ADVERTISEMENT

ಮಂಚೇನಹಳ್ಳಿ | ಗಣಿಗಾರಿಕೆ ಗಲಾಟೆ; ರೈತನ ತೊಡೆಗೆ ಗುಂಡೇಟು

ಮಂಚೇನಹಳ್ಳಿಯಲ್ಲಿ ದಾರಿ ವಿಚಾರವಾಗಿ ಘರ್ಷಣೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 23:30 IST
Last Updated 23 ಏಪ್ರಿಲ್ 2025, 23:30 IST
ಮಂಚೇನಹಳ್ಳಿ ತಾಲ್ಲೂಕಿನ ಕನಗಾನಕೊಪ್ಪ ಗ್ರಾಮದ ಬಳಿ ರೈತ ರವಿಕುಮಾರ್ ಮೇಲೆ ಗುಂಡು ಹಾರಿಸಿದ ಸಕಲೇಶ್
ಮಂಚೇನಹಳ್ಳಿ ತಾಲ್ಲೂಕಿನ ಕನಗಾನಕೊಪ್ಪ ಗ್ರಾಮದ ಬಳಿ ರೈತ ರವಿಕುಮಾರ್ ಮೇಲೆ ಗುಂಡು ಹಾರಿಸಿದ ಸಕಲೇಶ್   

ಮಂಚೇನಹಳ್ಳಿ (ಚಿಕ್ಕಬಳ್ಳಾಪುರ): ತಾಲ್ಲೂಕಿನ ಕನಗಾನಕೊಪ್ಪ ಸಮೀಪದ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ಲಾರಿಗಳ ಸಂಚಾರಕ್ಕೆ ದಾರಿ ಮಾಡುವ ವಿಚಾರವಾಗಿ ಬುಧವಾರ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ರೈತರೊಬ್ಬರ ಮೇಲೆ ಗುಂಡು ಹಾರಿಸಲಾಗಿದೆ. 

ಸಕಲೇಶ್ ಎಂಬಾತ ಸ್ಥಳೀಯ ರೈತ ರವಿಕುಮಾರ್ ಮೇಲೆ ಗುಂಡು ಹಾರಿಸಿದ್ದಾರೆ. ಸಕಲೇಶ್, ವಿಧಾನ ಪರಿಷತ್ ಮಾಜಿ ಸದಸ್ಯ, ಬಿಜೆಪಿ ಮುಖಂಡ ವೈ.ಎ.ನಾರಾಯಣಸ್ವಾಮಿ ಅವರ ಆಪ್ತ ಎನ್ನಲಾಗಿದೆ. ಉಷಾ ನಾರಾಯಣಸ್ವಾಮಿ ಎಂಬುವವರ ಹೆಸರಿನಲ್ಲಿ ಇಲ್ಲಿ ಗಣಿಗಾರಿಕೆಗೆ ಪರವಾನಗಿ ಪಡೆಯಲಾಗಿದೆ. ದಾಳಿಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಬುಧವಾರ ಸಂಜೆ ಮಂಚೇನಹಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು.

ಏನಿದು ಘಟನೆ: ಗ್ರಾಮದ ಸಮೀಪ ಕಲ್ಲು ಗಣಿಗಾರಿಕೆಗೆ ರೈತರ ವಿರೋಧ ಇತ್ತು. ಗಣಿಗಾರಿಕೆ ಲಾರಿಗಳು ಸಂಚರಿಸಲು ರಸ್ತೆ ಮಾಡಲು ಗಣಿ ಮಾಲೀಕರು ಮುಂದಾಗಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿ ಫೆಬ್ರುವರಿಯಲ್ಲಿ ಮಂಚೇನಹಳ್ಳಿಯಲ್ಲಿ ರೈತ ಸಂಘ, ಮಂಚೇನಹಳ್ಳಿ ತಾಲ್ಲೂಕು ಪರಿಸರ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಪ್ರತಿಭಟಿಸಿದ್ದರು.

