ADVERTISEMENT

ಮೇಡಂ ಕಾಮಾ ಸದಾ ಚಿರಸ್ಮರಣೀಯರು

ಇನಮಿಂಚೆನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 14:20 IST
Last Updated 24 ಸೆಪ್ಟೆಂಬರ್ 2020, 14:20 IST
ಕಾರ್ಯಕ್ರಮದಲ್ಲಿ ಆರನೇ ತರಗತಿಯ ವಿದ್ಯಾರ್ಥಿನಿ ಚಂದ್ರಿಕಾ ಮೇಡಂ ಕಾಮಾ ವೇಷ ಧರಿಸಿ ಗಮನ ಸೆಳೆದಳು.
ಕಾರ್ಯಕ್ರಮದಲ್ಲಿ ಆರನೇ ತರಗತಿಯ ವಿದ್ಯಾರ್ಥಿನಿ ಚಂದ್ರಿಕಾ ಮೇಡಂ ಕಾಮಾ ವೇಷ ಧರಿಸಿ ಗಮನ ಸೆಳೆದಳು.   

ಚಿಕ್ಕಬಳ್ಳಾಪುರ: ‘ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿಮಹಿಳಾ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಧೀರ ಪರಂಪರೆಗೆ ನಾಂದಿ ಹಾಡಿದ ಮೇಡಂ ಭಿಕಾಜಿ ರುಸ್ತುಂ ಕಾಮಾ ಅವರು ಇಂದಿನ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು’ ಎಂದು ತಾಲ್ಲೂಕಿನ ಇನಮಿಂಚೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುಶೀಲಾ ಮಂಜುನಾಥ್ ಹೇಳಿದರು.

ಶಾಲೆಯ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಭಾರತದ ತ್ರಿವರ್ಣ ಧ್ವಜದ ರೂವಾರಿ ಮೇಡಂ ಕಾಮಾ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮೇಡಂ ಕಾಮಾ ಅವರು 1861ರಲ್ಲಿ ಸೆಪ್ಟೆಂಬರ್ 24ರಂದು ಮುಂಬೈನಲ್ಲಿ ಪಾರಸಿ ಸಮುದಾಯದ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದರು. ಎಳೆಯ ವಯಸ್ಸಿನಿಂದಲೇ ಸ್ವಾತಂತ್ರ್ಯ ಹೋರಾಟದಲ್ಲಿ ಆಸಕ್ತಿ ತಳೆದು, ದೇಶ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡ ಕಾಮಾ ಅವರು ತಮ್ಮ ಅವಿರತ ದೇಶ ಸೇವೆಗಾಗಿ ಭಾರತದ ಕ್ರಾಂತಿ ತಾಯಿ ಎಂದೇ ಖ್ಯಾತಿ ಗಳಿಸಿದ್ದರು’ ಎಂದು ತಿಳಿಸಿದರು.

ADVERTISEMENT

‘1907ರಲ್ಲಿ ಜರ್ಮನಿಯ ಸ್ಟುಟ್‌ಗಾರ್ಟ್‌ನಲ್ಲಿ ನಡೆದ ಎರಡನೆಯ ಅಂತರರಾಷ್ಟ್ರೀಯ ಸಮ್ಮೇಳನದ ಜಾಗತಿಕ ವೇದಿಕೆಯಲ್ಲಿ ಭಾರತದ ಸ್ವಾತಂತ್ರ್ಯದ ಪ್ರಶ್ನೆಯನ್ನು ಮಂಡಿಸಿದ ಪ್ರಥಮ ಮಹಿಳೆ ಮೇಡಂ ಕಾಮಾ. ಆ ಸಭೆಯಲ್ಲಿ ಲೆನಿನ್ ಮತ್ತು ಕ್ಲಾರಾ ಜೆಟ್ಕಿನ್ ಕೂಡ ಭಾಗವಹಿಸಿದ್ದರು. ಆಗ, ಮೇಡಂ ಕಾಮಾ ಅವರು ನಮ್ಮ ತ್ರಿವರ್ಣಧ್ವಜ ಮೇಲೇರಿಸಿ ಸ್ಫೂರ್ತಿದಾಯಕವಾಗಿ ಆಡಿದ ಮಾತುಗಳು ಅವರೊಳಗಿನ ದಿಟ್ಟತನ ಪ್ರದರ್ಶಿಸಿದ್ದವು’ ಎಂದು ತಿಳಿಸಿದರು.

‘ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಧ್ರುವತಾರೆಯಾಗಿ ಮೆರೆದ ಮಹಿಳೆಯರಲ್ಲಿ ಒಬ್ಬರಾದ ಮೇಡಂ ಕಾಮಾ ಭಾರತ ಧ್ವಜ ವಿನ್ಯಾಸಗೊಳಿಸಿ ಸ್ವಾತಂತ್ರ ಹೋರಾಟಕ್ಕೊಂದು ಅಸ್ಮಿತೆಯನ್ನು ರೂಪಿಸಿದ ಕಾರಣಕ್ಕೆ ಸದಾ ಚಿರಸ್ಮರಣೀಯರು’ ಎಂದರು. ಮುಖ್ಯ ಶಿಕ್ಷಕಿ ವನಜಾಕ್ಷಿ, ಸಹ ಶಿಕ್ಷಕಿ ಭಾರತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.