ADVERTISEMENT

ಜೆಡಿಎಸ್, ಕಾಂಗ್ರೆಸ್‌ ಒಳಒಪ್ಪಂದ ಬಹಿರಂಗಪಡಿಸಲಿ

ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ: ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಶಾಸಕ ಡಾ.ಕೆ.ಸುಧಾಕರ್

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 14:23 IST
Last Updated 3 ಫೆಬ್ರುವರಿ 2020, 14:23 IST
ಶಾಸಕ ಡಾ.ಕೆ.ಸುಧಾಕರ್ ಬಿಜೆಪಿ ಪ್ರಣಾಳಿಕೆ ಬಿಡುಗಡೆಗೊಳಿಸಿದರು
ಶಾಸಕ ಡಾ.ಕೆ.ಸುಧಾಕರ್ ಬಿಜೆಪಿ ಪ್ರಣಾಳಿಕೆ ಬಿಡುಗಡೆಗೊಳಿಸಿದರು   

ಚಿಕ್ಕಬಳ್ಳಾಪುರ: ‘ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿವೆಯೋ ಇಲ್ಲವೇ ಒಳ ಸಂಚು ನಡೆಸುತ್ತಿವೆಯೋ ಬಹಿರಂಗಪಡಿಸಬೇಕು. ಈ ಬಗ್ಗೆ ಬಹಿರಂಗವಾಗಿ ಹೇಳದೆ ಮೋಸ ಮಾಡುತ್ತಿರುವ ಉಭಯ ಪಕ್ಷಗಳನ್ನು ಮತದಾರರು ಚಿಕ್ಕಬಳ್ಳಾಪುರದಿಂದ ಮುಕ್ತಗೊಳಿಸಬೇಕು’ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

ನಗರದಲ್ಲಿ ಸೋಮವಾರ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾತನಾಡಿದ ಅವರು, ‘ಅಧಿಕಾರಕ್ಕಾಗಿ ಅಪ ಪ್ರಚಾರದಲ್ಲಿ ತೊಡಗಿರುವ ಜೆಡಿಎಸ್ ಮತ್ತು ಕಾಂಗ್ರೆಸ್‌ ಈ ಚುನಾವಣೆಯಲ್ಲಿ ಧೂಳಿಪಟವಾಗಿ, ಮೊದಲ ಬಾರಿಗೆ ಚಿಕ್ಕಬಳ್ಳಾಪುರ ನಗರಸಭೆ ಕೇಸರಿಮಯವಾಗಲಿದೆ. ಮತದಾರರು ಬಣ್ಣದ ಮಾತುಗಳಿಗೆ ಮರುಳಾಗದೆ ಅಭಿವೃದ್ಧಿ ಮಾಡುವವರನ್ನು ಗೆಲ್ಲಿಸುವ ಮೂಲಕ ನಗರದ ಅಭಿವೃದ್ಧಿಗೆ ಕೈಜೋಡಿಸಬೇಕು’ ಎಂದು ತಿಳಿಸಿದರು.

‘ನಗರದಲ್ಲಿ ಬೇನಾಮಿ ಹೆಸರಲ್ಲಿ ನಿವೇಶನ ಮಾಡಿಕೊಂಡವರು, ವೈಯಕ್ತಿಕ ವಿಚಾರಗಳಿಗಾಗಿ ನಗರಸಭೆ ಗೌರವಕ್ಕೆ ಧಕ್ಕೆ ತಂದವರನ್ನು ಮತ್ತೆ ನಗರಸಭೆಗೆ ಆಯ್ಕೆ ಮಾಡಬೇಡಿ. ಕೇವಲ ಒಬ್ಬ ವ್ಯಕ್ತಿಯಿಂದ ನಗರಸಭೆ ಹಾಳಾಗಿದೆ. ಮತ್ತೆ ಆ ವ್ಯಕ್ತಿಯನ್ನು ನಗರಸಭೆಗೆ ಸೇರಿಸದಂತೆ ಮಾಡಬಹುದಾಗಿತ್ತು. ಆದರೆ ಕೊನೆಯ ಕ್ಷಣದವರೆಗೂ ನಮ್ಮೊಂದಿಗಿದ್ದು, ನಂತರ ಕೈ ಕೊಟ್ಟರು. ಅವರಿಗೆ ಈ ಚುನಾವಣೆಯಲ್ಲಿ ಮತದಾರರೇ ಪಾಠ ಕಲಿಸಲಿದ್ದಾರೆ’ ಎಂದರು.

