ADVERTISEMENT

ಒಳಮೀಸಲಾತಿ ವಿಳಂಬ: ಡಿ.ಸಿ ಕಚೇರಿ ಎದುರು ಅರೆಬೆತ್ತಲೆ ಪ್ರತಿಭಟನೆ

ರಾಜ್ಯ ಸರ್ಕಾರದ ವಿರುದ್ಧ ಮಾದಿಗ ಸಮುದಾಯ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 4:59 IST
Last Updated 2 ಆಗಸ್ಟ್ 2025, 4:59 IST
ಒಳಮೀಸಲಾತಿ ಜಾರಿ ವಿಚಾರವಾಗಿ ರಾಜ್ಯ ಸರ್ಕಾರ ವಿಳಂಬ ನೀತಿ ತೋರುತ್ತಿದೆ ಎಂದು ಆರೋಪಿಸಿ ಮಾದಿಗ ಮಹಾಸಭಾ ಮತ್ತು ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅರೆ ಬೆತ್ತಲೆ ಪ್ರತಿಭಟನಾ ನಡೆಸಿದರು 
ಒಳಮೀಸಲಾತಿ ಜಾರಿ ವಿಚಾರವಾಗಿ ರಾಜ್ಯ ಸರ್ಕಾರ ವಿಳಂಬ ನೀತಿ ತೋರುತ್ತಿದೆ ಎಂದು ಆರೋಪಿಸಿ ಮಾದಿಗ ಮಹಾಸಭಾ ಮತ್ತು ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅರೆ ಬೆತ್ತಲೆ ಪ್ರತಿಭಟನಾ ನಡೆಸಿದರು    

ಚಿಕ್ಕಬಳ್ಳಾಪುರ: ಒಳಮೀಸಲಾತಿ ಜಾರಿ ವಿಚಾರವಾಗಿ ರಾಜ್ಯ ಸರ್ಕಾರ ವಿಳಂಬ ನೀತಿ ತೋರುತ್ತಿದೆ. ತಕ್ಷಣವೇ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಮಾದಿಗ ಮಹಾಸಭಾ ಮತ್ತು ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಮತ್ತು ಮುಖಂಡರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದರು. 

ಜಿಲ್ಲಾಡಳಿತ ಭವನದ ಮುಂದೆ ಜಮಾವಣೆಗೊಂಡ ಕಾರ್ಯಕರ್ತರು ಬೇಕೇ ಬೇಕು ನ್ಯಾಯ ಬೇಕು, ಒಳ ಮೀಸಲಾತಿ ಹೋರಾಟಕ್ಕೆ ಜಯವಾಗಲಿ, ಒಳಮೀಸಲಾತಿ ಜಾರಿಗೊಳಿಸದ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಿದರು. 

ಪ್ರತಿಭಟನಕಾರರು ಜಿಲ್ಲಾಡಳಿತ ಭವನದ ಮೆಟ್ಟಿಲುಗಳ ಮುಂಭಾಗದಲ್ಲಿ ಪ್ರತಿಭಟನೆಗೆ ಕುಳಿತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ಸಹ ನಡೆಯಿತು. 

ADVERTISEMENT

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಬಾಲಕುಂಟಹಳ್ಳಿ ಗಂಗಾಧರ್ ಮಾತನಾಡಿ, ಮಂದಕೃಷ್ಣ ಮಾದಿಗ, ಎ.ನಾರಾಯಣಸ್ವಾಮಿ ಸೇರಿದಂತೆ ಮಾದಿಗ ಸಮಾಜದ ಎಲ್ಲ ಸಚಿವರು ಮತ್ತು ಶಾಸಕರು ಒಳಮೀಸಲಾತಿ ಹೋರಾಟ ಬೆಂಬಲಿಸಿದ್ದಾರೆ. ಒಳಮೀಸಲಾತಿ ವರ್ಗೀಕರಣ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಹೀಗೆ ಆದೇಶಿಸಿ ಒಂದು ವರ್ಷವಾದರೂ ರಾಜ್ಯದಲ್ಲಿ ಒಳಮೀಸಲಾತಿ ಜಾರಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳು ಒಳಮೀಸಲಾತಿ ಜಾರಿಗೊಳಿಸಿವೆ. ಅಹಿಂದ ನಾಯಕ ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯ ಮಾತ್ರ ಒಳಮೀಸಲಾತಿ ಜಾರಿಯ ವಿಚಾರವಾಗಿ ವಿಳಂಬ ಮಾಡುತ್ತಿದ್ದಾರೆ ಎಂದರು.

