಂತೆ ಕಾನೂನು ಬಲ್ಲವನಿಗೆ ಯಾರ ಭಯವಿರುವುದಿಲ್ಲ. ಅನ್ಯಾಯ, ಶೋಷಣೆಯನ್ನು ಕಾನೂನು ಬದ್ದವಾಗಿ ಪರಿಹರಿಸಿಕೊಳ್ಳಬೇಕು. ಬಲ ಪ್ರಯೋಗ ಮಾಡಬಾರದು. ನ್ಯಾಯ ಉಳ್ಳವರ ಸ್ವತ್ತಲ್ಲ ಎಂದು ಹೇಳಿದರು.

ADVERTISEMENT

ನ್ಯಾಯವಿಲ್ಲದ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಇರುವುದಿಲ್ಲ. ನ್ಯಾಯವನ್ನು ಸರ್ವರಿಗೂ ಒದಗಿಸುವ ನಿಟ್ಟಿನಲ್ಲಿ  ಕಾನೂನು ಸಹಾಯ, ಜನಜಾಗೃತಿ ಶಿಬಿರ, ಲೋಕ ಅದಾಲತ್‌ಗಳ ಮೂಲಕ ವಿವಾದ ಇತ್ಯರ್ಥ ಮಾಡುವುದು, ಮಹಿಳೆಯರು, ಮಕ್ಕಳು, ವಯೋವೃದ್ಧರು ಹಾಗೂ ದುರ್ಬಲ ವರ್ಗದವರಿಗೆ ಕಾನೂನು ಮಾರ್ಗದರ್ಶನ ನೀಡುವುದು ಕಾನೂನು ಸೇವಾ ಪ್ರಾಧಿಕಾರದ ಆಶಯ ಎಂದು ಹೇಳಿದರು. 

ಅನ್ಯಾಯಕ್ಕೆ ಒಳಗಾಗಿ ನ್ಯಾಯಾಲಯಗಳ ಕದ ತಟ್ಟಲು ಸಹ ಸಾಧ್ಯವಿರದ ಅಶಕ್ತರ ಮನೆಬಾಗಿಲಿಗೆ ನ್ಯಾಯವನ್ನು ತಲುಪಿಸುವ ಉದ್ದೇಶದಿಂದ ಹಲವು ಯುಕ್ತ ಕ್ರಮಗಳನ್ನು ಪ್ರಾಧಿಕಾರ  ಮಾಡುತ್ತಿದೆ. ಇದರ ಅನುಕೂಲಗಳನ್ನು ಸಾರ್ವಜನಿಕರು ಸದ್ವಿನಿಯೋಗ ಮಾಡಿಕೊಳ್ಳಬೇಕು. ನ್ಯಾಯ ವಿಳಂಬವಾದಷ್ಟು ನ್ಯಾಯ ನಿರಾಕರಣೆಗೆ ಸಮವಾಗುತ್ತದೆ. ಆದ್ದರಿಂದ ತ್ವರಿತ ನ್ಯಾಯವನ್ನು ನೊಂದವರಿಗೆ ನೀಡಬೇಕು ಎಂದು ಹೇಳಿದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ನ್ಯಾಯಾಂಗದ ಸಮನ್ವಯತೆಯನ್ನು ಸಾಧಿಸಿಕೊಂಡು ಇನ್ನಷ್ಟು ಉತ್ತಮ ಆಡಳಿತವನ್ನು ಜನರಿಗೆ ತಲುಪಿಸುವಂತಹ ವಾತಾವರಣವನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಮಾತನಾಡಿ, ಬಾಲ್ಯ ವಿವಾಹಗಳನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಗ್ರಾಮ ಮಟ್ಟದಿಂದ ರಚನೆಯಾಗಿರುವ ಕಾವಲು ಸಮಿತಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವ ಅನಿವಾರ್ಯತೆ ಹೆಚ್ಚಿದೆ ಎಂದರು.