ADVERTISEMENT

‘ಪ್ರಸ್ತುತ ಜಿಲ್ಲಾ ಕೇಂದ್ರದಲ್ಲಿ ವಿತರಿಸುತ್ತಿರುವ ಐದು ಸಾವಿರ ನಿವೇಶನಗಳಲ್ಲಿ ಎರಡು ಸಾವಿರ ನಿವೇಶನಗಳನ್ನು ಅಲ್ಪಸಂಖ್ಯಾರಿಗೆ ನೀಡಲಾಗುತ್ತಿದೆ. ಇದನ್ನು ನೀಡಿದ್ದು ಕಾಂಗ್ರೆಸ್ ಅಲ್ಲ ಬಿಜೆಪಿ ಎಂಬುದು ನಾಗರಿಕರು ಅರಿಯಬೇಕು. ಶೀಘ್ರದಲ್ಲಿಯೇ ಕಂದವಾರ ಕೆರೆಗೆ ಎಚ್‌.ಎನ್.ವ್ಯಾಲಿ ನೀರು ಹರಿಯಲಿದೆ. ನಗರದ ಬಿ.ಬಿ.ರಸ್ತೆಯನ್ನು ಮಾದರಿ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ₹15 ಕೋಟಿ ವೆಚ್ಚದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ₹13 ಕೋಟಿ ವೆಚ್ಚದಲ್ಲಿ ರಂಗಮಂದಿರ ನಿರ್ಮಾಣವಾಗುತ್ತಿದೆ’ ಎಂದು ಹೇಳಿದರು.

‘ನಗರದಲ್ಲಿ ಡೆಹರಾಡೂನ್ ಮಾದರಿಯಲ್ಲಿ ಬೀದಿ ಬದಿ ವ್ಯಾಪಾರಿಗೆ ಅನುಕೂಲ ಮಾಡಿಕೊಡಲಾಗುವುದು. ₹5 ಕೋಟಿ ವೆಚ್ಚದಲ್ಲಿ ನಗರ ಹೊರವಲಯದ ಅಪ್ಪಯ್ಯನಕುಂಟೆಯಲ್ಲಿ ಬೃಹತ್ ಉದ್ಯಾನ ನಿರ್ಮಾಣ ಮಾಡಲಾಗುವುದು. ನಗರದಾದ್ಯಂತ ಎಂಟು ಉದ್ಯಾನಗಳನ್ನು ನಿರ್ಮಿಸಲಾಗುತ್ತದೆ. ಮುಂದಿನ ಮೂರು ವರ್ಷಗಳಲ್ಲಿ ನಗರ ವ್ಯಾಪ್ತಿಯ ಎಲ್ಲ ವಸತಿ ರಹಿತರಿಗೂ ನಿವೇಶನ ನೀಡುವ ₹5 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲಾಗುವುದು’ ಎಂದು ತಿಳಿಸಿದರು.

‘ಪ್ರಸ್ತುತ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಜತೆಗೆ ಶಾಸಕ ಮತ್ತು ಸಂಸದರೂ ಬಿಜೆಪಿಯವರೇ ಆಗಿದ್ದಾರೆ. ಆದ್ದರಿಂದ ನಗರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹೆಚ್ಚು ಅನುದಾನ ತಂದು ನಗರವನ್ನು ದೇಶದಲ್ಲಿಯೇ ಮಾದರಿಯಾಗಿ ರೂಪಿಸಲು ಮತ್ತು ಬೆಂಗಳೂರಿಗೆ ಪರ್ಯಾಯವಾಗಿ ಉಪ ನಗರವಾಗಿ ಅಭಿವೃದ್ಧಿಪಡಿಸಲು ಅನುಕೂಲವಾಗುತ್ತದೆ. ಮತದಾರರು ಈ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಮಾಜಿ ಶಾಸಕರಾದ ಶಿವಾನಂದ್, ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಮುಖಂಡರಾದ ಕೆ.ವಿ.ನಾಗರಾಜ್, ಮರಳಕುಂಟೆ ಕೃಷ್ಣಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.