ADVERTISEMENT

ಅದಾಲತ್‍: ಸಮಯ, ಹಣ ಉಳಿತಾಯ

ರಾಷ್ಟ್ರೀಯ ಮೆಗಾ ಲೋಕ ಅದಾಲತ್‍ ಕಾರ್ಯಕ್ರಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 3:27 IST
Last Updated 15 ಆಗಸ್ಟ್ 2021, 3:27 IST
ಹೈಕೋರ್ಟ್ ನ್ಯಾಯಮೂರ್ತಿ ಎಸ್.ಪಿ.ಸಂದೇಶ್ ಲೋಕ ಅದಾಲತ್‌ನಲ್ಲಿ ಮಾತನಾಡಿದರು
ಹೈಕೋರ್ಟ್ ನ್ಯಾಯಮೂರ್ತಿ ಎಸ್.ಪಿ.ಸಂದೇಶ್ ಲೋಕ ಅದಾಲತ್‌ನಲ್ಲಿ ಮಾತನಾಡಿದರು   

ಚಿಕ್ಕಬಳ್ಳಾಪುರ: ಕಾನೂನು ಸೇವೆಗಳ ಪ್ರಾಧಿಕಾರದಿಂದ ಆಯೋಜಿಸುವ ಮೆಗಾ ಲೋಕ ಅದಾಲತ್‍ಗಳ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿ ಕೊಳ್ಳುವುದರಿಂದ ಕಕ್ಷಿದಾರರ ಸಮಯ ಮತ್ತು ಹಣ ಉಳಿತಾಯ ಆಗುತ್ತದೆ. ಇಬ್ಬರು ಕಕ್ಷಿದಾರರಿಗೆ ನೆಮ್ಮದಿಯೂ ದೊರೆಯುತ್ತದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಸ್.ಪಿ.ಸಂದೇಶ್ ಸಲಹೆ ಮಾಡಿದರು.

ಇಲ್ಲಿನ ಜಿಲ್ಲಾ ನ್ಯಾಯಾಲಯಲ್ಲಿ ಶನಿವಾರ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ವಕೀಲರ ಸಂಘ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮೆಗಾ ಲೋಕ ಅದಾಲತ್‍ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಪ್ಪತ್ತು ವರ್ಷಗಳಿಂದ ಇತ್ಯರ್ಥವಾಗದ ಬ್ಯಾಂಕ್ ಸಾಲದ ಪ್ರಕರಣವನ್ನು ಸಂಧಾನ ಮೂಲಕ ಇತ್ಯರ್ಥಪಡಿಸಲಾಗಿದೆ. ಕಾನೂನು ಸೇವೆಗಳ ಪ್ರಾಧಿಕಾರದಿಂದ ನಿರಂತರವಾಗಿ ಅದಾಲತ್ ಹಮ್ಮಿಕೊಂಡು ಬರಲಾಗುತ್ತಿದೆ. ಈ ರೀತಿಯ ಅದಾಲತ್‍ಗಳಲ್ಲಿ ಕಕ್ಷಿದಾರರು ಪ್ರಕಣಗಳನ್ನು ಬಗೆಹರಿಸಿಕೊಳ್ಳುವುದರಿಂದ ಎರಡೂ ಕಡೆಯವರಿಗೂ ನ್ಯಾಯ ದೊರೆಯುತ್ತದೆ. ಪ್ರಕರಣ ಶೀಘ್ರ ಸುಖಾಂತ್ಯ ಕಾಣುತ್ತದೆ ಎಂದರು.

ADVERTISEMENT

ನ್ಯಾಯಾಲಯದ ಸಮಯ ಅತ್ಯಮೂಲ್ಯವಾದುದು. ಅದಾಲತ್‍ನಲ್ಲಿ ಪ್ರಕರಣಗಳು ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯದ ಸಮಯವೂ ಉಳಿಯುತ್ತದೆ. ನ್ಯಾಯಾಧೀಶರು ಇತರೆ ಪ್ರಕರಣಗಳನ್ನು ಕೈಗೆತ್ತಿಕೊಂಡು ಶೀಘ್ರ ಬಗೆಹರಿಸಲು ಅವಕಾಶವಾಗುತ್ತದೆ. ಈ ಹಿನ್ನೆಲೆಯಲ್ಲಿ ಎರಡೂ ಕಡೆಯ ಕಕ್ಷಿದಾರರು ತಮ್ಮ ವಕೀಲರೊಂದಿಗೆ ಕುಳಿತು ಪರಸ್ಪರ ಮಾತನಾಡಿ ಬೇಗ ಬಗೆಹರಿಸಿಕೊಳ್ಳಲು ಮುಂದಾಗಬೇಕು. ಇದಕ್ಕೆ ಕಾನೂನು ಸೇವೆಗಳ ಪ್ರಾಧಿಕಾರ ಅಗತ್ಯ ಸಹಕಾರ ನೀಡುತ್ತದೆ ಎಂದು ತಿಳಿಸಿದರು.

ಅದಾಲತ್‍ ನಡುವೆ ಕಾನೂನು ತರಬೇತಿ ಹಾಗೂ ಕಲಾಪಗಳ ವೀಕ್ಷಣೆಗೆ ನ್ಯಾಯಾಲಯಕ್ಕೆ ಬಂದಿದ್ದ ಸ್ಥಳೀಯ ಕಾನೂನು ಕಾಲೇಜಿನ ವಿದ್ಯಾರ್ಥಿಗಳ ಜೊತೆಗೆ ನ್ಯಾಯಾಧೀಶರು ಸಂವಾದ ನಡೆಸಿದರು.

ವಕೀಲಿ ವೃತ್ತಿಯನ್ನು ಜವಾಬ್ದಾರಿಯನ್ನಾಗಿ ತೆಗೆದು ಕೊಳ್ಳಬೇಕು. ಆಸಕ್ತಿ ಮತ್ತು ಬದ್ಧತೆಯಿಂದ ಆಯ್ಕೆ ಮಾಡಿಕೊಂಡು ವೃತ್ತಿ ಮಾಡಬೇಕು. ಅವಕಾಶವನ್ನಾಗಿ ಬಳಸಿಕೊಂಡಲ್ಲ. ಯುವ ವಕೀಲರುವೃತ್ತಿಗೆ ಪೂರಕವಾಗಿ ಕಲಿಯುವ ಅಗತ್ಯವಿದೆ. ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದವರು, ನೊಂದವರ ದನಿಯಾಗಿ ಕೆಲಸ ಮಾಡಿದರೆ ಮಾತ್ರ ವಕೀಲಿ ವೃತ್ತಿ ನಿಜವಾದ ಸಾರ್ಥಕತೆ ಪಡೆಯಲಿದೆ ಎಂದು ಹೇಳಿದರು.

ಸ್ವಾಮಿ ವಿವೇಕಾನಂದರು ಸೇರಿದಂತೆ ಮಹನೀಯರ ತತ್ವಾದರ್ಶ
ಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು. ಮುಂದಿನ ಪೀಳಿಗೆಗೂ ಕೊಡುಗೆಗಳನ್ನು ನೀಡಲು ಮುಂದಾಗಬೇಕು ಎಂದರು.

ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಭೈರಪ್ಪ ಶಿವಲಿಂಗ ನಾಯಿಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ, ನ್ಯಾಯಾಧೀಶ ಲಕ್ಷ್ಮಿಕಾಂತ್ ಮಸ್ಕಿನ್, ನ್ಯಾಯಾಧೀಶರಾದ ನಟರಾಜ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.