ADVERTISEMENT

ಸುಶಿಕ್ಷಿತ ಅಭ್ಯರ್ಥಿ ಆಯ್ಕೆಯಾಗಲಿ

ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2020, 5:37 IST
Last Updated 15 ಡಿಸೆಂಬರ್ 2020, 5:37 IST
ಸಭೆಯಲ್ಲಿ ಸಚಿವ ಡಾ.ಕೆ. ಸುಧಾಕರ್ ಅವರು ಮಾತನಾಡಿದರು
ಸಭೆಯಲ್ಲಿ ಸಚಿವ ಡಾ.ಕೆ. ಸುಧಾಕರ್ ಅವರು ಮಾತನಾಡಿದರು   

ಚಿಕ್ಕಬಳ್ಳಾಪುರ: ‘ಗ್ರಾಮ ಪಂಚಾಯಿತಿ ಚುನಾವಣೆ ಪ್ರಜಾಪ್ರಭುತ್ವದ ಅಡಿಪಾಯ. ಅದು ಗಟ್ಟಿಯಾಗಿದ್ದಾಗ ಮಾತ್ರವೇ ನಾವು ಬಯಸುವ ಅಭಿವೃದ್ಧಿ ಕಾಣಲು ಸಾಧ್ಯ. ಆದ್ದರಿಂದ, ಪಂಚಾಯಿತಿ ಚುನಾವಣೆಯಲ್ಲಿ ಉತ್ತಮ ಸಂಸ್ಕಾರ, ಚಾರಿತ್ರ್ಯ ಹೊಂದಿರುವ ಸುಶಿಕ್ಷಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಗೆಲ್ಲಿಸಲು ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

ಮಂಚೇನಹಳ್ಳಿ ಹೋಬಳಿಯ ಪುರ ಗ್ರಾಮದಲ್ಲಿ ಸೋಮವಾರ ನಡೆದ ಪಕ್ಷದ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ಕಾರ್ಯಕರ್ತರು ಸಣ್ಣಪುಟ್ಟ ಭಿನ್ನಾಭಿಪ್ರಾಯ ಮರೆತು, ಎಲ್ಲರೂ ಕುಟುಂಬದ ಸದಸ್ಯರಂತೆ ಈ ಚುನಾವಣೆ ಎದುರಿಸಿ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಬೇಕು’ ಎಂದು ಹೇಳಿದರು.

‘ಜನಾದೇಶ, ಜನಪ್ರಿಯತೆ ಇದ್ದವರನ್ನು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಬೇಕು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಯ್ಕೆ ಸಮಿತಿಗಳನ್ನು ಮಾಡಿಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಆಕಾಂಕ್ಷಿಗಳಿಗೆ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟು ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಪಕ್ಷಕ್ಕಾಗಿ ದುಡಿಯುವವರಿಗೆ ಮುಂಬರುವ ದಿನಗಳಲ್ಲಿ ಸೂಕ್ತ ಸ್ಥಾನಮಾನ ಕೊಡಿಸುತ್ತೇನೆ’ ಎಂದು ಭರವಸೆ ನೀಡಿದರು.

ADVERTISEMENT

‘ರಾಜಕಾರಣದಲ್ಲಿ ಅತಿಯಾದ ಆತ್ಮವಿಶ್ವಾಸ ಕೆಟ್ಟದ್ದು. ಆದ್ದರಿಂದ, ಪರಿಶ್ರಮದಿಂದ ಪ್ರತಿಯೊಂದು ಬೂತ್‌ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು, ಮುಖಂಡರು ಒಟ್ಟಾಗಿ ಶ್ರಮಿಸಬೇಕು. ಬೂತ್‌ ಮಟ್ಟದಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿದವರನ್ನು ಗುರುತಿಸಿ ಸ್ಥಾನಮಾನ ನೀಡಲಿದೆ’ ಎಂದು ತಿಳಿಸಿದರು.

‘ಹಳ್ಳಿಯಿಂದ ದಿಲ್ಲಿಯವರೆಗೆ ನಮ್ಮ ಸರ್ಕಾರಗಳಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಉತ್ತಮ ನಾಯಕತ್ವ ನಮಗೆಲ್ಲ ಹೆಮ್ಮೆ. ಕಾರ್ಯಕರ್ತರು ನಿಸ್ವಾರ್ಥದಿಂದ, ಪಕ್ಷದ ಹಿತದೃಷ್ಟಿಯಿಂದ ದುಡಿದು ಪಕ್ಷ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಬೇಕು. ಅದರಿಂದ ಪಕ್ಷ ತನ್ನಿಂದ ತಾನೇ ಸಂಘಟನೆಯಾಗುತ್ತದೆ’ ಎಂದರು.

‘ಇಷ್ಟು ವರ್ಷಗಳ ಕಾಲ ಮಂಚೇನಹಳ್ಳಿ ತಾಲ್ಲೂಕು ಕೇಂದ್ರವನ್ನಾಗಿ ಮಾಡಲು ಯಾರೊಬ್ಬರೂ ಪ್ರಯತ್ನಿಸಲಿಲ್ಲ. ಈ ಭಾಗಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಕೆಲಸಗಳು ನಡೆದಿರಲಿಲ್ಲ. ನನ್ನ ಎರಡನೇ ಅವಧಿಯಲ್ಲಿ ಆ ಕೆಲಸ ಮಾಡಲು ಸಂಕಲ್ಪ ಮಾಡಿರುವೆ. ದಂಡಿಗಾನಹಳ್ಳಿ ಕೆರೆ ನೀರಲು ಹಳ್ಳಿಗಳಲ್ಲಿ ಕುಡಿಯಲು ಹರಿಸುವ ಉದ್ದೇಶದಿಂದ ₹77 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಮುಂದಿನ ಒಂದು ವರ್ಷದಲ್ಲಿ ಪ್ರಾಶ್ಯಸ್ತದಿಂದ ಪ್ರತಿ ಗ್ರಾಮದಲ್ಲಿ ಕೆಲಸ ಮಾಡಿ ಕೊಡುವೆ’ ಎಂದು
ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಎಂ. ನಾರಾಯಣಸ್ವಾಮಿ, ಕೋಚಿಮುಲ್ ನಾಮ ನಿರ್ದೇಶಕ ಸುಬ್ಬಾರೆಡ್ಡಿ ಮುಖಂಡರಾದ ಹನುಮೇಗೌಡ, ಹನುಮಪ್ಪರೆಡ್ಡಿ, ಜಿ.ವಿ.ರಾಜಶೇಖರ, ಬಾಲಕೃಷ್ಣ, ವೆಂಕಟೇಶ, ಸುದರ್ಶನ ರೆಡ್ಡಿ , ರಿಯಾಜ್ ಪಾಷಾ ಮಂಚೇನಹಳ್ಳಿ, ಗಂಗಾಧರಪ್ಪ ಅಪ್ಪಿಗೌಡ, ಜಗನ್ನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.