ADVERTISEMENT

ಚರ್ಮಗಂಟು ರೋಗದಿಂದ 478 ರಾಸುಗಳು ಸಾವು: ಇನ್ನೂ ಬಾಕಿ ಇದೆ 81 ರಾಸುಗಳಿಗೆ ಪರಿಹಾರ

ಡಿ.ಎಂ.ಕುರ್ಕೆ ಪ್ರಶಾಂತ
Published 9 ಜೂನ್ 2023, 19:30 IST
Last Updated 9 ಜೂನ್ 2023, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಚರ್ಮಗಂಟು ರೋಗ ತಹಬದಿಗೆ ಬಂದಿದೆ. ರಾಸುಗಳ ಸಾವಿನ ಪ್ರಮಾಣವೂ ನಿಂತಿದೆ. ಆದರೆ ರೋಗದಿಂದ ಮೃತಪಟ್ಟ ರಾಸುಗಳಿಗೆ ಇಂದಿಗೂ ರಾಜ್ಯ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಪರಿಹಾರ ಧನ ಬಿಡುಗಡೆ ಮಾಡಿಲ್ಲ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೇ ಇನ್ನೂ 81 ರಾಸುಗಳಿಗೆ ಪರಿಹಾರ ಧನ ಬಿಡುಗಡೆ ಆಗಬೇಕಾಗಿದೆ.  ರೋಗದಿಂದ ಮೃತಪಟ್ಟ ರಾಸುಗಳಿಗೆ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ವಿಳಂಬ ಅನುಸರಿಸುತ್ತಿದೆ ಎನ್ನುವ ಆರೋಪ ರೈತರಿಂದ ಕೇಳಿ ಬರುತ್ತಿದೆ.

ಜಿಲ್ಲೆಯಲ್ಲಿ ಚರ್ಮಗಂಟು ರೋಗದಿಂದ 478 ರಾಸುಗಳು ಮೃತಪಟ್ಟಿವೆ. ಮೃತರ ರಾಸುಗಳ ಪೈಕಿ ಸರ್ಕಾರ 377 ರಾಸುಗಳಿಗೆ ಮಾತ್ರ ಪರಿಹಾರ ವಿತರಿಸಿದೆ!

ADVERTISEMENT

ಹೀಗೆ ರೋಗದಿಂದ ಮೃತಪಟ್ಟ ರಾಸುಗಳಲ್ಲಿ 15 ರಾಸುಗಳು ವಿಮೆಯನ್ನು ಹೊಂದಿವೆ. ಪರಿಹಾರಕ್ಕಿಂತ ವಿಮೆ ಹಣವೇ ಹೆಚ್ಚು ದೊರೆಯುವ ಕಾರಣ ಆ ಮಾಲೀಕರು ಪರಿಹಾರ ಧನ ಪಡೆಯಲು ಮುಂದಾಗುವುದಿಲ್ಲ. ಐದು ರಾಸುಗಳ ಮಾಲೀಕರು ಪರಿಹಾರ ಧನವನ್ನು ಪಡೆಯಲು ನಿರಾಕರಿಸಿದ್ದಾರೆ.

ಸರ್ಕಾರ ಚರ್ಮಗಂಟು ರೋಗದಿಂದ ಮೃತಪಡುವ ರಾಸುಗಳಿಗೆ ಪರಿಹಾರ ಧನ ನೀಡುತ್ತಿದೆ. ಮೃತ ಕರುವಿಗೆ ₹ 5 ಸಾವಿರ, ಎಮ್ಮೆ, ಹಸುವಿಗೆ ₹ 20 ಸಾವಿರ ಮತ್ತು ಎತ್ತು ಮೃತಪಟ್ಟರೆ ₹ 30 ಸಾವಿರ ಪರಿಹಾರ ಧನ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಸದ್ಯ ಮೃತಪಟ್ಟ 94 ಕರುಗಳು ₹ 4,70,000, ಮೃತ 198 ಹಸುಗಳಿಗೆ ₹ 39,60,000, ಮೃತ 85 ಎತ್ತುಗಳಿಗೆ 25,50,000 ಪರಿಹಾರದ ಹಣ ಬಿಡುಗಡೆ ಆಗಿದೆ.

