ADVERTISEMENT

ಗಡಿ ಭಾಗದಲ್ಲಿ ಕನ್ನಡ ಉಳಿಸಲು ಶ್ರಮಿಸೋಣ

ಮಂಚೇನಹಳ್ಳಿ ತಾಲ್ಲೂಕು ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ. ಸುಧಾಕರ್‌ ಕರೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 3:04 IST
Last Updated 27 ಫೆಬ್ರುವರಿ 2021, 3:04 IST
ಸಮ್ಮೇಳನ ಅಧ್ಯಕ್ಷರನ್ನು ಮೆರವಣಿಗೆಯಲ್ಲಿ ವೇದಿಕೆಗೆ ಕರೆ ತರಲಾಯಿತು
ಸಮ್ಮೇಳನ ಅಧ್ಯಕ್ಷರನ್ನು ಮೆರವಣಿಗೆಯಲ್ಲಿ ವೇದಿಕೆಗೆ ಕರೆ ತರಲಾಯಿತು   

ತಲ್ಲಂ ನಂಜುಂಡಯ್ಯ ಶೆಟ್ಟಿ ವೇದಿಕೆ (ಗೌರಿಬಿದನೂರು): ‘ಗಡಿ ಭಾಗದಲ್ಲಿ ಮಾತೃಭಾಷೆ ಜತೆಗೆ ಕನ್ನಡವನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮೆಲ್ಲರದ್ದಾಗಿದ್ದು, ಅದಕ್ಕಾಗಿ ನಮ್ಮೆಲ್ಲರ ಪ್ರಾಮಾಣಿಕ ಪ್ರಯತ್ನ ಅತ್ಯವಶ್ಯಕ’ ಎಂದು‌
ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್ ತಿಳಿಸಿದರು.

ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶುಕ್ರವಾರ ಆಯೋಜಿಸಿದ್ದ ಮಂಚೇನಹಳ್ಳಿ ತಾಲ್ಲೂಕು ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಗಡಿ ಭಾಗದಲ್ಲಿರುವ ನಾವು ಅನ್ಯಭಾಷೆಗಳ ನಡುವೆ ಮಾತೃಭಾಷೆಯನ್ನು ಮರೆಯದೆ ಅದರ ಪಾವಿತ್ರ್ಯ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ‌ಮೇಲಿದೆ. ಕನ್ನಡ ಏಕೀಕರಣದ ಸಂದರ್ಭದಲ್ಲಿ ಸಾಹಿತಿಗಳು, ಕವಿಗಳು ಹಾಗೂ ಮುಖಂಡರು ನಾಡಿಗೆ ನೀಡಿದ ಕೊಡುಗೆಯನ್ನು ಸ್ಮರಿಸಬಹುದಾಗಿದೆ. ರಾಜ್ಯದ ಜನರು ಶಾಂತಿಪ್ರಿಯರಾಗಿದ್ದು, ಅನ್ಯ ರಾಜ್ಯ ಮತ್ತು ದೇಶದಿಂದ ಬರುವ ಜನರನ್ನು ಪ್ರೀತಿ ಮತ್ತು ವಿಶ್ವಾಸದಿಂದ ನೋಡಿಕೊಳ್ಳುತ್ತಾರೆ. ಇದಕ್ಕಾಗಿಯೇ ಬೆಂಗಳೂರಿನಂತಹ ನಗರ ಪ್ರದೇಶದಲ್ಲೂ ಕನ್ನಡಿಗರ ಸಂಖ್ಯೆ ವಿರಳವಾಗಿದೆ‌‌. ನಾಡು, ನುಡಿ, ನೆಲ, ಜಲ ಎಂಬ ವಿಚಾರ ಬಂದಾಗ ನಾವೆಲ್ಲರೂ ಪಕ್ಷ, ಜಾತಿಭೇದಗಳನ್ನು ಬಿಟ್ಟು ಹೋರಾಟಕ್ಕೆ ಮುಂದಾಗಬೇಕಾಗಿದೆ’ ಎಂದರು.

ADVERTISEMENT

‘ಈ ನಾಡಿನಲ್ಲಿ ಪ್ರತ್ಯೇಕ ನಾಗರಿಕತೆ, ಸಂಸ್ಕೃತಿ, ಆಚಾರ ವಿಚಾರಗಳನ್ನು ಹೊಂದಿದ್ದೇವೆ. ಶಿಕ್ಷಕರು ಮತ್ತು ಸಾಹಿತಿಗಳು ಮಕ್ಕಳಲ್ಲಿ ಅಧ್ಯಯನ ಶೀಲತೆ, ಓದುವ ಹವ್ಯಾಸ ಹಾಗೂ ಸಾಹಿತ್ಯದ ಬಗ್ಗೆ ಪರಿಚಯಿಸುವ ಕಾರ್ಯವನ್ನು ಮಾಡಬೇಕಾಗಿದೆ. ನಮ್ಮ ಜಿಲ್ಲೆಯು ಆಂಧ್ರದ ಗಡಿಭಾಗಕ್ಕೆ ಹೊಂದಿಕೊಂಡಿದ್ದು, ಈ ಭಾಗದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಮಾಡುವ ಕನಸು ನಮ್ಮದಾಗಿದೆ’ ಎಂದು ಹೇಳಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಎನ್‌.ಶ್ರೀನಿವಾಸ್ ಮಾತನಾಡಿ, ‘ಬಯಲು ಸೀಮೆಯ ಅರೆಮಲೆನಾಡಿನಲ್ಲಿ ಪ್ರಪ್ರಥಮವಾಗಿ ನಡೆಯುತ್ತಿರುವ ಕನ್ನಡ ‌ಸಮ್ಮೇಳನವು ಐತಿಹಾಸಿಕವಾಗಿದೆ. ಕನ್ನಡ ಮನಸ್ಸುಗಳಿಗೆ ಇದೊಂದು ಹಬ್ಬವಾಗಿದೆ. ಕನ್ನಡದ ತೇರು ಎಳೆಯಲು ನಾವೆಲ್ಲರೂ ಒಕ್ಕೊರಲಿನಿಂದ ಶ್ರಮಿಸಬೇಕಾಗಿದೆ’ ಎಂದರು.

ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿ, ‘ಕನ್ನಡ ನಾಡಿನ ನೆಲದಲ್ಲಿ ಜನ್ಮ ಪಡೆದು ವಿಶ್ವವಿಖ್ಯಾತಿ ಪಡೆದ ಸಾಕಷ್ಟು ‌ಮಹನೀಯರನ್ನು ಸ್ಮರಿಸಬಹುದಾಗಿದೆ. ಕನ್ನಡ ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದ್ದು, ಅದನ್ನು ಮಾತೃ ಭಾಷೆಯನ್ನಾಗಿ ಪಡೆದಿರುವ ನಾವುಗಳು ನಿಜಕ್ಕೂ ಧನ್ಯರಾಗಿದ್ದೇವೆ. ಕನ್ನಡ ಮಾತನಾಡಲು ನಮಗೆ ಸಾಕಷ್ಟು ಅವಕಾಶಗಳಿವೆ, ಅದರ ಬಳಕೆ ಅದ್ಭುತವಾಗಿದೆ. ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಸಮಾಜದಲ್ಲಿನ ಶಿಕ್ಷಕರು, ರಾಜಕಾರಣಿಗಳು ಹಾಗೂ ಮಾಧ್ಯಮದವರ ಮೇಲಿದೆ’ ಎಂದು ಹೇಳಿದರು.

ಕಸಾಪ ಅಧ್ಯಕ್ಷ ಜಿ.ಆರ್.ಜನಾರ್ಧನಮೂರ್ತಿ ಮಾತನಾಡಿ, ‘ತಾಲ್ಲೂಕಾಗಿರುವ ಮಂಚೇನಹಳ್ಳಿಯಲ್ಲಿ ನಡೆಯುತ್ತಿರುವ ಸಮ್ಮೇಳನವು ಅವಿಸ್ಮರಣೀಯವಾಗಿದೆ. ಈ ಐತಿಹಾಸಿಕ ಹಬ್ಬಕ್ಕೆ ಕಾರಣರಾಗಿರುವ
ಉಸ್ತುವಾರಿ ಸಚಿವರು ಮತ್ತು ಅವಿರತವಾಗಿ
ಶ್ರಮಿಸಿರುವ ಎಲ್ಲ ಕನ್ನಡ ಮನಸ್ಸುಗಳು ಹಾಗೂ ಹೋರಾಟಗಾರರಿಗೆ ನಮನಗಳು. ಈ ಭಾಗದಲ್ಲಿ
ಕನ್ನಡ ಕಾರ್ಯಕ್ರಮಗಳು ನಿರಂತರವಾಗಿ
ನಡೆಯಲಿ ಎಂಬುದೇ ನಮ್ಮೆಲ್ಲರ ಆಶಯವಾಗಿದೆ’ ಎಂದು ತಿಳಿಸಿದರು.

ಸಮ್ಮೇಳನದಲ್ಲಿ ಮಾವು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ.ವಿ.ನಾಗರಾಜ್, ಜಿ.ಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಉಪಾಧ್ಯಕ್ಷೆ ಸರಸ್ವತಮ್ಮ ಅಶ್ವತ್ಥನಾರಾಯಣಗೌಡ, ಜಿ.ಪಂ ಸದಸ್ಯ ಪಿ‌.ಎನ್‌.ಪ್ರಕಾಶ್, ಪ್ರಾಧ್ಯಾಪಕ ಕೆ.ಪಿ‌.ನಾರಾಯಣಪ್ಪ, ಎಂ‌.ಜಿ.ಶ್ರೀನಿವಾಸ್, ತಹಸೀಲ್ದಾರ್ ಎಚ್.ಶ್ರೀನಿವಾಸ್, ತಾ.ಪಂ ಇಒ ಎನ್.ಮುನಿರಾಜು, ಬಿಇಒ ಕೆ.ವಿ‌.ಶ್ರೀನಿವಾಸಮೂರ್ತಿ, ಬಿಆರ್ ಸಿ ಎಚ್.ಜಗದೀಶ್, ಪಿಡಿಒ ಬಸವರಾಜ್ ಬಳೂಟಗಿ, ಸಾಹಿತಿಗಳಾದ ಸಾ.ನಾ‌.ಲಕ್ಷ್ಮಣಗೌಡ, ಕೆ.ಪ್ರಭಾನಾರಾಯಣಗೌಡ, ಎಚ್.ಎನ್‌.ಕಿರಣ್ ಕುಮಾರ್, ಮುಖಂಡರಾದ ಎಂ.ಆರ್.ಲಕ್ಷ್ಮಿನಾರಾಯಣಪ್ಪ, ಜೆ.ಸುಬ್ಬರಾವ್, ಜೆ.ವಿ.ಹನುಮೇಗೌಡ, ಗಂಗಾಧರಯ್ಯ, ರಿಯಾಜ್, ಪಿ.ಎನ್.ಜಗನ್ನಾಥ್, ಜಿ.ಆರ್.ರಾಜಶೇಖರ್, ಹಳೇಹಳ್ಳಿ ಶಿವಕುಮಾರ್, ನಾರಾಯಣಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.