ಚೇಳೂರು (ಬಾಗೇಪಲ್ಲಿ): ಕರ್ನಾಟಕ ನೀರಾವರಿ ವೇದಿಕೆ ಅಧ್ಯಕ್ಷ ಡಾ.ಮಧು ಸೀತಪ್ಪ ಅವರ ಅಂತ್ಯಕ್ರಿಯೆ ಚೇಳೂರು ತಾಲ್ಲೂಕಿನ ಚಿಲಕಲನೇರ್ಪು ಗ್ರಾಮದ ಅವರ ತೋಟದಲ್ಲಿ ಭಾನುವಾರ ನಡೆಯಿತು.
ದೇವನಹಳ್ಳಿಯ ಆಸ್ಪತ್ರೆಯೊಂದರಲ್ಲಿ ಮಧು ಸೀತಪ್ಪ ಅವರ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ಭಾನುವಾರ ದೇವನಹಳ್ಳಿ, ಚಿಕ್ಕಬಳ್ಳಾಪುರದ ಮೂಲಕ ಬಾಗೇಪಲ್ಲಿ ಪಟ್ಟಣಕ್ಕೆ ಪಾರ್ಥಿವ ಶರೀರವನ್ನು ತರಲಾಯಿತು.
ಬಾಗೇಪಲ್ಲಿಯ ಜಿ.ವಿ.ಶ್ರೀರಾಮರೆಡ್ಡಿ ಪುತ್ಥಳಿ ಮುಂದೆ ಕೆಲ ಕಾಲ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ ಶಿವಪುರದ ತೋಟದ ಮನೆಗೆ ಕೊಂಡೊಯ್ಯಲಾಯಿತು.
ಈ ವೇಳೆ ತೋಟದ ಮನೆಯ ಸುತ್ತಮುತ್ತಲಿನ ಶಿವಪುರ, ಯರ್ರಗುಡಿ, ಬೆಸ್ತಲಪಲ್ಲಿ, ಬಿಳ್ಳೂರು ಸೇರಿದಂತೆ ವಿವಿಧ ಗ್ರಾಮಗಳ ಕೂಲಿಕಾರ್ಮಿಕರು ಮಧುಸೀತಪ್ಪ ಅವರ ಪಾರ್ಥಿವ ಶರೀರ ನೋಡಿ ಕಣ್ಣೀರು ಸುರಿಸಿದರು. ಮಕ್ಕಳ ವಿದ್ಯಾಭ್ಯಾಸಕ್ಕೆ, ಆರೋಗ್ಯಕ್ಕೆ ಧನ ಸಹಾಯ ಮಾಡಿದ್ದರು ಎಂದು ಕೂಲಿಕಾರ್ಮಿಕರು ಭಾವುಕರಾದರು.
ನಂತರ ಚೇಳೂರು ಮಾರ್ಗದ ಮೂಲಕ ಚಿಲಕಲನೇರ್ಪು ಗ್ರಾಮದ ತೋಟದ ಮನೆವರೆಗೂ ಮಧುಸೀತಪ್ಪರವರ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಯಿತು. ಮಧುಸೀತಪ್ಪ ಅವರ ಪುತ್ರ ಅಯನ್ ಮಧುಸೂದನ್ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಮಧುಸೀತಪ್ಪ ಪತ್ನಿ ಶೆಲ್ಲಿಅಗರ್ವಾಲ್ ಹಾಗೂ ಕುಟುಂಬಸ್ಥರು ಭಾಗಿಯಾದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ, ಮಳ್ಳೂರು ಶಿವಣ್ಣ, ಮಂಚನಬಲೆ ಶ್ರೀನಿವಾಸ್, ಸೊಣ್ಣೇಗೌಡ, ಹರೀಶ್, ಮಹಮದ್ ಎಸ್.ನೂರುಲ್ಲಾ, ಚಲಪತಿ, ಜಿ.ಎಂ.ರಾಮಕೃಷ್ಣಪ್ಪ, ಜೆಡಿಎಸ್ ಮುಖಂಡ ಸೂರ್ಯನಾರಾಯಣರೆಡ್ಡಿ, ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ, ತಾಲ್ಲೂಕು ಕಾರ್ಯದರ್ಶಿಗಳಾದ ಎಂ.ಎನ್.ರಘುರಾಮರೆಡ್ಡಿ, ಬೈರೆಡ್ಡಿ, ವಕೀಲ ಶ್ರೀನಾಥ್, ಸಿಪಿಐ ಮುಖಂಡರಾದ ಮಂಜೂರ್ ಅಹಮದ್, ಚಲಪತಿ, ನೀರಾವರಿ ಹೋರಾಟಗಾರ ಯಲ್ಲಪ್ಪರೆಡ್ಡಿ, ನಾರೇಮದ್ದೇಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉತ್ತನ್ನ ಮತ್ತಿತರರು ಪಾಲ್ಗೊಂಡಿದ್ದರು.
ಬುಧವಾರ ರಾತ್ರಿ ಶಿವಪುರದ ತಮ್ಮ ತೋಟದ ಮನೆಯಲ್ಲಿ ಮಧು ಸೀತಪ್ಪ ಮೃತಪಟ್ಟಿದ್ದರು. ಪತ್ನಿ, ಪುತ್ರ ಲಂಡನ್‍ನಿಂದ ಬರಬೇಕಾದ ಕಾರಣ ಅಂತ್ಯಕ್ರಿಯೆ ಭಾನುವಾರ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.