ಬಿಡುಗಡೆಯಾದ ಹಣ: ಬಾಗೇಪಲ್ಲಿ ತಾಲ್ಲೂಕಿನಲ್ಲಿ ಮೃತ 13 ಕರುಗಳು, 24 ಹಸುಗಳು, 19 ಎತ್ತುಗಳು ಸೇರಿ ಒಟ್ಟು 56 ಜಾನುವಾರುಗಳಿಗೆ  ₹ 11,15,000 ಪರಿಹಾರ ಧನ ವಿತರಿಸಲಾಗಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 18 ಕರುಗಳು, 34 ಹಸುಗಳು, 15 ಎತ್ತುಗಳು ಸೇರಿ ಒಟ್ಟು 67 ಜಾನುವಾರುಗಳಿಗೆ ₹ 12,20,000 ಪರಿಹಾರ ಧನ , ‌ಚಿಂತಾಮಣಿ ತಾಲ್ಲೂಕಿನಲ್ಲಿ 18 ಕರುಗಳು, 28 ಹಸುಗಳು, 5 ಎತ್ತುಗಳು ಸೇರಿ ಒಟ್ಟು 51 ಜಾನುವಾರುಗಳಿಗೆ  ₹ 8,00,000 ಪರಿಹಾರ ಧನ ವಿತರಿಸಲಾಗಿದೆ.

ಗೌರಿಬಿದನೂರು ತಾಲ್ಲೂಕಿನಲ್ಲಿ 10 ಕರುಗಳು, 52 ಹಸುಗಳು, 27 ಎತ್ತುಗಳು ಸೇರಿ ಒಟ್ಟು 89 ಜಾನುವಾರುಗಳಿಗೆ ₹ 19,00,000, ಗುಡಿಬಂಡೆ ತಾಲ್ಲೂಕಿನಲ್ಲಿ 12 ಕರುಗಳು, 11 ಹಸುಗಳು, 7 ಎತ್ತುಗಳು ಸೇರಿ ಒಟ್ಟು 30 ಜಾನುವಾರುಗಳಿಗೆ  ₹ 4,90,000, ಶಿಡ್ಲಘಟ್ಟ ತಾಲ್ಲೂಕಿನಲ್ಲಿ 23 ಕರುಗಳು, 49 ಹಸುಗಳು, 12 ಎತ್ತುಗಳು ಸೇರಿ ಒಟ್ಟು 84 ಜಾನುವಾರುಗಳಿಗೆ  ₹ 14,55,000 ಪರಿಹಾರ ಧನ ನೀಡಲಾಗಿದೆ.

ಗುಡಿಬಂಡೆ ತಾಲ್ಲೂಕಿನಲ್ಲಿ ಮಾತ್ರ ಮೃತ ಎಲ್ಲ ರಾಸುಗಳಿಗೆ ರೈತರಿಗೆ ಪರಿಹಾರ ಧನ ನೀಡಲಾಗಿದೆ. ಉಳಿದ ಐದು ತಾಲ್ಲೂಕುಗಳಿಂದ 81 ರಾಸುಗಳಿಗೆ ಪರಿಹಾರ ಧನ ಬಂದಿಲ್ಲ.

2022ರ ಅಕ್ಟೋಬರ್ ಮೊದಲ ವಾರದಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಗ್ರಾಮದಲ್ಲಿ ರೋಗಕ್ಕೆ ರಾಸು ಮೃತಪಟ್ಟಿತ್ತು. ಜಿಲ್ಲೆಯಲ್ಲಿ ಚರ್ಮಗಂಟು ರೋಗಕ್ಕೆ ಜಾನುವಾರು ಬಲಿಯಾದ ಮೊದಲ ಪ್ರಕರಣ ಇದು. ನಂತರ ಒಂದೇ ವಾರದ ಅಂತರದಲ್ಲಿ ಗೌರಿಬಿದನೂರು ತಾಲ್ಲೂಕಿನಲ್ಲಿ ಎರಡು ರಾಸುಗಳು ಮೃತಪಟ್ಟವು. ಹಂತ ಹಂತವಾಗಿ ಜಿಲ್ಲೆಯಲ್ಲಿ ರೋಗ ಮತ್ತು ರೋಗಪೀಡಿತ ಗ್ರಾಮಗಳ ಸಂಖ್ಯೆ ಏರುಗತಿಯಲ್ಲಿ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.