ADVERTISEMENT

‘ಬೆಟ್ಟದ ತಪ್ಪಲಿನಲ್ಲಿ ಮುನೇಶ್ವರ ಗುಡಿ, ತಿಮ್ಮರಾಯನಗುಡಿ ಇದೆ. ಸ್ವಚ್ಛಗಾಳಿ, ನೀರು, ಮೇವು ನೀಡುತ್ತಿರುವ ನಮ್ಮ ಊರಿನ ಬೆಟ್ಟ ಗುಡ್ಡಗಳಲ್ಲಿ ಗಣಿಗಾರಿಕೆ ಮಾಡಲು ಬಿಡುವುದಿಲ್ಲ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದ್ದರು. 

ಇದೇ ವಿಚಾರವಾಗಿ ಈಚೆಗೆ ವೃತ್ತ ನಿರೀಕ್ಷಕ ಕೆ.ಪಿ.ಸತ್ಯನಾರಾಯಣ್, ಗ್ರಾಮಸ್ಥರು ಮತ್ತು ಗಣಿಗಾರಿಕೆಗೆ ಸಂಬಂಧಿಸಿದವರ ಜತೆ ಸಭೆ ಕೂಡ ನಡೆಸಿದ್ದರು.

ಬುಧವಾರ ಸಕಲೇಶ್, ಜೆಸಿಬಿ ಮತ್ತು ಟ್ರ್ಯಾಕ್ಟರ್‌ಗಳನ್ನು ತಂದು ರಸ್ತೆ ನಿರ್ಮಿಸಲು ಮುಂದಾಗಿದ್ದಾರೆ. ಅವರ ಜತೆ 40ಕ್ಕೂ ಹೆಚ್ಚು ಜನರನ್ನು ಕರೆ ತಂದಿದ್ದರು. ರಸ್ತೆ ನಿರ್ಮಾಣಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಆಗ ಸಕಲೇಶ್, ರಿವಾಲ್ವರ್‌ನಿಂದ ರವಿಕುಮಾರ್‌ ಮೇಲೆ ಗುಂಡು ಹಾರಿಸಿದ್ದು ಅವರ ಎಡಗಾಲಿನ ತೊಡೆಗೆ ತಗುಲಿದೆ.

‘ಬರ್ರೊ ಯಾರು ಬರುತ್ತೀರಾ ಬರ್ರೊ’ ಕಿರುಚುತ್ತಾ ಓಡಾಡುವ ದೃಶ್ಯಗಳ ವಿಡಿಯೊ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. 

‘ಗ್ರಾಮಸ್ಥರು ದಾಳಿ ಮಾಡಿದ ಕಾರಣ ಗುಂಡು ಹಾರಿಸಿದೆವು’ ಎಂದು ಗಣಿಗಾರಿಕೆಗೆ ಮುಂದಾಗಿದ್ದವರ ಕಡೆಯವರು ತಿಳಿಸಿದರೆ,‘ಇದೆಲ್ಲವೂ ಸುಳ್ಳು. ಯಾರ ಮೇಲೂ ದಾಳಿ ಮಾಡಿಲ್ಲ. ಉದ್ದೇಶಪೂರ್ವಕವಾಗಿ ಗುಂಡು ಹಾರಿಸಿದ್ದಾರೆ’ ಎಂದು ಗ್ರಾಮಸ್ಥರು ದೂರಿದ್ದಾರೆ.

ರವಿಕುಮಾರ್, ಸಕಲೇಶ್ ಮತ್ತಿತರರ ವಿರುದ್ಧ ಮಂಚೇನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ರಾತ್ರಿವರೆಗೂ ಗೌರಿಬಿದನೂರು ಮತ್ತು ಮಂಚೇನಹಳ್ಳಿ ಪೊಲೀಸರು ಸ್ಥಳದಲ್ಲಿ ಇದ್ದರು. 

ಆರೋಪಿ ಬಂಧನ

ಗುಂಡು ಹಾರಿಸಿದ ಸಕಲೇಶ್ ಅಲ್ಲಿಂದ ಪರಾರಿಯಾಗಿದ್ದ. ವಿಶೇಷ ತಂಡ ರಚಿಸಿ ಬಂಧಿಸಿದ್ದೇವೆ. ಗ್ರಾಮಸ್ಥರ ಜತೆಯೂ ಮಾತುಕತೆ ನಡೆಸಿದ್ದೇವೆ. ಈ ಬಗ್ಗೆ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.