ಶಿಡ್ಲಘಟ್ಟ: ‘ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಪಕ್ಷ ಅವಕಾಶ ಕೊಟ್ಟರೆ ಸ್ಪರ್ಧಿಸುತ್ತೇನೆ. ನಾನೂ ಕೂಡ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಆಕಾಂಕ್ಷಿ’ ಎಂದು ಶಿಡ್ಲಘಟ್ಟದ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಹೇಳಿದರು.
ನಗರದ ಬಿಜೆಪಿ ಸೇವಾಸೌಧ ಕಚೇರಿ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಸಮಾವೇಶ ಮತ್ತು ಸಾಮಾಜಿಕ ಸಮ್ಮೇಳನಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
‘ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ನನ್ನ ಹೆಸರೂ ಹರಿದಾಡುತ್ತಿದೆ. ನಾನೂ ಆಕಾಂಕ್ಷಿ ಆಗಿದ್ದೇನೆ. ಶಿಡ್ಲಘಟ್ಟದಲ್ಲಿ ಪಕ್ಷವನ್ನು ಸಂಘಟಿಸಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗಣನೀಯ ಸಂಖ್ಯೆಯಲ್ಲಿ ಮತ ಪಡೆದಿದ್ದೇನೆ’ ಎಂದರು.
‘ಪಕ್ಷದ ಮುಖಂಡರ ಸೂಚನೆಗೆ ಕಾಯುತ್ತಿದ್ದೇನೆ. ಬೇರೆ ಯಾರಿಗೆ ಕೊಟ್ಟರೂ ಅವರ ಪರ ಕೆಲಸ ಮಾಡುತ್ತೇನೆ. ಒಟ್ಟಾರೆ ಮೋದಿ ಅವರಿಗೆ ಬಲ ನೀಡಿ ಮತ್ತೊಮ್ಮೆ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕೆಂಬುದು ನಮ್ಮೆಲ್ಲರ ಗುರಿ’ ಎಂದರು.
‘ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಮೈತ್ರಿ ಏರ್ಪಡುತ್ತಾ ಇಲ್ಲವೇ ಬಿಜೆಪಿ ಅಭ್ಯರ್ಥಿ ಮಾತ್ರವೇ ಸ್ಪರ್ಧಿಸುತ್ತಾರಾ ಎನ್ನುವುದು ಇನ್ನೆರಡು ದಿನದಲ್ಲಿ ತೀರ್ಮಾನವಾಗುತ್ತದೆ. ಪಕ್ಷದ ತೀರ್ಮಾನಕ್ಕೆ ನಾವು ಬದ್ಧ’ ಎಂದರು.
ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ, ಮಾಜಿ ಶಾಸಕ ಎಂ.ರಾಜಣ್ಣ, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಆಂಜನೇಯಗೌಡ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.