ಒಂದು ವರ್ಷವಾದರೂ ರಾಜ್ಯ ಸರ್ಕಾರಕ್ಕೆ ಒಳಮೀಸಲಾತಿ ಜಾರಿಗೊಳಿಸಲು ಸಾಧ್ಯವಾಗಿಲ್ಲ. ಈ ಕೂಡಲೇ ಈ ಬಗ್ಗೆ ಆದೇಶ ಮಾಡದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದರು.

ಈಗಾಗಲೇ 30 ವರ್ಷಗಳಿಗಿಂತಲೂ ಹೆಚ್ಚಿನ ಸಮಯದಿಂದ ಹೋರಾಟ ನಡೆಸಿದ್ದೇವೆ. ಪ್ರಕರಣಗಳು ದಾಖಲಾಗಿವೆ. ಜೈಲಿಗೂ ಹೋಗಿದ್ದೇವೆ. ಮತ್ತೆ ನಾವು ಹೋರಾಟಕ್ಕೆ ಇಳಿದರೆ ಅದು ಯಾವ ಸ್ವರೂಪದಲ್ಲಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸರ್ಕಾರ ಇದಕ್ಕೆ ಅದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು.

ಅಂಬೇಡ್ಕರ್ ಸೇನೆಯ ನಾರಾಯಣಸ್ವಾಮಿ, ಈ ಧರೆ ಪ್ರಕಾಶ್, ನಾಗಪ್ಪ, ಸಿ.ಎಂ.ಮಂಜುನಾಥ್, ಎಸ್‌.ಎನ್.ರಮೇಶ್, ಮೂರ್ತಿ, ಸಾವಿತ್ರಮ್ಮ, ಕಾಳಪ್ಪ, ಪಿಳ್ಳಾಂಜನಪ್ಪ, ಸಾದಲಿ ಮಂಜುನಾಥ್, ವೆಂಕಟರಮಣಪ್ಪ, ರಮಣ್ ಅಕೇಶ್, ತಿರುಮಳಪ್ಪ, ಕದಿರಪ್ಪ, ಪರಮೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ

ಅರೆ ಬೆತ್ತಲೆ ಪ್ರತಿಭಟನೆಯಲ್ಲಿ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಅವರಿಗೆ ನಮ್ಮ ಸಮುದಾಯದ ಬಗ್ಗೆ ಕರುಣೆ ಬರುತ್ತಿಲ್ಲ. ಆ.4ರಂದು ನಾಗಮೋಹನ ದಾಸ್ ಅವರು ಸರ್ಕಾರಕ್ಕೆ ವರದಿ ಕೊಡುತ್ತೇವೆ ಎಂದಿದ್ದಾರೆ. ಸರ್ಕಾರ ವರದಿ ಪಡೆದು ತಕ್ಷಣವೇ ಆದೇಶ ಮಾಡಬೇಕು. ಸಿದ್ದರಾಮಯ್ಯ ಅವರು ಸಬೂಬು ಹೇಳಬಾರದು ಎಂದು ಬಾಲಕುಂಟಹಳ್ಳಿ ಗಂಗಾಧರ್ ಒತ್ತಾಯಿಸಿದರು.

ಭವನಕ್ಕೆ ನುಗ್ಗಲು ಯತ್ನ

ಹೋರಾಟಗಾರರು ಜಿಲ್ಲಾಡಳಿತ ಭವನಕ್ಕೆ ನುಗ್ಗಲು ಯತ್ನಿಸಿದರು. ಭವನದ ಮುಖ್ಯದ್ವಾರ ಪ್ರವೇಶಿಸುವಾಗ ಪೊಲೀಸರು ಅಡ್ಡ ನಿಂತರು. ಈ ವೇಳೆ ಒಳ ಬಂದವರನ್ನು ಬಲವಂತವಾಗಿ ಹೊರಗೆ ಎಳೆದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಕಾರರು ನಡುವೆ ವಾಗ್ವಾದ ನಡೆದವು. ತಕ್ಷಣವೇ ಮುಖ್ಯದ್ವಾರದ ಬಾಗಿಲು ಬಂದ್ ಮಾಡಲಾಯಿತು. ಆಗಲೂ ರಾಜ್ಯ ಸರ್ಕಾರದ ವಿರುದ್ಧ ಮುಖಂಡರು ತೀವ್ರವಾಗಿ ವಾಗ್ದಾಳಿ ನಡೆಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.