ಏಕ ಪೋಷಕ ಕುಟುಂಬಗಳ ಬಗ್ಗೆ ಹೆಚ್ಚಿನ ಗಮನ ನೀಡಿ ಬಾಲ್ಯವಿವಾಹಗಳನ್ನು ತಡೆಗಟ್ಟಬೇಕಿದೆ. ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸೈಬರ್ ವಂಚಕರು ಅನೇಕ ರೀತಿಯಲ್ಲಿ ಸಾರ್ವಜನಿಕರ ಹಣ ದೋಚುತ್ತಿದ್ದಾರೆ. ಇಂತಹ ಸೈಬರ್ ವಂಚನೆಯನ್ನು ಎದುರಿಸಲು ಪೊಲೀಸ್ ಇಲಾಖೆಯು ಕಾಲೋಚಿತವಾಗಿ ನೀಡುವ ಮಾರ್ಗಸೂಚಿಗಳನ್ನು ಸಾರ್ವಜನಿಕರು ಪಾಲಿಸಬೇಕು ಎಂದು ಸಲಹೆ ನೀಡಿದರು.

ಯುವಕರು ಮಾದಕ ವಸ್ತುಗಳ  ವ್ಯಸನದಿಂದ ದೂರವಿರಬೇಕು. ಸಂಚಾರ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಚಾಲನೆ ಮಾಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗನ್ನಾಥ್ ರೈ, ವಿವಿಧ ಕಾನೂನುಗಳ ಬಗ್ಗೆ, ವಂಚನೆಗಳಿಗೆ ಒಳಗಾಗದಂತೆ ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. 

ಈ ವೇಳೆ ನ್ಯಾಯಾಧೀಶರಾದ ಟಿ.ಪಿ ರಾಮಲಿಂಗೇಗೌಡ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಸೆಲ್ಫಿ ಬೂತ್ ಗಳನ್ನು ಉದ್ಘಾಟಿಸಿದರು.

ನ್ಯಾಯಾಧೀಶರಾದ ಎಸ್.ವಿ.ಕಾಂತರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೌತಾಜ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ವಿ. ಅಭಿಲಾಷ್, ಉಪಾಧ್ಯಕ್ಷ ಮುನಿರಾಜು, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

‘10 ತಿಂಗಳಲ್ಲಿ 259 ಬಾಲ ಗರ್ಭಿಣಿಯರು’

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ  ಬಿ.ಶಿಲ್ಪಾ ಮಾತನಾಡಿ ಜಿಲ್ಲೆಯಲ್ಲಿನ ಎಲ್ಲ ತಾಲ್ಲೂಕು ನ್ಯಾಯಾಲಯಗಳಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ರಚಿಸಲಾಗಿದೆ. 2024 ನವೆಂಬರ್‌ನಿಂದ 2025 ಅಕ್ಟೋಬರ್‌ವರೆಗೆ ಜಿಲ್ಲಾದ್ಯಂತ 383ಕ್ಕೂ ಹೆಚ್ಚು ಕಾನೂನು ಅರಿವು ನೆರವು ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ವಿವರಿಸಿದರು. ಫೆಬ್ರವರಿಯಲ್ಲಿ 150 ಶಾಲೆಗಳಲ್ಲಿ ಪೊಕ್ಸೊ ಕಾಯ್ದೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಾಲ ಕಾರ್ಮಿಕ ವಿರೋಧಿ ಕಾಯ್ದೆ ಹಾಗೂ ಇತರ ಕಾನೂನು ಕಾಯ್ದೆಗಳ ಕುರಿತು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೂ ಕೂಡ ಜಿಲ್ಲೆಯಲ್ಲಿ ಕಳೆದ 10 ತಿಂಗಳಲ್ಲಿ 259 ಬಾಲ ಗರ್ಭಿಣಿ ಪ್ರಕರಣಗಳು ಪತ್ತೆಯಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು. ಇಂತಹ ಪ್ರಕರಣಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಅರಿವು ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುತ್ತೇವೆ. ಬೀದಿ ನಾಟಕ ರೀಲ್ಸ್ ಕಿರುಚಿತ್ರ ಚಿತ್ರಕಲೆ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.